ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ದೇಹದ ತೂಕ ಹಾಗೂ ಲುಕ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಟ್ರೋಲ್‌ಗಳ ನಡುವೆಯೇ ನಟ ಸಲ್ಮಾನ್ ಖಾನ್ ಅವರ ಹೇಳಿಕೆ ಇದೀಗ ಗಮನ ಸೆಳೆದಿದೆ. ವ್ಯಕ್ತಿಯ ವಯಸ್ಸು, ತೂಕ, ನೋಟ, ಕುಟುಂಬ, ವೃತ್ತಿಜೀವನ ಅಥವಾ ತಾಯ್ತನವನ್ನು ಮುಂದಿಟ್ಟುಕೊಂಡು ಟ್ರೋಲ್ ಮಾಡುವವರ ವಿರುದ್ಧ ಸಲ್ಮಾನ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಛಾಯಾಚಿತ್ರಗಳನ್ನು ಅವರ ಅನುಮತಿಯಿಲ್ಲದೆ ಆಕ್ಷೇಪಾರ್ಹ ರೀತಿಯಲ್ಲಿ ಸೆರೆಹಿಡಿಯುವ ಪಪರಾಜಿಗಳಿಗೂ ಅವರು ಎಚ್ಚರಿಕೆ ನೀಡಿದ್ದಾರೆ.
ಸಲ್ಮಾನ್ ಖಾನ್ ನಿರೂಪಣೆಯಲ್ಲಿರುವ ‘ಬಿಗ್ ಬಾಸ್ 20’ರ ‘ವೀಕೆಂಡ್ ಕಾ ವಾರ್’ ಸಂಚಿಕೆಯ ಕೆಲವು ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋಗಳಲ್ಲಿ ಸಲ್ಮಾನ್ ಖಾನ್ ಸ್ಪರ್ಧಿಗಳೊಂದಿಗೆ ಟ್ರೋಲಿಂಗ್, ಏಜ್ ಶೇಮಿಂಗ್ ಹಾಗೂ ಬಾಡಿ ಶೇಮಿಂಗ್ ಕುರಿತು ಮಾತನಾಡುತ್ತಿರುವುದು ಕಂಡುಬಂದಿದೆ. ಈ ಸಂದರ್ಭದಲ್ಲಿ ಅವರು ವ್ಯಕ್ತಿಯ ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಸಾರ್ವಜನಿಕವಾಗಿ ಅವಹೇಳನ ಮಾಡುವ ಪ್ರವೃತ್ತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಯಸ್ಸಿನ ವಿಚಾರವನ್ನು ಮುಂದಿಟ್ಟುಕೊಂಡು ಒಬ್ಬರನ್ನು ಟ್ರೋಲ್ ಮಾಡುವ ಅಗತ್ಯವೇನು ಎಂದು ಸಲ್ಮಾನ್ ಪ್ರಶ್ನಿಸಿದ್ದಾರೆ. ಯಾರೊಬ್ಬರ ತೂಕ, ನೋಟ, ಕುಟುಂಬ, ನಗು, ವೃತ್ತಿಜೀವನದ ವೈಫಲ್ಯ ಅಥವಾ ತಾಯಿಯಾಗಿರುವುದನ್ನು ಆಧಾರವಾಗಿಟ್ಟುಕೊಂಡು ಅವರನ್ನು ಏಕೆ ಟೀಕಿಸಬೇಕು ಎಂಬ ಪ್ರಶ್ನೆಯನ್ನೂ ಅವರು ಕಾರ್ಯಕ್ರಮದಲ್ಲಿ ಎತ್ತಿದ್ದಾರೆ.
ಗರ್ಭಿಣಿ ಮಹಿಳೆಯರ ದೇಹದಲ್ಲಿ ಆಗುವ ಬದಲಾವಣೆಗಳನ್ನು ಟ್ರೋಲ್ ಮಾಡುವುದು ಸರಿಯಲ್ಲ ಎಂಬ ಸಂದೇಶವನ್ನು ಸಲ್ಮಾನ್ ಖಾನ್ ನೀಡಿದ್ದಾರೆ. ಗರ್ಭಾವಸ್ಥೆಯಲ್ಲಿ ಮಹಿಳೆಯರ ತೂಕ ಹೆಚ್ಚಾಗುವುದು ಸಹಜ ಪ್ರಕ್ರಿಯೆ ಎಂದು ಅವರು ಹೇಳಿದ್ದಾರೆ. ಈ ಹೇಳಿಕೆಯೇ ಇದೀಗ ಕತ್ರಿನಾ ಕೈಫ್ ವಿಚಾರದೊಂದಿಗೆ ಜೋಡಣೆಯಾಗುತ್ತಿದೆ.
ಇತ್ತೀಚೆಗೆ ತಾಯಿಯಾದ ಬಳಿಕ ಕತ್ರಿನಾ ಕೈಫ್ ಅವರ ತೂಕ ಹಾಗೂ ದೇಹದ ಬದಲಾವಣೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಟ್ರೋಲ್‌ಗಳು ಹಾಗೂ ಕಾಮೆಂಟ್‌ಗಳು ಹರಿದಾಡಿದ್ದವು. ಸಲ್ಮಾನ್ ಖಾನ್ ಕಾರ್ಯಕ್ರಮದಲ್ಲಿ ಯಾವುದೇ ವ್ಯಕ್ತಿಯ ಹೆಸರನ್ನು ನೇರವಾಗಿ ಉಲ್ಲೇಖಿಸಿಲ್ಲ. ಆದರೂ, ಅವರ ಹೇಳಿಕೆ ಕತ್ರಿನಾ ಕೈಫ್ ಅವರನ್ನು ಗುರಿಯಾಗಿಸಿಕೊಂಡು ನಡೆದಿದ್ದ ಬಾಡಿ ಶೇಮಿಂಗ್‌ಗೆ ಪರೋಕ್ಷ ಪ್ರತಿಕ್ರಿಯೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳ ಕೆಲ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.
ಟ್ರೋಲಿಂಗ್ ಕುರಿತು ಮಾತನಾಡುವ ವೇಳೆ ಸಲ್ಮಾನ್ ಖಾನ್ ಅವರ ಆಕ್ರೋಶ ಕೂಡ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಅವರು ತಮ್ಮ ಕೋಟ್ ತೆಗೆದು ಕ್ಯಾಪ್ ಕೆಳಗೆ ಎಸೆದು ಟ್ರೋಲರ್ಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ದೃಶ್ಯಗಳು ಗಮನ ಸೆಳೆದಿವೆ.
ಇದೇ ವೇಳೆ ಪೆಪರಾಜಿಗಳ ವರ್ತನೆಯ ಬಗ್ಗೆಯೂ ಸಲ್ಮಾನ್ ಖಾನ್ ಮಾತನಾಡಿದ್ದಾರೆ. ಸೆಲೆಬ್ರಿಟಿಗಳ ಅನುಮತಿಯಿಲ್ಲದೆ, ಅದರಲ್ಲೂ ಮಹಿಳೆಯರ ಛಾಯಾಚಿತ್ರಗಳನ್ನು ಹಿಂದಿನಿಂದ ಅಥವಾ ಆಕ್ಷೇಪಾರ್ಹ ರೀತಿಯಲ್ಲಿ ಸೆರೆಹಿಡಿಯುವುದರ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ವ್ಯಕ್ತಿಗಳಾಗಿದ್ದರೂ ಅವರ ವೈಯಕ್ತಿಕ ಗೌಪ್ಯತೆ ಮತ್ತು ಗೌರವಕ್ಕೆ ಮಿತಿ ಇರಬೇಕು ಎಂಬ ಸಂದೇಶವನ್ನು ಅವರು ನೀಡಿದ್ದಾರೆ.
