‘ವೃಕ್ಷಮಾತೆ’ ಸಿನಿಮಾ ತಂಡಕ್ಕೆ ಸಂಕಷ್ಟ: ಚಿತ್ರತಂಡದ ವಿರುದ್ಧ ದೂರು ನೀಡಿದ ಸಾಲುಮರದ ತಿಮ್ಮಕ್ಕ

Untitled design 2025 06 16t165112.420

ಬೆಂಗಳೂರು: ವೃಕ್ಷಮಾತೆ ಎಂದೇ ಖ್ಯಾತರಾದ ಸಾಲುಮರದ ತಿಮ್ಮಕ್ಕ ಅವರು ತಮ್ಮ ಜೀವನ ಕಥೆಯನ್ನು ಆಧರಿಸಿ ನಿರ್ಮಾಣವಾಗುತ್ತಿರುವ ಕನ್ನಡ ಚಿತ್ರದ ವಿರುದ್ಧ ದೂರು ದಾಖಲಿಸಿದ್ದಾರೆ. ಶ್ರೀಲಕ್ಷ್ಮಿವೆಂಕಟೇಶ್ವರ ಪಿಕ್ಚರ್ಸ್ ಬ್ಯಾನರ್‌ನಡಿ ತಯಾರಾಗುತ್ತಿರುವ ಈ ಚಿತ್ರಕ್ಕೆ ‘ವೃಕ್ಷಮಾತೆ’ ಎಂದು ಹೆಸರಿಡಲಾಗಿದೆ. ಆದರೆ, ತಮ್ಮ ಅನುಮತಿಯಿಲ್ಲದೆ ಚಿತ್ರೀಕರಣ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ತಿಮ್ಮಕ್ಕ, ಫಿಲಂ ಚೇಂಬರ್‌ಗೆ ಖುದ್ದು ಆಗಮಿಸಿ ದೂರು ನೀಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕುದೂರಿನಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಪೊಲೀಸರು ಚಿತ್ರತಂಡವನ್ನು ಕುದೂರು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ತಿಮ್ಮಕ್ಕ ಅವರ ಸಾಕುಮಗ ಉಮೇಶ್ ಅವರಿಂದ ಚಿತ್ರೀಕರಣಕ್ಕೆ ಯಾವುದೇ ಅನುಮತಿ ಪಡೆಯಲಾಗಿಲ್ಲ ಎಂದು ಪೊಲೀಸರು ಚಿತ್ರತಂಡಕ್ಕೆ ತಿಳಿಸಿದ್ದಾರೆ. ಈ ಘಟನೆಯಿಂದ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ.

ತಿಮ್ಮಕ್ಕ ಅವರ ಸಾಕುಮಗ ಉಮೇಶ್, ಚಿತ್ರತಂಡದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ನಮ್ಮ ಸಮ್ಮತಿಯಿಲ್ಲದೆ ಚಿತ್ರೀಕರಣ ನಡೆಸಲಾಗುತ್ತಿದೆ. ಈ ಚಿತ್ರಕ್ಕೆ ನಾವು ಅನುಮತಿ ನೀಡಿಲ್ಲ. ತಿಮ್ಮಕ್ಕ ಅವರ ಕೃತಿಯನ್ನು ಆಧರಿಸಿ ಸಿನಿಮಾ ಮಾಡುವುದಾಗಿ ಚಿತ್ರತಂಡ ಹೇಳುತ್ತಿದೆ. ಆದರೆ ಆ ಕೃತಿಯೂ ಸರಿಯಾಗಿಲ್ಲ,” ಎಂದು ಉಮೇಶ್ ತಿಳಿಸಿದ್ದಾರೆ. ಇದರ ಜೊತೆಗೆ, ಚಿತ್ರೀಕರಣದ ವೇಳೆ ಮರಗಳಿಗೆ ಹಾನಿಯಾಗುತ್ತಿದೆ ಎಂದು ಆರೋಪಿಸಿದ್ದಾರೆ. “ತಿಮ್ಮಕ್ಕ ಅವರು ಮರಗಳನ್ನು ಮಕ್ಕಳಂತೆ ಸಾಕಿದವರು. ಆದರೆ ಚಿತ್ರತಂಡ ಶೂಟಿಂಗ್‌ಗೆಂದು ಮರಗಳಿಗೆ ಕೊಡಲಿ ಹಾಕಿದೆ,” ಎಂದು ಉಮೇಶ್ ಕಿಡಿಕಾರಿದ್ದಾರೆ.

ಈ ಚಿತ್ರದಲ್ಲಿ ನೀನಾಸಂ ಅಶ್ವತ್, ಎಂಕೆ ಮಠ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ. ಆದರೆ, ತಿಮ್ಮಕ್ಕ ಮತ್ತು ಉಮೇಶ್‌ರಿಂದ ಒತ್ತಡ ಹೆಚ್ಚಾದ ಕಾರಣ, ಚಿತ್ರತಂಡ ಕಾನೂನಾತ್ಮಕ ಸಮಸ್ಯೆಯನ್ನು ಎದುರಿಸುತ್ತಿದೆ. ಈಗಾಗಲೇ ಕುದೂರು ಠಾಣೆಯಲ್ಲಿ ದೂರು ದಾಖಲಾಗಿದ್ದು, ಫಿಲಂ ಚೇಂಬರ್‌ನಲ್ಲಿ ತಿಮ್ಮಕ್ಕ ನೀಡಿರುವ ದೂರು ಚಿತ್ರತಂಡಕ್ಕೆ ಹೊಸ ಸವಾಲು ಒಡ್ಡಿದೆ.

ಚಿತ್ರತಂಡ 25 ಲಕ್ಷ ರೂಪಾಯಿ ಮತ್ತು ಇನೋವಾ ಕಾರ್ ಕೇಳಿದ್ದರು ಎಂಬ ಆರೋಪವನ್ನು ಉಮೇಶ್ ತಿರಸ್ಕರಿಸಿದ್ದಾರೆ. “ನಾವು ಯಾವುದೇ ಹಣ ಅಥವಾ ಕಾರ್ ಕೇಳಿಲ್ಲ. ಈ ಆರೋಪ ಸುಳ್ಳು. ಚಿತ್ರತಂಡದ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲಿದ್ದೇವೆ,” ಎಂದು ಉಮೇಶ್ ಸ್ಪಷ್ಟಪಡಿಸಿದ್ದಾರೆ.

ಸಾಲುಮರದ ತಿಮ್ಮಕ್ಕ ಅವರ ಜೀವನ ಕಥೆಯನ್ನ ಆಧರಿಸಿ ಈಗಾಗಲೇ ಹಲವು ನಿರ್ಮಾಪಕರು ಸಿನಿಮಾ ಮಾಡುವ ಪ್ರಯತ್ನ ಮಾಡಿದ್ದರು. “ಹಲವರು ಬಂದು ಸಿನಿಮಾ ಮಾಡುವುದಾಗಿ ಹೇಳಿದ್ದರು, ಆದರೆ ನಾವು ಬೇಡವೆಂದಿದ್ದೆ. ಈಗ ಈ ಚಿತಂಡವೂ ಒತ್ತಾಯ ಮಾಡಿದೆ,” ಎಂದು ಉಮೇಶ್ ತಿಳಿಸಿದ್ದಾರೆ.

Exit mobile version