ಮೈಸೂರು: ಭಾರತೀಯ ಸಂಗೀತ ಲೋಕದ ಅಮರ ಕಂಠಸ್ವರ, ಗಾನಕೋಗಿಲೆ, ಸ್ವರ ಸಾಮ್ರಾಜ್ಞಿ ಎಸ್. ಜಾನಕಿ ಅವರಿಗೆ ಮೈಸೂರಿನಲ್ಲಿ ಇಂದು ಕಣ್ಣೀರಿನ ವಿದಾಯ ಸಲ್ಲಿಸಲಾಯಿತು. ತಮ್ಮ ಜೀವನದ ಕೊನೆಯ ದಿನಗಳನ್ನು ಮೈಸೂರಿನಲ್ಲೇ ಕಳೆಯಬೇಕು, ಅಲ್ಲಿಯೇ ಅಂತ್ಯವಾಗಬೇಕು ಎಂಬ ಅವರ ಅಂತಿಮ ಆಸೆಯಂತೆ, ಹೆಚ್.ಡಿ.ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದ ಫಾರ್ಮ್ ಹೌಸ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಇದರೊಂದಿಗೆ ಆರು ದಶಕಗಳಿಗೂ ಹೆಚ್ಚು ಕಾಲ ಸಂಗೀತಾಭಿಮಾನಿಗಳ ಮನ ಗೆದ್ದಿದ್ದ ಗಾನಕೋಗಿಲೆಯ ಪಯಣ ಅಂತ್ಯಗೊಂಡು, ಪಂಚಭೂತಗಳಲ್ಲಿ ಲೀನರಾದರು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್. ಜಾನಕಿ ಅವರು ಶನಿವಾರ ಸಂಜೆ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಸಂಜೆ 7.30ಕ್ಕೆ ಕೊನೆಯುಸಿರೆಳೆದಿದ್ದರು. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ದೇಶದಾದ್ಯಂತ ಸಂಗೀತಾಭಿಮಾನಿಗಳು, ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದರು.
ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 3 ಗಂಟೆಯವರೆಗೆ ಸಾವಿರಾರು ಅಭಿಮಾನಿಗಳು ಸರದಿಯಲ್ಲಿ ನಿಂತು ತಮ್ಮ ನೆಚ್ಚಿನ ಗಾಯಕಿಗೆ ಅಂತಿಮ ನಮನ ಸಲ್ಲಿಸಿದರು. ಸಂಗೀತ ಕ್ಷೇತ್ರದ ಹಿರಿಯ ಕಲಾವಿದರು, ಚಿತ್ರರಂಗದ ನಟ-ನಟಿಯರು, ರಾಜಕೀಯ ನಾಯಕರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಪುಷ್ಪನಮನ ಸಲ್ಲಿಸಿ ಭಾವುಕರಾದರು. ಅನೇಕ ಅಭಿಮಾನಿಗಳು ಜಾನಕಿ ಅವರು ಹಾಡಿದ ಹಾಡುಗಳನ್ನು ಗುನುಗುತ್ತಾ ಕಣ್ಣೀರಿನ ವಿದಾಯ ಹೇಳಿದರು.
ಮಧ್ಯಾಹ್ನ 3 ಗಂಟೆ ಬಳಿಕ ಮಹಾರಾಜ ಕಾಲೇಜು ಮೈದಾನದಿಂದ ಎಸ್. ಜಾನಕಿ ಅವರ ಅಂತಿಮಯಾತ್ರೆ ಆರಂಭವಾಗಿತ್ತು. ವಿಶೇಷವಾಗಿ ಅಲಂಕರಿಸಲಾದ ವಾಹನದಲ್ಲಿ ಅವರ ಪಾರ್ಥಿವ ಶರೀರವನ್ನು ಕಣಿಯನಹುಂಡಿ ಗ್ರಾಮದ ಫಾರ್ಮ್ ಹೌಸ್‌ಗೆ ಕೊಂಡೊಯ್ಯಲಾಯಿತು. ಅಂತಿಮಯಾತ್ರೆಯುದ್ದಕ್ಕೂ ರಸ್ತೆಯ ಎರಡೂ ಬದಿಗಳಲ್ಲಿ ಸಾವಿರಾರು ಅಭಿಮಾನಿಗಳು ಸೇರಿ ಪುಷ್ಪವೃಷ್ಟಿ ಮಾಡುತ್ತಾ ತಮ್ಮ ನೆಚ್ಚಿನ ಗಾಯಕಿಗೆ ಗೌರವ ಸಲ್ಲಿಸಿದರು. “ಎಸ್. ಜಾನಕಿ ಅಮರರಾಗಲಿ” ಎಂಬ ಘೋಷಣೆಗಳು ಮೊಳಗಿದವು.
ಕಣಿಯನಹುಂಡಿ ತಲುಪಿದ ಬಳಿಕ ವೇದಪಂಡಿತ ರಮೇಶ್ ಶರ್ಮಾ ಅವರ ಮಾರ್ಗದರ್ಶನದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನಗಳು ನೆರವೇರಿದವು. ಎಸ್. ಜಾನಕಿ ಅವರ ಮೊಮ್ಮಗಳು ಅಪ್ಸರಾ ಕುಟುಂಬದ ಪರವಾಗಿ ಎಲ್ಲ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಮಂತ್ರೋಚ್ಚಾರಗಳ ನಡುವೆ ಅಂತಿಮ ಪೂಜೆಗಳು ನಡೆದ ಬಳಿಕ, ಅಪ್ಸರಾ ಅವರು ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಸಂಸ್ಕಾರದ ಪ್ರಮುಖ ವಿಧಿ ನೆರವೇರಿತು.
ಅಂತ್ಯಕ್ರಿಯೆಗೂ ಮುನ್ನ ಮೈಸೂರು ಜಿಲ್ಲಾಡಳಿತದ ವತಿಯಿಂದ ಎಸ್. ಜಾನಕಿ ಅವರಿಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ಕರ್ನಾಟಕ ಪೊಲೀಸ್ ಪಡೆ ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವ ನಮನ ಸಲ್ಲಿಸಿತು. ಅಧಿಕಾರಿಗಳು ಪುಷ್ಪಚಕ್ರ ಅರ್ಪಿಸಿ ಗೌರವ ಸೂಚಿಸಿದರು. ಸರ್ಕಾರಿ ಗೌರವದೊಂದಿಗೆ ನಡೆದ ಈ ಅಂತ್ಯಕ್ರಿಯೆ ಸಾಕ್ಷಿಯಾದ ಸಾವಿರಾರು ಅಭಿಮಾನಿಗಳು ಭಾವುಕರಾದರು.
ಐದು ದಶಕಗಳಿಗೂ ಹೆಚ್ಚು ಕಾಲ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಎಸ್. ಜಾನಕಿ, ತಮ್ಮ ವಿಶಿಷ್ಟ ಕಂಠಸಿರಿಯಿಂದ ಸಂಗೀತ ಲೋಕದಲ್ಲಿ ಅಜರಾಮರ ಸ್ಥಾನ ಪಡೆದಿದ್ದಾರೆ. ಭಾವಪೂರ್ಣ ಗಾಯನ, ಪದಗಳ ಸ್ಪಷ್ಟ ಉಚ್ಚಾರಣೆ ಹಾಗೂ ವಿಭಿನ್ನ ಭಾವಗಳನ್ನು ಕಂಠದ ಮೂಲಕ ಜೀವಂತಗೊಳಿಸುವ ಸಾಮರ್ಥ್ಯದಿಂದ ಅವರು ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದರು.
