ರಿಷಬ್ ಶಿವಾಜಿಯಾಗಿ ಅಬ್ಬರಿಸಲು ಸಜ್ಜು; 2ಭಾಗಗಳಲ್ಲಿ ಬರಲಿದೆ ಮಹಾಕಾವ್ಯ

Untitled design (53)

ಕಾಂತಾರ ಸಿನಿಮಾ ಮೂಲಕ ಜಾಗತಿಕ ಮಟ್ಟದಲ್ಲಿ ಸೌಂಡ್ ಮಾಡಿ, ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರ ಐತಿಹಾಸಿಕ ಚಿತ್ರ ‘ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರತಂಡದಿಂದ ಈಗ ಧಮಾಕಾ ಅಪ್‌ಡೇಟ್‌ಗಳು ಹೊರಬಿದ್ದಿವೆ. ಈ ಚಿತ್ರದ ತಂತ್ರಜ್ಞರ ತಂಡಕ್ಕೆ ಈಗ ದೇಶದ ಇಬ್ಬರು ದೈತ್ಯ ಪ್ರತಿಭೆಗಳು ಎಂಟ್ರಿ ಕೊಟ್ಟಿದ್ದಾರೆ. ಹಾಗಾದ್ರೆ ಈ ಬಿಗ್ ಪ್ರಾಜೆಕ್ಟ್‌ನ ಅಸಲಿ ಕಥೆ ಏನು?

ಕಾಂತಾರ ಸಿನಿಮಾ ಮೂಲಕ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿಯವರ ಮುಂಬರುವ ಐತಿಹಾಸಿಕ ಬೃಹತ್ ಸಿನಿಮಾ ‘ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರತಂಡದಿಂದ ಹೊಸದೊಂದು ಭರ್ಜರಿ ಸುದ್ದಿ ಹೊರಬಿದ್ದಿದೆ. ಈಗಾಗಲೇ ಭಾರೀ ನಿರೀಕ್ಷೆ ಸೃಷ್ಟಿಸಿರುವ ಈ ಚಿತ್ರದ ತಂತ್ರಜ್ಞರ ತಂಡಕ್ಕೆ ಭಾರತೀಯ ಚಿತ್ರರಂಗದ ಇಬ್ಬರು ಮಹಾನ್ ಪ್ರತಿಭೆಗಳು ಸೇರಿಕೊಂಡಿದ್ದಾರೆ. ಅವರು ಅಂತಿಂಥವರಲ್ಲ, ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದಿರುವ ದಿಗ್ಗಜರಾಗಿದ್ದು, ಇವರ ಆಗಮನದಿಂದ ಚಿತ್ರಕ್ಕೆ ಈಗ ಆನೆ ಬಲ ಬಂದಂತಾಗಿದೆ.

ಹೌದು, ಈ ಸಿನಿಮಾಗೆ ನ್ಯಾಷನಲ್ ಅವಾರ್ಡ್ ವಿನ್ನರ್ ಅಮಿತ್ ತ್ರಿವೇದಿ ಸಂಗೀತ ನೀಡಲಿದ್ದು, ದೇವ್ ಡಿ, ಕ್ವೀನ್, ಪದ್ಮಾವತ್ ಮತ್ತು ಇತ್ತೀಚಿನ ಖಾಲಾ ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅದ್ಭುತ ಮೆಲೋಡಿ ಹಾಗೂ ಕ್ಲಾಸಿಕಲ್ ಹಿಟ್‌ಗಳನ್ನು ನೀಡಿದ ಹೆಗ್ಗಳಿಕೆ ಇವರದ್ದಾಗಿದೆ. ಇವರ ಜೊತೆ ಕೈಜೋಡಿಸಿರುವ ಮತ್ತೊಬ್ಬ ರಾಷ್ಟ್ರ ಪ್ರಶಸ್ತಿ ವಿಜೇತ ಮಹಾನ್ ಸಾಹಿತಿ ಪ್ರಸೂನ್ ಜೋಶಿ ಚಿತ್ರದ ಹಾಡುಗಳನ್ನು ಬರೆಯಲಿದ್ದಾರೆ. ತಾರೆ ಜಮೀನ್ ಪರ್, ಭಾಗ್ ಮಿಲ್ಖಾ ಭಾಗ್ ಮತ್ತು ರಂಗ್ ದೇ ಬಸಂತಿಯಂತಹ ಐತಿಹಾಸಿಕ ಹಾಗೂ ದೇಶಭಕ್ತಿಯ ಚಿತ್ರಗಳಿಗೆ ತಮ್ಮ ಅದ್ಭುತ ಸಾಹಿತ್ಯದಿಂದ ಪ್ರಾಣ ತುಂಬಿದ್ದ ಪ್ರಸೂನ್ ಜೋಶಿ, ಈಗ ಶಿವಾಜಿ ಮಹಾರಾಜರ ವೀರಗಾಥೆಗೆ ಸಾಹಿತ್ಯದ ತಡ್ಕಾ ನೀಡಲಿದ್ದಾರೆ. ಪ್ರೀತಮ್ ಅವರ ಮುಖ್ಯವಾಹಿನಿಯ ಚಿತ್ರಗಳಿಂದ ವಿರಾಮ ಪಡೆದ ನಂತರ, ಅಮಿತ್ ತ್ರಿವೇದಿ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರದ ಬೃಹತ್ ಸಂಗೀತ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಈ ಸಿನಿಮಾದ ಅಸಲಿ ಹೈಲೈಟ್ ಇರೋದೇ ನಮ್ಮ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯವರ ಪಾತ್ರದಲ್ಲಿ. ಭಾರತದ ಶ್ರೇಷ್ಠ ಹಿಂದೂ ಸಾಮ್ರಾಜ್ಯದ ವೀರ ಯೋಧ ಛತ್ರಪತಿ ಶಿವಾಜಿ ಮಹಾರಾಜರ ಪಾತ್ರಕ್ಕೆ ಜೀವ ತುಂಬಲು ರಿಷಬ್ ಶೆಟ್ಟಿ ಸಖತ್ ವರ್ಕೌಟ್ ಮಾಡುತ್ತಿದ್ದಾರೆ. ಶಿವಾಜಿ ಮಹಾರಾಜರ ಕತ್ತಿವರಸೆ, ಕುದುರೆ ಸವಾರಿ ಹಾಗೂ ಅಂದಿನ ಕಾಲದ ಬಾಡಿ ಲಾಂಗ್ವೇಜ್ ಅನ್ನು ಮೈಗೂಡಿಸಿಕೊಳ್ಳಲು ರಿಷಬ್ ಶೆಟ್ಟಿ ಭರ್ಜರಿ ತರಬೇತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಕರಾವಳಿ ಭಾಗದ ದೈವಿಕ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ್ದ ರಿಷಬ್, ಈಗ ಮರಾಠಾ ಸಾಮ್ರಾಜ್ಯದ ಅಪ್ರತಿಮ ಇತಿಹಾಸವನ್ನು ತೆರೆಮೇಲೆ ತರಲು ರೆಡಿಯಾಗುತ್ತಿರುವುದು ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದೆ.

ಸಂದೀಪ್ ಸಿಂಗ್ ನಿರ್ದೇಶನದ ಈ ಐತಿಹಾಸಿಕ ಬೃಹತ್ ಚಿತ್ರವು ಕೇವಲ ಒಂದು ಭಾಗಕ್ಕೆ ಸೀಮಿತವಾಗಿಲ್ಲ, ಬದಲಿಗೆ ಭವ್ಯವಾದ ಎರಡು ಭಾಗಗಳಲ್ಲಿ ಮೂಡಿ ಬರಲಿದೆ. ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕರಾಗಿ ಅಬ್ಬರಿಸಲಿದ್ದರೆ, ಅವರಿಗೆ ಸಾಥ್ ನೀಡಲು ಬಾಲಿವುಡ್‌ನ ಖಡಕ್ ನಟರಾದ ಅರ್ಜುನ್ ರಾಂಪಾಲ್ ಮತ್ತು ವಿವೇಕ್ ಒಬೆರಾಯ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿವಾಜಿ ಮಹಾರಾಜರ ಮೊಘಲರ ವಿರುದ್ಧದ ಹೋರಾಟ ಹಾಗೂ ರಣತಂತ್ರಗಳನ್ನು ಅತ್ಯಂತ ಅದ್ದೂರಿಯಾಗಿ ತೋರಿಸಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಈ ವರ್ಷದ ಕೊನೆಯಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಲಿದೆ.

ಕಾಂತಾರ ನಂತರ ರಿಷಬ್ ಶೆಟ್ಟಿ ಕೈಗೆತ್ತಿಕೊಂಡಿರುವ ಈ ಬೃಹತ್ ಪ್ಯಾನ್ ಇಂಡಿಯಾ ಪ್ರಾಜೆಕ್ಟ್‌ಗೆ ರಾಷ್ಟ್ರ ಪ್ರಶಸ್ತಿ ವಿಜೇತರು ಹಾಗೂ ಘಟಾನುಘಟಿ ಕಲಾವಿದರು ಸೇರಿಕೊಳ್ಳುತ್ತಿರುವುದು ಚಿತ್ರದ ಮೌಲ್ಯವನ್ನು ಹೆಚ್ಚಿಸಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ‘ಛತ್ರಪತಿ ಶಿವಾಜಿ ಮಹಾರಾಜ್’ ಸಿನಿಮಾ ಭಾರತೀಯ ಚಿತ್ರರಂಗದ ಮುಂದಿನ ಬಿಗ್ಗೆಸ್ಟ್ ವಿಶುವಲ್ ವಂಡರ್ ಬ್ಲಾಕ್‌ಬಸ್ಟರ್ ಆಗೋ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version