ಬೆಂಗಳೂರು: ಸ್ಯಾಂಡಲ್ವುಡ್ ಹಾಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಇಂದು (ಜುಲೈ 7) ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದ ಅಂಗವಾಗಿ ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ಪತಿಗೆ ಅತ್ಯಂತ ಕ್ಯೂಟ್ ಹಾಗೂ ಭಾವನಾತ್ಮಕವಾಗಿ ಶುಭ ಕೋರಿದ್ದಾರೆ. ಅವರ ಈ ಪೋಸ್ಟ್ ಸದ್ಯ ಸಖತ್ ವೈರಲ್ ಆಗುತ್ತಿದ್ದು, ಲೈಕ್ಸ್ ಮತ್ತು ಕಮೆಂಟ್‌ಗಳ ಸುರಿಮಳೆಯಾಗುತ್ತಿದೆ.
ಪತಿಗೆ ಪ್ರಗತಿಯ ಭಾವನಾತ್ಮಕ ಸಂದೇಶ
ಪ್ರಗತಿ ಶೆಟ್ಟಿ ತಮ್ಮ ಪೋಸ್ಟ್‌ನಲ್ಲಿ, “ನೀವು ನನ್ನ ಜೀವನವನ್ನು ನಾನು ಊಹಿಸಿದ್ದಕ್ಕಿಂತಲೂ ಹೆಚ್ಚು ಸುಂದರವಾಗಿಸಿದ್ದೀರಿ” ಎಂದು ಬರೆದು, ರಿಷಬ್ ಶೆಟ್ಟಿ ತಮ್ಮ ಬದುಕಿನಲ್ಲಿ ಎಷ್ಟು ಮಹತ್ವದ ವ್ಯಕ್ತಿಯಾಗಿದ್ದಾರೆ ಎಂಬುದನ್ನು ಹೃದಯಸ್ಪರ್ಶಿಯಾಗಿ ವಿವರಿಸಿದ್ದಾರೆ. ಅವರ ಪ್ರೀತಿಯೇ ತಮ್ಮ ಜೀವನಕ್ಕೆ ಬೆಳಕು, ನೆಮ್ಮದಿ ಹಾಗೂ ಆತ್ಮವಿಶ್ವಾಸವನ್ನು ನೀಡಿದೆ ಎಂದು ಅವರು ತಿಳಿಸಿದ್ದಾರೆ.
“ಪ್ರತಿದಿನವನ್ನೂ ಮತ್ತಷ್ಟು ಸುಂದರವಾಗಿಸುವ ನಿಮಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಪ್ರೀತಿ ನನ್ನ ಜೀವನದ ಬೆಳಕು. ಇಂದು ನಾನು ಏನಾಗಿದ್ದೇನೋ ಅದಕ್ಕೆ ನೀವು ಪ್ರಮುಖ ಕಾರಣ. ನನ್ನ ಆತ್ಮವಿಶ್ವಾಸವನ್ನು ಬೆಳೆಸಿದ ವ್ಯಕ್ತಿ ನೀವೇ. ನನ್ನ ಜೀವನ ಸಂಗಾತಿಯಾಗಿ, ಬೆಂಬಲವಾಗಿ ನಿಂತು ನನ್ನ ಪುಟ್ಟ ಪ್ರಪಂಚವನ್ನು ಅಂತ್ಯವಿಲ್ಲದ ಸಾಧ್ಯತೆಗಳ ಸಾಗರವಾಗಿ ರೂಪಿಸಿದ್ದೀರಿ” ಎಂದು ಪ್ರಗತಿ ಶೆಟ್ಟಿ ತಮ್ಮ ಮನದಾಳದ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ, ತಮ್ಮ ದಾಂಪತ್ಯ ಜೀವನದ ನೆನಪುಗಳನ್ನು ಸ್ಮರಿಸಿದ ಅವರು, ಇಬ್ಬರೂ ಒಟ್ಟಿಗೆ ಸಾಗಿದ ಪಯಣದ ಸಿಹಿ-ಕಹಿ ಅನುಭವಗಳನ್ನು ನೆನಪಿಸಿಕೊಂಡಿದ್ದಾರೆ. “ನಾವು ಒಟ್ಟಿಗೆ ನಡೆದ ಹಾದಿಯನ್ನು ಹಿಂದಿರುಗಿ ನೋಡಿದಾಗ ಪ್ರತಿಯೊಂದು ಕ್ಷಣವೂ ಅಮೂಲ್ಯ ನೆನಪಾಗಿ ಕಾಣುತ್ತದೆ. ನಮ್ಮ ಬದುಕಿನಲ್ಲಿ ನಗು ಇತ್ತು, ಕಣ್ಣೀರೂ ಇತ್ತು. ಸಂತೋಷದ ಕ್ಷಣಗಳಿದ್ದವು, ಭಿನ್ನಾಭಿಪ್ರಾಯಗಳೂ ಇದ್ದವು. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ನಡುವೆ ಪರಸ್ಪರ ಅರ್ಥೈಸಿಕೊಳ್ಳುವ ಮನಸ್ಸು ಮತ್ತು ಎಂದಿಗೂ ಕಡಿಮೆಯಾಗದ ಪ್ರೀತಿ ಇತ್ತು” ಎಂದು ಅವರು ಬರೆದಿದ್ದಾರೆ.
ಇನ್ನೂ, “ನೀವು ನೀವಾಗಿ ಇರುವುದಕ್ಕೆ ಧನ್ಯವಾದಗಳು. ಪದಗಳಲ್ಲಿ ಹೇಳಲು ಸಾಧ್ಯವಾಗದಷ್ಟು ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನಿಮ್ಮೊಂದಿಗೆ ಕಳೆದ ಪ್ರತಿಯೊಂದು ಕ್ಷಣವೂ ನನ್ನ ಜೀವನದ ಅಮೂಲ್ಯ ಸಂಪತ್ತು. ಮುಂದಿನ ದಿನಗಳಲ್ಲೂ ಇದೇ ರೀತಿಯ ಸಂತೋಷ, ಪ್ರೀತಿ ಮತ್ತು ಕನಸುಗಳೊಂದಿಗೆ ನಮ್ಮ ಪಯಣ ಮುಂದುವರಿಯಲಿ” ಎಂದು ಶುಭ ಹಾರೈಸಿದ್ದಾರೆ.
ಪ್ರಗತಿ ಶೆಟ್ಟಿ ಹಂಚಿಕೊಂಡಿರುವ ಈ ಪೋಸ್ಟ್‌ಗೆ ರಿಷಬ್ ಶೆಟ್ಟಿ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. “ಕ್ಯೂಟ್ ಕಪಲ್”, “ಗಾಡ್ ಬ್ಲೆಸ್ ಯು”, “ಹ್ಯಾಪಿ ಬರ್ತ್‌ಡೇ ರಿಷಬ್ ಸರ್” ಎಂಬ ಸಾವಿರಾರು ಕಾಮೆಂಟ್‌ಗಳು ಪೋಸ್ಟ್‌ಗೆ ಹರಿದುಬರುತ್ತಿವೆ. ಅನೇಕ ಸಿನಿತಾರೆಯರೂ ಹಾಗೂ ಅಭಿಮಾನಿಗಳೂ ರಿಷಬ್ ಶೆಟ್ಟಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
