ಹತ್ತು ವರ್ಷಗಳ ಪ್ರೀತಿಯ ಪಯಣ: ಪತ್ನಿಯೊಂದಿಗಿನ ಸುಂದರ ಕ್ಷಣಗಳನ್ನು ಹಂಚಿಕೊಂಡ ರಿಷಬ್ ಶೆಟ್ಟಿ

Untitled design 2026 01 23T170101.865

ಬೆಂಗಳೂರು: ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ, ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಬ್ ಶೆಟ್ಟಿ ಅವರು ಪತ್ನಿ ಪ್ರಗತಿ ಶೆಟ್ಟಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ ಹತ್ತು ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ, ದಂಪತಿ ತಮ್ಮ 10ನೇ ಮದುವೆ ವಾರ್ಷಿಕೋತ್ಸವವನ್ನು ಸಂಭ್ರಮದಲ್ಲಿದ್ದಾರೆ. ಈ ವಿಶೇಷ ಸಂದರ್ಭವನ್ನು ಇನ್ನಷ್ಟು ಸ್ಮರಣೀಯವಾಗಿಸಲು ರಿಷಬ್ ಶೆಟ್ಟಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪತ್ನಿಯೊಂದಿಗಿನ ಅನೇಕ ಅಮೂಲ್ಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಅವರ ದಾಂಪತ್ಯ ಜೀವನದ ಪಯಣ ಅನೇಕ ಸುಂದರ ನೆನಪುಗಳಿಂದ ತುಂಬಿದೆ. ಮೊದಲ ಭೇಟಿಯಿಂದ ಆರಂಭಿಸಿ ಕುಟುಂಬ ಜೀವನದ ಸಂತೋಷದ ಕ್ಷಣಗಳು, ಪ್ರವಾಸಗಳು, ಧಾರ್ಮಿಕ ಸ್ಥಳಗಳಿಗೆ ಭೇಟಿ, ಸಿನಿಮಾ ಶೂಟಿಂಗ್ ವೇಳೆಗಿನ ಕ್ಷಣಗಳು ಎಲ್ಲವನ್ನೂ ಒಟ್ಟಾಗಿ ಸೇರಿಸಿ ರಿಷಬ್ ಶೆಟ್ಟಿ ಅವರು ಮನಮುಟ್ಟುವ ವಿಡಿಯೋ ರೂಪದಲ್ಲಿ ಅಭಿಮಾನಿಗಳ ಮುಂದೆ ತಂದಿದ್ದಾರೆ.

ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ರಿಷಬ್ ಶೆಟ್ಟಿ ಅವರು ತಮ್ಮ ಭಾವನೆಗಳನ್ನು ಅತ್ಯಂತ ಸುಂದರ ಪದಗಳಲ್ಲಿ ವ್ಯಕ್ತಪಡಿಸಿದ್ದಾರೆ. “ಪ್ರೀತಿಗೆ ಪ್ರೀತಿಯಾಗಿ, ನಗುವಿಗೆ ನಗುವಾಗಿ, ಬಿಂಬಕ್ಕೆ ಪ್ರತಿಬಿಂಬವಾಗಿ, ಕೊನೆ ಕಾಣದ ಸೇತುವೆಯಂತೆ ಸದಾ ನನಗಾಗಿ ನಿಂತ ಪ್ರೀತಿಗೆ ದಶಕದ ಸಂವತ್ಸರ…” ಎಂದು ಬರೆದು, ತಮ್ಮ ಪತ್ನಿಯ ಮೇಲಿನ ಆಳವಾದ ಪ್ರೀತಿ ಹಾಗೂ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಈ ಶೀರ್ಷಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಪಡೆದುಕೊಂಡಿದ್ದು, ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ದಂಪತಿಗೆ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಕಳೆದ ವರ್ಷದ ಕೊನೆಯಲ್ಲಿ ರಿಷಬ್ ಶೆಟ್ಟಿ ಅಭಿನಯಿಸಿ ನಿರ್ದೇಶಿಸಿದ ಬಹು ನಿರೀಕ್ಷಿತ ಸಿನಿಮಾ ‘ಕಾಂತಾರ: ಚಾಪ್ಟರ್ 1’ ಬಿಡುಗಡೆಗೊಂಡು ಭಾರೀ ಯಶಸ್ಸು ಕಂಡಿತ್ತು. ಈ ಸಿನಿಮಾಗಾಗಿ ಅವರು ಶಾರೀರಿಕ ಮತ್ತು ಮಾನಸಿಕವಾಗಿ ಸಾಕಷ್ಟು ಶ್ರಮವಹಿಸಿದ್ದರು. ಸಿನಿಮಾ ಬಿಡುಗಡೆ ಬಳಿಕ ಕೆಲಕಾಲ ವಿಶ್ರಾಂತಿ ಪಡೆದ ಅವರು, ಕುಟುಂಬದ ಜೊತೆ ಸಮಯ ಕಳೆಯುವತ್ತ ಹೆಚ್ಚು ಗಮನ ಹರಿಸಿದ್ದರು. ಅದರ ಭಾಗವಾಗಿ ಪತ್ನಿಯೊಂದಿಗೆ ಅನೇಕ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.

ಕಾಂತಾರ ಚಿತ್ರದ ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ ರಿಷಬ್ ಶೆಟ್ಟಿ ದಂಪತಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಹನುಮನ ದೇವರ ದರ್ಶನ ಪಡೆದಿದ್ದರು. ಅಲ್ಲಿ 575 ಮೆಟ್ಟಿಲುಗಳನ್ನು ಏರಿ ದೇವರ ಸನ್ನಿಧಿಗೆ ತಲುಪಿದ ಅವರು, ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ಸಲ್ಲಿಸಿ ಕೃತಜ್ಞತೆ ಅರ್ಪಿಸಿದ್ದರು.

ಇದೇ ಸಂದರ್ಭದಲ್ಲಿ ಮಂತ್ರಾಲಯಕ್ಕೂ ತೆರಳಿದ್ದ ದಂಪತಿ, ಮೊದಲು ಗ್ರಾಮದೇವತೆ ಮಂಚಾಲಮ್ಮ ದೇವಿಯ ದರ್ಶನ ಪಡೆದು, ನಂತರ ರಾಯರ ಮೂಲ ಬೃಂದಾವನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ಈ ಎಲ್ಲಾ ಯಾತ್ರೆಗಳು ರಿಷಬ್ ಶೆಟ್ಟಿ ಅವರ ಆತ್ಮೀಯ ಜೀವನದ ಒಂದು ಸುಂದರ ಚಿತ್ರಣವನ್ನು ಅಭಿಮಾನಿಗಳ ಮುಂದೆ ತೆರೆದಿಟ್ಟಿವೆ.

Exit mobile version