‘ರಿಕ್ಷಾ ಚಾಲಕ’ ಚಿತ್ರದ ಟೀಸರ್ ಆಡಿಯೋ ಬಿಡುಗಡೆ

Untitled design 2025 04 08t175651.641

ಆಟೋ ಚಾಲಕರ ವೈಯಕ್ತಿಕ ಜೀವನ, ನೋವು ನಲಿವನ್ನು ಅನೇಕ ಚಲನಚಿತ್ರಗಳ ಮೂಲಕ ತೆರೆದಿಡಲಾಗಿದೆ‌. ಇದೀಗ ಅಂಥದ್ದೇ ಮತ್ತೊಂದು ಸಿನಿಮಾ ನಿರ್ಮಾಣವಾಗಿ, ಬಿಡುಗಡೆಗೆ ಸಿದ್ದವಾಗಿದೆ. ಆ ಚಿತ್ರದ ಹೆಸರು ರಿಕ್ಷಾಚಾಲಕ. ಈ ಚಿತ್ರದ ಆಡಿಯೋ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ಗೀಚೆಗೆ ನಡೆಯಿತು. ಯುವನಟ ಚಿರಂತ್ ಈ ಸಿನಿಮಾ ಮೂಲಕ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾಗಿದ್ದಾರೆ. ಹಾಡು, ಟೀಸರ್‌ನಲ್ಲಿ ಚಿರಂತ್ ಪರ್ಫಾರ್ಮನ್ಸ್ ನೋಡಿದರೆ ಪಕ್ಕಾ ತರಬೇತಿ ತೆಗೆದುಕೊಂಡೇ ಬಂದಿದ್ದಾರೆ ಎನಿಸುತ್ತದೆ, ಇವರ ಸಹೋದರ ಆಯುಷ್ ಶಶಿಕುಮಾರ್ ಅವರೇ ಚಿತ್ರವನ್ನು ನಿರ್ದೇಶಿಸಿದ್ದಾರೆ.‌ ಇವರಿಬ್ಬರ ತಾಯಿ ಶರಾವತಿ ಶಶಿಕುಮಾರ್ ಅವರು ಚಿತ್ರವನ್ನು ನಿರ್ಮಿಸಿದ್ದಾರೆ.

ಟೀಸರ್ ಬಿಡುಗಡೆ ನಂತರ ಮಾತನಾಡಿದ ಚಿರಂತ್, 20-22ರಲ್ಲಿ ಲಾಕ್ಡೌನ್ ಆದಾಗ ಆಟೋ ಡ್ರೈವರ್‌ಗಳು ಎದುರಿಸಿದ ಸಂಕಷ್ಟಗಳನ್ನ, ಅನುಭವಿಸಿದ ನೋವುಗಳನ್ನು ಕಣ್ಣಾರೆ ಕಂಡಿದ್ದ ಆಯುಷ್, ಅದೇ ಕಥೆಯನ್ನು ಈಗ ಸಿನಿಮಾ ರೂಪದಲ್ಲಿ ತೆರೆಗೆ ತಂದಿದ್ದಾರೆ, ಒಳ್ಳೇ ಆಟೋ ಚಾಲಕನೊಬ್ಬ ಸಮಾಜದಲ್ಲಿ ಏನೆಲ್ಲ ಕಷ್ಟ ಎದುರಿಸುತ್ತಾನೆ, ಆಟೋ ಟ್ರೈವರ್‌ಗಿರುವ ಕಷ್ಟವೇನು ಅಂತ ಈ ಸಿನಿಮಾದಲ್ಲಿ ತೋರಿಸಿದ್ದೇವೆ, ಮೈಸೂರು, ವರುಣಾ, ಕೆಆರ್.ನಗರ, ಸಾಲಿಗ್ರಾಮ ಹಾಗೂ ಮುರುಡೇಶ್ವರದಲ್ಲಿ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ, ನಮ್ಮ ತಂದೆಯವರು ಡ್ಯಾನ್ಸ್ ಮಾಸ್ಟರ್ ಆಗಿದ್ದು, ಅವರನ್ನೇ ನೋಡಿಯೇ ನಾನು ಡಾನ್ಸ್ ಕಲಿತಿರುವುದು, ಇಡೀ ಸಿನಿಮಾವನ್ನು ಪುನೀತ್ ರಾಜ್‌ಕುಮಾರ್ ಅವರಿಗೆ ಅರ್ಪಿಸಿದ್ದೇವೆ ಎಂದರು.

ನಿರ್ದೇಶಕ ಆಯುಷ್ ಶಶಿಕುಮಾರ್ ಮಾತನಾಡಿ, ಚಿಕ್ಕ ವಯಸ್ಸಿನಿಂದ ತಂದೆಯವರು ನನ್ನನ್ನು ಶೂಟಿಂಗ್ ಇದ್ದಾಗ ಕರೆದುಕೊಂಡು ಹೋಗ್ತಾ ಇದ್ರು. ಅಲ್ಲಿ ಡಿಫರೆಂಟ್ ಡ್ಯಾನಿ ಅವರೂ ಬರ್ತಾ ಇದ್ರು. ಎಷ್ಟೋ ಸಲ ಸ್ಕೂಲ್‌ಗೆ ರಜೆ ಹಾಕಿ ಶೂಟಿಂಗ್ ಹೋಗ್ತಾ ಇದ್ದೆ. ಹಾಗೇ ಸಿನಿಮಾದ ಮೇಲಿನ ಆಸಕ್ತಿ ಬೆಳೆಯುತ್ತಾ ಬಂತು. ಎಲ್ಲ ಪಾತ್ರಗಳಿಗೂ ಆಡಿಷನ್ ಮೂಲಕ ಆಯ್ಕೆ ಮಾಡಿಕೊಂಡಿದ್ದೇವೆ. ಸಿನಿಮಾದಲ್ಲಿ ಐದು ಹಾಡುಗಳಿದ್ದು ವೇದಾಂತ್ ಅತಿಶಯ್ ಜೈನ್ ಅವರ ಸಂಗೀತವಿದೆ. ಇದೊಂದು ಆಕ್ಷನ್ ಫ್ಯಾಮಿಲಿ ಡ್ರಾಮಾ ಕಥೆಯಾಗಿದ್ದು ಈಗಾಗಲೇ ಚಿತ್ರಕ್ಕೆ ಸೆನ್ಸಾರ್‌ನಿಂದ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಶೀಘ್ರದಲ್ಲಿಯೇ ರಿಲೀಸ್ ಮಾಡುತ್ತೇವೆ ಎಂದು ಹೇಳಿದರು.

ಕಥೆ, ಸಾಹಿತ್ಯ ಬರೆದಿರುವ ಶಶಿ ಆರಕ್ಷಕ್ ಅವರು ನೃತ್ಯನಿರ್ದೇಶಕರೂ ಹೌದು. ಈ ಬಗ್ಗೆ ಮಾತನಾಡುತ್ತಾ, ನಿರ್ದೇಶನ ಮಾಡಿರುವ ಆಯುಷ್ ನನ್ನ ದೊಡ್ಡ ಮಗ, ಚಿರಂತ್ ನನ್ನ ಚಿಕ್ಕ ಮಗ, ನಿರ್ಮಾಣ ಮಾಡಿರೋದು ನನ್ನ ಹೆಂಡತಿ. ಹೊಸಬರಿಗೆ ಸಿನಿಮಾ ಮಾಡಲು ಯಾರೂ ಮುಂದೆ ಬರಲಿಲ್ಲ. ಹಾಗಾಗಿ ನಾವೇ ಸೇರಿ ಸಿನಿಮಾ ಮಾಡಿದ್ದೀವಿ. ನಮ್ಮ ಮಕ್ಕಳಿಗೆ ಮೊದಲಿನಿಂದನೂ ಸಿನಿಮಾದ ಮೇಲೆ ಆಸಕ್ತಿ ಇತ್ತು. ನಾನು ನೃತ್ಯಪಟುವಾಗಿದ್ದರಿಂದ ಸಿನಿಮಾ ಬಗ್ಗೆ ಸ್ವಲ್ಪ ಗೊತ್ತಿತ್ತು, ಪುನೀತ್ ಅವರ ಹೆಸರಲ್ಲಿ, ಶಂಕರ್‌ನಾಗ್ ಅವರ ನೆನಪಲ್ಲಿ ಈ ಸಿನಿಮಾ ಮಾಡಿದ್ದೇವೆ ಎಂದು ಹೇಳಿದರು.

ಚಿತ್ರದ ನಿರ್ಮಾಪಕಿ ಶರಾವತಿ ಶಶಿಕುಮಾರ್ ಮಾತನಾಡಿ, ಕಥೆ ಇಷ್ಟ ಆಯ್ತು. ಹಾಗಾಗಿ ನಿರ್ಮಾಣಕ್ಕೆ ಒಪ್ಪಿಕೊಂಡೆ. ನಾಯಕ, ನಿರ್ದೇಶಕ ಇಬ್ಬರೂ ನನ್ನ ಮಕ್ಕಳೆ. ಮಕ್ಕಳ ಕನಸು ಒಂದು ಕಡೆಯಾದರೆ, ಸಿನಿಮಾದ ಕಥೆಯೇ ಇಂಟ್ರೆಸ್ಟಿಂಗ್ ಆಗಿದೆ ಎಂದು ಹೇಳಿದರು. ಧರ್ಮಾಚಾರಿ ಅವರ ಸಹ ನಿರ್ಮಾಣ, ವಂಶಿ ಅವರ ಸಂಕಲನ, ಆನಂದ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ, ಚಿತ್ರದ ನಾಯಕಿಯಾಗಿ ನಂದಿನಿ, ಉಳಿದಂತೆ ದರ್ಶನ್, ಬಲ ರಾಜವಾಡಿ, ಚಂದ್ರಪ್ರಭ, ಮಿಮಿಕ್ರಿ ಗೋಪಿ ಚಿತ್ರದಲ್ಲಿ ನಟಿಸಿದ್ದಾರೆ.

Exit mobile version