ಬೆಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ನಟ ದರ್ಶನ್ ತೂಗುದೀಪ ಅವರನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿ ಹೆಸರಿಸಲಾಗಿದೆ. ಭಾರತೀಯ ದಂಡ ಸಂಹಿತೆ (IPC) ಅಡಿ 10 ವಿವಿಧ ಸೆಕ್ಷನ್‌ಗಳಡಿ ಅವರ ಮೇಲೆ ಕೇಸ್ ದಾಖಲಾಗಿದೆ. ಸದ್ಯ ಸುಪ್ರೀಂ ಕೋರ್ಟ್ ಅವರ ಬೇಲ್ ಅನ್ನು ರದ್ದುಗೊಳಿಸಿದ್ದು, ನಟ ದರ್ಶನ್ ಬೆಂಗಳೂರಿನ ಹೊಸಕೆರೆಹಳ್ಳಿಯ ಅಪಾರ್ಟ್ಮೆಂಟ್‌ನಲ್ಲಿ ಪತ್ತಿ ವಿಜಯಲಕ್ಷ್ಮಿ ನಿವಾಸದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದು, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾರೆ.
ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿ ಅವರು ನಟ ದರ್ಶನ್ ಅವರ ಆಪ್ತೆ ಪವಿತ್ರಾ ಗೌಡ ಅವರಿಗೆ ಅಸಭ್ಯ ಸಂದೇಶಗಳನ್ನು ಕಳುಹಿಸಿದ್ದರಿಂದ ಈ ಕೊಲೆ ನಡೆದಿದೆ ಎಂದು ಆರೋಪಿಸಲಾಗಿದೆ. ರೇಣುಕಾಸ್ವಾಮಿ ಅವರನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಕೊಲ್ಲಲಾಗಿದ್ದು, ಅವರ ದೇಹವನ್ನು ಬೆಂಗಳೂರಿನ ಸುಮನಹಳ್ಳಿ ಬಳಿ ಚರಂಡಿಯಲ್ಲಿ ಪತ್ತೆಯಾಗಿತ್ತು. ಪೊಲೀಸರು 17 ಆರೋಪಿಗಳನ್ನು ಬಂಧಿಸಿದ್ದು, ದರ್ಶನ್ ಅವರನ್ನು ಆರೋಪಿ ನಂ. 2 ಎಂದು ಹೆಸರಿಸಿದ್ದಾರೆ. ಬೇಲ್ ಮೇಲಿದ್ದ ದರ್ಶನ್ ಸೇರಿ 7 ಆರೋಪಿಗಳಿಗೆ ಇಂದು ಸುಪ್ರೀಂ ಕೋರ್ಟ್ ಬೇಲ್ ರದ್ಧುಗೊಳಿಸಿ, ಆರೋಪಿಗಳನ್ನು ಬಂಧಿಸುವಂತೆ ತೀರ್ಪು ನೀಡಿತ್ತು. ಸದ್ಯ ನಟ ದರ್ಶನ್ ಸೇರಿ 7 ಜನ ಆರೋಪಿಗಳು ಮತ್ತೊಮ್ಮೆ ಜೈಲುಪಾಲಾಗಲಿದ್ದಾರೆ.
ನಟ ದರ್ಶನ್ ಮೇಲೆ ಹಾಕಲಾಗಿರುವ ಕೇಸ್‌ಗಳು ಯಾವುವು?
- IPC 302: ಕೊಲೆ (ಮರ್ಡರ್).
- IPC 34: ಸಾಮಾನ್ಯ ಉದ್ದೇಶದೊಂದಿಗೆ ಹಲವರು ಮಾಡಿದ ಕೃತ್ಯ (ಕಾಮನ್ ಇಂಟೆನ್ಷನ್).
- IPC 120B: ಒಳಸಂಚು (ಕ್ರಿಮಿನಲ್ ಕಾನ್ಸ್ಪಿರಸಿ).
- IPC 355: ಅನುಮಾನದಿಂದ ವ್ಯಕ್ತಿಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಫೋರ್ಸ್ (ಅಸಾಲ್ಟ್ ವಿಥ್ ಇಂಟೆಂಟ್ ಟು ಡಿಸಾನರ್).
- IPC 143: ಕಾನೂನುಬಾಹಿರ ಸಭೆ (ಅನ್ಲಾಫುಲ್ ಅಸೆಂಬ್ಲಿ).
- IPC 147: ಹಿಂಸಾಚಾರ ಅಥವಾ ಗಲಭೆ (ರೈಯಟಿಂಗ್).
- IPC 148: ಮಾರಣಾಂತಿಕ ಆಯುಧಗಳೊಂದಿಗೆ ಹಲ್ಲೆ (ರೈಯಟಿಂಗ್ ಆರ್ಮ್ಡ್ ವಿಥ್ ಡೆಡ್ಲಿ ವೆಪನ್).
- IPC 149: ಅಕ್ರಮ ಸಭೆಯ ಪ್ರತಿ ಸದಸ್ಯರ ಜವಾಬ್ದಾರಿ (ಎವರಿ ಮೆಂಬರ್ ಆಫ್ ಅನ್ಲಾಫುಲ್ ಅಸೆಂಬ್ಲಿ ಗಿಲ್ಟಿ).
- IPC 201: ಸಾಕ್ಷ್ಯ ನಾಶ (ಕಾಸಿಂಗ್ ಡಿಸಪಿಯರೆನ್ಸ್ ಆಫ್ ಎವಿಡೆನ್ಸ್).
- IPC 364: ಅಪಹರಣ ಅಥವಾ ಕಿಡ್ನ್ಯಾಪಿಂಗ್ ಟು ಮರ್ಡರ್.
ಈ ಸೆಕ್ಷನ್‌ಗಳು ಕೊಲೆ, ಒಳಸಂಚು, ಅಪಹರಣ ಮತ್ತು ಸಾಕ್ಷ್ಯ ನಾಶದಂತಹ ಗಂಭೀರ ಆರೋಪಗಳನ್ನು ಒಳಗೊಂಡಿವೆ. ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ “ಯಾರೂ ಕಾನೂನಿಗಿಂತ ಮೇಲಲ್ಲ” ಎಂದು ಹೇಳಿ ಬೇಲ್ ರದ್ದುಗೊಳಿಸಿದೆ, ಇದು ನ್ಯಾಯದ ಮೇಲಿನ ನಂಬಿಕೆಯನ್ನು ದೃಢಪಡಿಸಿದೆ.