ಬಾಲಿವುಡ್ ಬ್ಯೂಟಿ ರವೀನಾ ಟಂಡನ್ ಮತ್ತೆ ಸ್ಯಾಂಡಲ್‌ವುಡ್‌ಗೆ ವಾಪಸ್ ಆಗಿದ್ದಾರೆ. ರಾಕಿಭಾಯ್ ಜೊತೆ ಕೆಜಿಎಫ್‌ನಲ್ಲಿ ಮಿಂಚು ಹರಿಸಿದ್ದ ಬಿಟೌನ್ ಚೆಲುವೆ.. ಇದೀಗ ಶಿವಣ್ಣನ ಹೋಮ್ ಬ್ಯಾನರ್ ಎ ಫಾರ್ ಆನಂದ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಕಥೆ, ಪಾತ್ರ ಒಪ್ಪಿದ್ದು ಹೇಗೆ..? ಅದಕ್ಕಾಗಿ ಶ್ರೀನಿ ಮಾಡಿದ್ದೇನು ಅನ್ನೋದ್ರ ಕೌತುಕತೆ ಕಥೆ ಇಲ್ಲಿದೆ ನೋಡಿ..
- ಕರುನಾಡಿಗೆ KGF ರಮಿಕಾ ಸೇನ್ ರವೀನಾ ರಿಟರ್ನ್
- ಇದು ಮಸ್ತ್ ಮಸ್ತ್ ಬೆಡಗಿಯ 3ನೇ ಕನ್ನಡ ಸಿನಿಮಾ..!
- ಶಿವಣ್ಣನ ಜೊತೆ ಬಿಟೌನ್ ಬ್ಯೂಟಿ ‘A ಫಾರ್ ಆನಂದ್’
- ಸ್ಕೂಲ್ ಟೀಚರ್ ಆಗಿ ಕನ್ನಡ ಕಲಿಯೋಕೆ ಬಂದ ಚೆಲುವೆ
ಶಿವರಾಜ್‌ಕುಮಾರ್ ಅಭಿನಯದ ಬಹು ನಿರೀಕ್ಷಿತ ಹೊಸ ಸಿನಿಮಾ ‘ಎ ಫಾರ್ ಆನಂದ್’. ಈ ಚಿತ್ರದಲ್ಲಿ ಬಾಲಿವುಡ್‌ನ ಸುಂದರಿ ರವೀನಾ ಟಂಡನ್ ಸ್ಕೂಲ್ ಟೀಚರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಅಂದ್ರೆ, ಕನ್ನಡ ಚಿತ್ರರಂಗದಲ್ಲಿ ಶಿವಣ್ಣ ಮತ್ತು ರವೀನಾ ಇದೇ ಮೊದಲ ಬಾರಿಗೆ ಜೊತೆಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. 1999ರಲ್ಲಿ ಬಂದ ಉಪೇಂದ್ರ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದ ರವೀನಾ, ಆ ಬಳಿಕ ಬ್ಲಾಕ್‌ಬಸ್ಟರ್ ‘ಕೆಜಿಎಫ್: ಚಾಪ್ಟರ್ 2’ ಚಿತ್ರದ ರಮಿಕಾ ಸೇನ್ ಪಾತ್ರದ ಮೂಲಕ ದೇಶದ ಗಮನ ಸೆಳೆದಿದ್ದರು. ಈಗ ಮತ್ತೊಮ್ಮೆ ಕನ್ನಡ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.
ಸಿನಿಮಾದ ಶೂಟಿಂಗ್ ಕೂಡ ಬೆಂಗಳೂರಿನ ಪ್ರೆಸಿಡೆನ್ಸಿ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ಭರ್ಜರಿಯಾಗಿ ಶುರುವಾಗಿದೆ. ವಿಶೇಷ ಪೂಜೆಯೊಂದಿಗೆ ಸೆಟ್‌ಗೆ ಕಾಲಿಟ್ಟ ರವೀನಾ ಟಂಡನ್ ಮೊದಲ ದಿನದ ಚಿತ್ರೀಕರಣದಲ್ಲೇ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಈ ವೇಳೆ ವಿಶ್ವವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಡಾ. ನಿಸಾರ್ ಅಹ್ಮದ್ ಅವರು ನಟಿಯನ್ನು ಅತ್ಯಂತ ಆತ್ಮೀಯವಾಗಿ ಸನ್ಮಾನಿಸಿ ಸ್ವಾಗತಿಸಿದ್ದಾರೆ. ಸದ್ಯ ಕ್ಯಾಂಪಸ್‌ನಲ್ಲಿ ರವೀನಾ ಅವರನ್ನೊಳಗೊಂಡ ಪ್ರಮುಖ ಹಾಗೂ ಇಂಟರೆಸ್ಟಿಂಗ್ ದೃಶ್ಯಗಳ ಶೂಟಿಂಗ್ ಭರದಿಂದ ಸಾಗುತ್ತಿದೆ.
ಇನ್ನು ಶ್ರೀನಿ ನಿರ್ದೇಶನ ಗೀತಾ ಪಿಕ್ಚರ್ಸ್ ಲಾಂಚನದಲ್ಲಿ ಗೀತಾ ಶಿವರಾಜ್‌ಕುಮಾರ್ ಅತಿರಥರಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ, ಅರ್ಜುನ್ ಜನ್ಯ ಸಂಗೀತ, ಮಹೇಂದ್ರ ಸಿಂಹ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಸಂಕಲನವಿದೆ. ಒಂದ್ಕಡೆ ಹ್ಯಾಟ್ರಿಕ್ ಹೀರೋ ಶಿವಣ್ಣ, ಮತ್ತೊಂದ್ಕಡೆ ಬಾಲಿವುಡ್‌ನ ಗ್ಲಾಮರಸ್ ಕ್ವೀನ್ ರವೀನಾ ಕಾಂಬಿನೇಷನ್ ತೆರೆಮೇಲೆ ಯಾವ ರೀತಿಯ ಸುನಾಮಿ ಎಬ್ಬಿಸಲಿದೆ ಎಂಬುದನ್ನು ನೋಡಲು ಇಡೀ ಸ್ಯಾಂಡಲ್‌ವುಡ್ ಕಾಯುತ್ತಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
