ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದವಳು ನಾನೊಬ್ಬಳೇ: ಮತ್ತೆ ಟೀಕೆಗೆ ಗುರಿಯಾದ ರಶ್ಮಿಕಾ

ಕೊಡವ ಸಮುದಾಯದ ಕಲಾವಿದರಿಗೆ ಅವಮಾನ ಮಾಡಿದ್ರಾ ರಶ್ಮಿಕಾ?

Untitled design (98)

ನಟಿ ರಶ್ಮಿಕಾ ಮಂದಣ್ಣ ಅವರ “ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದವಳು ನಾನೊಬ್ಬಳೇ” ಎಂಬ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಕೊಡವ ಸಮುದಾಯದಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಪ್ರೇಮಾ, ಹರ್ಷಿಕಾ ಪೂಣಚ್ಚ, ಕೃಷಿ ತಾಪಂಡ, ನಿಧಿ ಸುಬ್ಬಯ್ಯ, ಡೈಸಿ ಬೋಪಣ್ಣ, ಶ್ವೇತಾ ಚಂಗಪ್ಪ ಮುಂತಾದವರನ್ನು ನಿರ್ಲಕ್ಷಿಸಿದ್ದಕ್ಕಾಗಿ ರಶ್ಮಿಕಾ ಅವರ ಹೇಳಿಕೆಯನ್ನು ಅನೇಕರು ಖಂಡಿಸಿದ್ದಾರೆ.

‘ಮೋಜೋ ಸ್ಟೋರಿ’ಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಮಾತನಾಡುತ್ತಾ, “ನಮ್ಮ ಕೊಡವ ಸಮುದಾಯದಿಂದ ಯಾರೂ ಚಿತ್ರರಂಗಕ್ಕೆ ಬಂದಿಲ್ಲ. ಬಹುಶಃ ನಾನೊಬ್ಬಳೇ ಚಿತ್ರರಂಗಕ್ಕೆ ಬಂದಿರುವ ಕೊಡವ ಸಮುದಾಯದವಳು. ನಮ್ಮ ಸಮುದಾಯದವರು ತುಂಬಾ ಜಡ್ಜ್ ಮಾಡುವವರು. ನಾನು ಆಡಿಷನ್‌ಗೆ ಹೋಗುತ್ತಿರುವುದನ್ನು ಕುಟುಂಬಕ್ಕೆ ತಿಳಿಸಿರಲಿಲ್ಲ, ಚಿತ್ರರಂಗಕ್ಕೆ ಪ್ರವೇಶಿಸುವುದಾಗಿಯೂ ಹೇಳಿರಲಿಲ್ಲ,” ಎಂದಿದ್ದಾರೆ.

ADVERTISEMENT
ADVERTISEMENT

ಈ ಹೇಳಿಕೆಯು ಕೊಡವ ಸಮುದಾಯದ ಹಲವು ಕಲಾವಿದರ ಕೊಡುಗೆಯನ್ನು ಕಡೆಗಣಿಸಿದೆ ಎಂದು ಟೀಕಾಕಾರರು ಆಕ್ಷೇಪಿಸಿದ್ದಾರೆ. ವಿಶೇಷವಾಗಿ, ಖ್ಯಾತ ನಟಿ ಪ್ರೇಮಾ ಅವರು ಕೊಡವ ಸಮುದಾಯದಿಂದ ಬಂದು ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ರಶ್ಮಿಕಾ ಹುಟ್ಟುವ ಮೊದಲೇ ಪ್ರೇಮಾ ಚಿತ್ರರಂಗಕ್ಕೆ ಕಾಲಿಟ್ಟಿದ್ದರು ಎಂಬುದನ್ನು ಗಮನಿಸಿದರೆ, ರಶ್ಮಿಕಾ ಅವರ ಹೇಳಿಕೆಯು ಅಜ್ಞಾನದಿಂದ ಕೂಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ.

ಇದಲ್ಲದೆ, ಕೊಡವ ಸಮುದಾಯದಿಂದ ಚಿತ್ರರಂಗದಲ್ಲಿ ಯಶಸ್ವಿಯಾಗಿರುವ ಇತರ ಕಲಾವಿದರಾದ ಹರ್ಷಿಕಾ ಪೂಣಚ್ಚ, ಕೃಷಿ ತಾಪಂಡ, ನಿಧಿ ಸುಬ್ಬಯ್ಯ, ಡೈಸಿ ಬೋಪಣ್ಣ, ಶ್ವೇತಾ ಚಂಗಪ್ಪ ಮುಂತಾದವರನ್ನು ಸಾಮಾಜಿಕ ಜಾಲತಾಣದ ಬಳಕೆದಾರರು ಉಲ್ಲೇಖಿಸಿದ್ದಾರೆ. ರಶ್ಮಿಕಾ ಅವರ ಹೇಳಿಕೆಯನ್ನು “ಹಾಸ್ಯಾಸ್ಪದ” ಮತ್ತು “ಕೊಡವ ಸಮುದಾಯದ ಕಲಾವಿದರಿಗೆ ಅವಮಾನ” ಎಂದು ಕರೆದು, ಅವರಿಗೆ ತಮ್ಮ ಸಮುದಾಯದ ಚಿತ್ರರಂಗದ ಇತಿಹಾಸದ ಬಗ್ಗೆ ತಿಳಿವಳಿಕೆ ಇಲ್ಲ ಎಂದು ಟೀಕಿಸಿದ್ದಾರೆ.

ರಶ್ಮಿಕಾ ಮಂದಣ್ಣ ಈ ಹಿಂದೆಯೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಕನ್ನಡಿಗರ ಆಕ್ರೋಶಕ್ಕೆ ಒಳಗಾಗಿದ್ದರು. ಈಗಿನ ಹೇಳಿಕೆಯಿಂದ ಮತ್ತೊಮ್ಮೆ ಅವರು ಟೀಕೆಗೆ ಗುರಿಯಾಗಿದ್ದಾರೆ. ಕೊಡವ ಸಮುದಾಯದ ಕಲಾವಿದರ ಕೊಡುಗೆಯನ್ನು ಗೌರವಿಸುವಂತೆ ಮತ್ತು ಇಂತಹ ಹೇಳಿಕೆಗಳಿಂದ ದೂರವಿರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ರಶ್ಮಿಕಾ ಅವರಿಗೆ ಸಲಹೆ ನೀಡಿದ್ದಾರೆ.

Exit mobile version