ಹೈದರಾಬಾದ್: ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಇಂದು ತಮ್ಮ 30ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕೊಡಗಿನ ಸುಂದರಿ ಈಗ ಬಾಲಿವುಡ್ ಮತ್ತು ಸೌತ್ ಸಿನಿಮಾ ರಂಗದಲ್ಲಿ ಅಗ್ರ ನಾಯಕಿಯಾಗಿ ಮಿಂಚುತ್ತಿದ್ದಾರೆ. ಆದರೆ ಈ ಬಾರಿಯ ಬರ್ತ್ಡೇ ವಿಶೇಷವಾಗಿದ್ದು, ಇದು ಅವರ ಮದುವೆಯ ನಂತರದ ಮೊದಲ ಜನ್ಮದಿನವಾಗಿದೆ.
ವಿಮಾನ ನಿಲ್ದಾಣದಲ್ಲೇ ಸೆಲೆಬ್ರೇಶನ್
ರಶ್ಮಿಕಾ ತಮ್ಮ ಪತಿ ವಿಜಯ್ ದೇವರಕೊಂಡ ಮತ್ತು ಕುಟುಂಬದೊಂದಿಗೆ ಹುಟ್ಟುಹಬ್ಬ ಸೆಲೆಬ್ರೆಷನ್‌ಗೆ ಹೈದರಾಬಾದ್ ವಿಮಾನ ನಿಲ್ದಾಣದಿಂದ ಹೊರಟಿದ್ದರು. ಅಲ್ಲೇ ಕೇಕ್ ಕತ್ತರಿಸಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಭಿಮಾನಿಗಳು ಈ ರೋಮ್ಯಾಂಟಿಕ್ ಕ್ಷಣಗಳನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ವಿಜಯ್ ದೇವರಕೊಂಡನ ಸ್ಪೆಷಲ್ ವಿಶ್
ವಿಜಯ್ ದೇವರಕೊಂಡ ತಮ್ಮ ಪತ್ನಿಗೆ ಮಾಡಿದ ವಿಶ್ ಮಾಡಿರುವುದು ಎಲ್ಲರ ಗಮನ ಸೆಳೆದಿದೆ. ಅವರು ತಮ್ಮ ಹೊಸ ಸಿನಿಮಾ ‘ರಣಬಾಲಿ’ಯ ಸೆಟ್‌ನಿಂದ ರಶ್ಮಿಕಾ ಅವರ ‘ಜಯಮ್ಮ’ ಪಾತ್ರದ ಮೇಕಿಂಗ್ ವಿಡಿಯೋವನ್ನು ಹಂಚಿಕೊಂಡು, “ಐ ಲವ್ ಯೂ ಜಯಮ್ಮ“ ಎಂದು ಬರೆದಿದ್ದಾರೆ. ಸುಮಾರು 7 ವರ್ಷಗಳ ನಂತರ ವಿಜಯ್-ರಶ್ಮಿಕಾ ಜೋಡಿ ಮತ್ತೆ ತೆರೆ ಮೇಲೆ ಒಂದಾಗುತ್ತಿದ್ದಾರೆ. ‘ರಣಬಾಲಿ’ಯಲ್ಲಿ ವಿಜಯ್ ಸ್ವಾತಂತ್ರ್ಯ ಹೋರಾಟಗಾರನಾಗಿ, ರಶ್ಮಿಕಾ ಬ್ರಿಟಿಷ್ ಕಾಲದ ದಿಟ್ಟ ಮಹಿಳೆ ‘ಜಯಮ್ಮ’ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಮದುವೆಯ ನಂತರದ ಮೊದಲ ಜನ್ಮದಿನ
ಫೆಬ್ರವರಿ 26, 2026ರಂದು ಜೈಪುರದಲ್ಲಿ ವಿಜಯ್ ಮತ್ತು ರಶ್ಮಿಕಾ ವಿವಾಹವಾಗಿದ್ದರು. ಇದೀಗ ಮದುವೆಯ ಬಳಿಕ ಆಚರಿಸುತ್ತಿರುವ ಮೊದಲ ಹುಟ್ಟುಹಬ್ಬ ಇದಾಗಿದೆ. ವಿಜಯ್ ಮತ್ತು ಅವರ ಕುಟುಂಬ ರಶ್ಮಿಕಾ ಅವರನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿರುವುದು ವೈರಲ್ ಫೋಟೋಗಳಲ್ಲಿ ಸ್ಪಷ್ಟವಾಗಿದೆ. ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ನಡೆದ ಭರ್ಜರಿ ರಿಸೆಪ್ಷನ್ ನಂತರ ಇದು ಮತ್ತೊಂದು ಸಂಭ್ರಮದ ಕ್ಷಣವಾಗಿದೆ.
ರಶ್ಮಿಕಾ ಅವರ ಸಿನಿಮಾ
ರಶ್ಮಿಕಾ ಮಂದಣ್ಣ ಅವರು ‘ಪುಷ್ಪ 3’, ‘ಅನಿಮಲ್ ಪಾರ್ಕ್’, ‘ರೇನ್ಬೋ’, ‘ಮೈಸಾ’ ಮತ್ತು ‘ರಣಬಾಲಿ’ ಸೇರಿದಂತೆ ಹಲವಾರು ಮಹತ್ವಾಕಾಂಕ್ಷಿ ಚಿತ್ರಗಳಲ್ಲಿ ನಟಿಸಿದ್ದಾರೆ. ರಾಹುಲ್ ಸಾಂಕೃತ್ಯಾಯನ್ ನಿರ್ದೇಶನದ ‘ರಣಬಾಲಿ’ ಸೆಪ್ಟೆಂಬರ್ 11ಕ್ಕೆ ಬಿಡುಗಡೆಯಾಗಲಿದೆ. 19ನೇ ಶತಮಾನದ ಬ್ರಿಟಿಷ್ ಆಡಳಿತದ ನೈಜ ಘಟನೆಗಳ ಆಧಾರಿತ ಈ ಚಿತ್ರದಲ್ಲಿ ರಶ್ಮಿಕಾ ಅಭಿನಯ ಮತ್ತೊಂದು ಮೈಲಿಗಲ್ಲಾಗುವ ನಿರೀಕ್ಷೆಯಿದೆ.
