ಬೆಂಗಳೂರು: ಬಹುಕೋಟಿ ಮೌಲ್ಯದ ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಅವರಿಗೆ ಕಸ್ಟಮ್ಸ್ ಇಲಾಖೆ ಬರೋಬ್ಬರಿ ₹89.91 ಕೋಟಿ ದಂಡ ವಿಧಿಸಿದೆ. ಪ್ರಕರಣದ ತನಿಖೆ ಹಾಗೂ ಸಾಕ್ಷ್ಯಗಳ ಪರಿಶೀಲನೆಯ ಬಳಿಕ ಕಸ್ಟಮ್ಸ್ ಜಂಟಿ ನಿರ್ದೇಶಕ ಸಂದೀಪ್ ಅವರು 399 ಪುಟಗಳ ಸುದೀರ್ಘ ಆದೇಶ ಹೊರಡಿಸಿದ್ದಾರೆ. ದಂಡದ ಮೊತ್ತ ಮತ್ತು ಆದೇಶದ ಅಧಿಕೃತ ಪ್ರತಿಯನ್ನು ರನ್ಯಾ ರಾವ್ ಅವರಿಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ದುಬೈನಿಂದ ಭಾರತಕ್ಕೆ ಅಕ್ರಮವಾಗಿ ಚಿನ್ನ ಸಾಗಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದಲ್ಲಿ ರನ್ಯಾ ರಾವ್ ಅವರು ಅಂತರರಾಷ್ಟ್ರೀಯ ಮಟ್ಟದ ಚಿನ್ನದ ಕಳ್ಳಸಾಗಣೆ ಜಾಲದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು ಎಂಬುದನ್ನು ಸಾಕ್ಷ್ಯಗಳ ಆಧಾರದಲ್ಲಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
113 ಕೆ.ಜಿ. ಚಿನ್ನದ ಅಕ್ರಮ ಸಾಗಣೆ ಆರೋಪ
ಮಾರ್ಚ್ 7, 2024ರಿಂದ ಫೆಬ್ರವರಿ 2, 2025ರ ನಡುವಿನ ಅವಧಿಯಲ್ಲಿ ದುಬೈನಿಂದ ಭಾರತಕ್ಕೆ ಒಟ್ಟು 113 ಕೆ.ಜಿ. ಚಿನ್ನವನ್ನು ಅಕ್ರಮವಾಗಿ ಸಾಗಣೆ ಮಾಡಿರುವ ಆರೋಪ ಪ್ರಕರಣದ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಈ ಅಕ್ರಮ ವಹಿವಾಟಿನ ವಿವರಗಳು ಬಹಿರಂಗವಾಗಿವೆ.
ಈ ಪ್ರಕರಣದಲ್ಲಿ ರನ್ಯಾ ರಾವ್ ಅವರು ತರುಣ್ ಸೇರಿದಂತೆ ಇತರ ಮೂವರು ಸಹ ಆರೋಪಿಗಳೊಂದಿಗೆ ಸೇರಿ ಚಿನ್ನದ ಕಳ್ಳಸಾಗಣೆ ನಡೆಸಿದ್ದಾರೆ ಎಂಬ ಆರೋಪವಿದೆ. ದುಬೈನಿಂದ ಬೆಂಗಳೂರಿಗೆ ಚಿನ್ನವನ್ನು ಅಕ್ರಮವಾಗಿ ಸಾಗಿಸುವ ಜಾಲದ ಕಾರ್ಯವೈಖರಿ ಕುರಿತು ತನಿಖಾ ಸಂಸ್ಥೆಗಳು ಮಾಹಿತಿ ಸಂಗ್ರಹಿಸಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಸ್ಟಮ್ಸ್ ಇಲಾಖೆ ₹89.91 ಕೋಟಿ ದಂಡ ವಿಧಿಸಿದ್ದಾರೆ. 399 ಪುಟಗಳ ಆದೇಶದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ವಿವರಗಳು, ಸಾಕ್ಷ್ಯಗಳು ಹಾಗೂ ಇತರ ಅಂಶಗಳನ್ನು ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ರನ್ಯಾ ರಾವ್ ಮನೆಯಲ್ಲಿ ₹2.5 ಕೋಟಿ ನಗದು ಪತ್ತೆ
ತನಿಖೆಯ ಭಾಗವಾಗಿ ಡಿಆರ್‌ಐ ಅಧಿಕಾರಿಗಳು ರನ್ಯಾ ರಾವ್ ಅವರ ನಿವಾಸದ ಮೇಲೆ ಶೋಧ ನಡೆಸಿದ್ದರು. ಈ ಸಂದರ್ಭದಲ್ಲಿ ಸುಮಾರು ₹2.5 ಕೋಟಿ ನಗದು ಹಾಗೂ ₹2.06 ಕೋಟಿ ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿದ್ದವು ಎಂದು ವರದಿಯಾಗಿದೆ.
ಶೋಧದ ವೇಳೆ ವಿವಿಧ ವಿನ್ಯಾಸದ ಚಿನ್ನಾಭರಣಗಳು, ವಜ್ರ ಹಾಗೂ ಅಮೂಲ್ಯ ಹರಳುಗಳಿಂದ ಕೂಡಿದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇವುಗಳಲ್ಲಿ ಪಚ್ಚೆ ಹರಳುಗಳನ್ನು ಹೊಂದಿರುವ ಕುಂದನ್ ನೆಕ್ಲೇಸ್, ವಜ್ರ ಮತ್ತು ಕೆಂಪು ಹರಳುಗಳ ವಂಕಿ, ಪೋಲ್ಕಿ ಕೆಂಪು ಜುಮುಕಿ, ಮುತ್ತಿನ ಮಾಟಿಲ್ ಹಾಗೂ ಹಸಿರು ಹರಳಿನ ಬಳೆ ಸೇರಿವೆ.
ಇದರೊಂದಿಗೆ ಕುಂದನ್ ನೆಕ್ಲೇಸ್ ಸೆಟ್, ಕುಂದನ್ ಹಾರ, ವಜ್ರ ಮತ್ತು ಪಚ್ಚೆ ಕಿವಿಯೋಲೆಗಳು, ಮುತ್ತಿನ ನೆಕ್ಲೇಸ್, ಪೆಂಡೆಂಟ್ ಹಾಗೂ ಕರಿಮಣಿ ಸರ ಸೇರಿದಂತೆ ಹಲವು ಆಭರಣಗಳು ಪತ್ತೆಯಾಗಿದ್ದವು.
ವಿಮಾನ ನಿಲ್ದಾಣದಲ್ಲಿ 14.8 ಕೆ.ಜಿ. ಚಿನ್ನ ಪತ್ತೆ
2025ರ ಮಾರ್ಚ್ 2ರಂದು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ಅವರನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದರು. ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.
ವಿಮಾನ ನಿಲ್ದಾಣದಲ್ಲಿ ನಡೆಸಿದ ತಪಾಸಣೆ ವೇಳೆ ಸುಮಾರು ₹12 ಕೋಟಿ ಮೌಲ್ಯದ 14.8 ಕೆ.ಜಿ. ವಿದೇಶಿ ಮೂಲದ ಚಿನ್ನದ ಬಿಸ್ಕತ್ತುಗಳು ಪತ್ತೆಯಾಗಿದ್ದವು ಎಂದು ವರದಿಯಾಗಿದೆ.
ಈ ಪ್ರಕರಣದಲ್ಲಿ ಆರ್ಥಿಕ ಅಪರಾಧಗಳ ನ್ಯಾಯಾಲಯವು 2025ರ ಮೇ ತಿಂಗಳಲ್ಲಿ ರನ್ಯಾ ರಾವ್ ಅವರಿಗೆ ಡಿಫಾಲ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ, ಕೇಂದ್ರ ಸರ್ಕಾರವು ಅವರ ವಿರುದ್ಧ ಕಾಫಿಪೋಸಾ (COFEPOSA) ಕಾಯ್ದೆಯಡಿ ಕ್ರಮ ಕೈಗೊಂಡಿದ್ದರಿಂದ ಜೈಲಿನಿಂದ ಬಿಡುಗಡೆಯಾಗಲು ಸಾಧ್ಯವಾಗಿರಲಿಲ್ಲ ಎಂದು ವರದಿಯಾಗಿದೆ.
ಇದೀಗ ಕಸ್ಟಮ್ಸ್ ಇಲಾಖೆ ₹89.91 ಕೋಟಿ ದಂಡ ವಿಧಿಸಿರುವುದು ಪ್ರಕರಣದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದೆ.
