ಬಾಲಿವುಡ್‌ನಲ್ಲಿ ಅನೇಕ ನಟಿಯರು ತಮ್ಮ ಅಭಿನಯದಿಂದ ಹೆಸರು ಮಾಡುತ್ತಾರೆ. ಆದರೆ ಕೆಲವರಿಗೆ ತಮ್ಮದೇ ಆದ ಧ್ವನಿಯೇ ದೊಡ್ಡ ಗುರುತಾಗಿ ಬದಲಾಗುತ್ತದೆ. ಅಂಥದ್ದೇ ವಿಶಿಷ್ಟ ಧ್ವನಿಯೊಂದಿಗೆ ಗುರುತಿಸಿಕೊಂಡ ನಟಿ ರಾಣಿ ಮುಖರ್ಜಿ. ಅವರ ಹಸ್ಕಿ ವಾಯ್ಸ್, ಭಾವಪೂರ್ಣ ಮಾತು, ವಿಭಿನ್ನ ಶೈಲಿ ಇವೆಲ್ಲವು ರಾಣಿಯನ್ನು ಬಾಲಿವುಡ್‌ನ ಇತರ ನಟಿಯರಿಗಿಂತ ಭಿನ್ನವಾಗಿಸಿವೆ. ಆದರೆ ಈ ಧ್ವನಿಯೇ ಒಮ್ಮೆ ರಾಣಿ ಬದುಕಿನಲ್ಲಿ ದೊಡ್ಡ ಅಡ್ಡಿಯಾಗಿತ್ತು ಎಂಬುದು ಬಹುಮಂದಿಗೆ ತಿಳಿದಿಲ್ಲ.
1996ರಲ್ಲಿ ಬಂಗಾಳಿ ಚಿತ್ರರಂಗದ ಮೂಲಕ ನಟನಾ ಜೀವನ ಆರಂಭಿಸಿದ ರಾಣಿ ಮುಖರ್ಜಿ, 1997ರಲ್ಲಿ ‘ರಾಜಾ ಕಿ ಆಯೇಗಿ ಬಾರಾತ್’ ಸಿನಿಮಾದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದರು. ಆರಂಭಿಕ ಹಂತದಲ್ಲಿ ದೊಡ್ಡ ಯಶಸ್ಸು ಸಿಗದಿದ್ದರೂ, 1998ರಲ್ಲಿ ಬಿಡುಗಡೆಯಾದ ‘ಗುಲಾಮ್’ ಸಿನಿಮಾ ರಾಣಿಗೆ ದೊಡ್ಡ ಅವಕಾಶವಾಗಿ ಬಂದಿತ್ತು. ಈ ಚಿತ್ರದಲ್ಲಿ ಅವರು ಸೂಪರ್ ಸ್ಟಾರ್ ಅಮೀರ್ ಖಾನ್ ಜೊತೆ ತೆರೆ ಹಂಚಿಕೊಂಡಿದ್ದರು. ಆದರೆ ಇದೇ ಸಿನಿಮಾದಲ್ಲಿ ರಾಣಿ ಮುಖರ್ಜಿ ತಮ್ಮ ಧ್ವನಿಯನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಿಸಿದರು.
ರಾಣಿ ಮುಖರ್ಜಿ ಧ್ವನಿ ಸ್ವಲ್ಪ ಒಡಕು, ಹಸ್ಕಿಯಾಗಿರುವುದರಿಂದ, ಅದು ಪಾತ್ರಕ್ಕೆ ಸೂಕ್ತವಾಗುವುದಿಲ್ಲ ಎಂದು ಅಮೀರ್ ಖಾನ್ ಅಭಿಪ್ರಾಯಪಟ್ಟಿದ್ದರು. ಚಿತ್ರದ ಡಬ್ಬಿಂಗ್ ವೇಳೆ ರಾಣಿಗೆ ಅವಕಾಶ ನೀಡದೇ, ಬೇರೊಬ್ಬರಿಂದ ಧ್ವನಿ ಹಾಕಿಸುವ ನಿರ್ಧಾರ ಕೈಗೊಂಡಿದ್ದರು. ಆಗ ಅಮೀರ್ ಖಾನ್ ಬಾಲಿವುಡ್‌ನ ಅಗ್ರ ನಟರಾಗಿದ್ದರಿಂದ, ಅವರ ಮಾತಿಗೆ ಎದುರು ಹೇಳುವ ಧೈರ್ಯ ರಾಣಿಗೆ ಇರಲಿಲ್ಲ. ಜೊತೆಗೆ ಅವರು ಇಂಡಸ್ಟ್ರಿಯಲ್ಲಿ ಹೊಸಬರಾಗಿದ್ದ ಕಾರಣ, ತಂಡದ ಹಿತದೃಷ್ಟಿಯಿಂದ ಈ ನಿರ್ಧಾರಕ್ಕೆ ಒಪ್ಪಿಕೊಂಡಿದ್ದರು.
ಅಮೀರ್ ಖಾನ್ ಈ ಸಂದರ್ಭದಲ್ಲಿ ಶ್ರೀದೇವಿ ಉದಾಹರಣೆಯನ್ನು ನೀಡಿದ್ದರು. ಶ್ರೀದೇವಿ ಅವರ ಅನೇಕ ಹಿಂದಿ ಸಿನಿಮಾಗಳಲ್ಲಿ ಬೇರೆ ಕಲಾವಿದರು ಧ್ವನಿ ನೀಡಿದ್ದರು. ಹೀಗಾಗಿ ಇದು ಸಾಮಾನ್ಯ ವಿಷಯ ಎಂದು ಹೇಳಿದ್ದರು. ಆದರೆ ರಾಣಿಗೆ ಇದು ಮನಸ್ಸಿಗೆ ತುಂಬಾ ನೋವುಂಟುಮಾಡಿತ್ತು. ತಮ್ಮ ಧ್ವನಿಯೇ ತಮ್ಮ ಶಕ್ತಿಯಾಗಬೇಕು ಎಂದು ಕನಸು ಕಂಡಿದ್ದ ನಟಿಗೆ, ಅದೇ ವಿಲನ್ ಆಗಿರುವ ಅನುಭವ ಉಂಟಾಯಿತು.
ಆದರೆ ರಾಣಿ ಜೀವನದಲ್ಲಿ ದೊಡ್ಡ ತಿರುವು ತಂದ ಸಿನಿಮಾ ಎಂದರೆ ‘ಕುಚ್ ಕುಚ್ ಹೋತಾ ಹೈ’. ಕರಣ್ ಜೋಹರ್ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್ ಖಾನ್, ಕಾಜೋಲ್ ಜೊತೆ ರಾಣಿ ಮುಖರ್ಜಿ ‘ಟೀನಾ’ ಪಾತ್ರದಲ್ಲಿ ಮಿಂಚಿದರು. ಈ ಸಿನಿಮಾದಲ್ಲಿ ರಾಣಿಗೆ ತಮ್ಮದೇ ಧ್ವನಿಯಲ್ಲಿ ಡಬ್ಬಿಂಗ್ ಮಾಡಲು ಅವಕಾಶ ಸಿಕ್ಕಿತ್ತು. ಈ ನಿರ್ಧಾರವನ್ನು ತೆಗೆದುಕೊಂಡವರು ಕರಣ್ ಜೋಹರ್.
ಟೀಸರ್ ಶೂಟಿಂಗ್ ಸಮಯದಲ್ಲಿ ಕರಣ್ ಜೋಹರ್, “ನಿಮ್ಮ ಧ್ವನಿ ಬಗ್ಗೆ ನಿಮಗೆ ಏನಾದರೂ ಸಮಸ್ಯೆಯಿದೆಯೇ?” ಎಂದು ಪ್ರಶ್ನಿಸಿದ್ದರಂತೆ. ರಾಣಿ “ಇಲ್ಲ” ಎಂದು ಉತ್ತರಿಸಿದರು. ಆಗ ಕರಣ್, “ಗುಲಾಮ್ ಸಿನಿಮಾದಲ್ಲಿ ನೀವು ಡಬ್ ಮಾಡಿಲ್ಲವಲ್ಲ?” ಎಂದು ಕೇಳಿದಾಗ, ರಾಣಿ ಹೌದು ಎಂದಿದ್ದರು. ತಕ್ಷಣ ಕರಣ್, “ನನಗೆ ನಿಮ್ಮ ಧ್ವನಿ ಬಹಳ ಇಷ್ಟ. ಈ ಸಿನಿಮಾದಲ್ಲಿ ನೀವು ನಿಮ್ಮದೇ ಧ್ವನಿಯಲ್ಲಿ ಮಾತನಾಡಬೇಕು” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಆ ನಿರ್ಧಾರಕ್ಕೆ ಕರಣ್ ತಂದೆ ಯಶ್ ಜೋಹರ್ ಸ್ವಲ್ಪ ವಿರೋಧ ವ್ಯಕ್ತಪಡಿಸಿದರಂತೆ. ಆದರೆ ಕರಣ್ ತಮ್ಮ ಮಾತಿನಲ್ಲಿ ಹಠ ಹಿಡಿದರು. “ರಾಣಿ ಧ್ವನಿಯೇ ಈ ಪಾತ್ರಕ್ಕೆ ಜೀವ” ಎಂಬ ನಂಬಿಕೆಯಿಂದ ಹಿಂದೆ ಸರಿಯಲಿಲ್ಲ. ಈ ಬೆಂಬಲವೇ ರಾಣಿ ಮುಖರ್ಜಿಗೆ ಹೊಸ ಆತ್ಮವಿಶ್ವಾಸ ನೀಡಿತ್ತು.
ಈ ಘಟನೆಯನ್ನು ನೆನೆದು ರಾಣಿ ಮುಖರ್ಜಿ ಸಂದರ್ಶನವೊಂದರಲ್ಲಿ ಕಣ್ಣೀರಿಟ್ಟಿದ್ದಾರೆ. “ನನ್ನ ಧ್ವನಿಗೆ ಜೀವ ಕೊಟ್ಟವರು ಕರಣ್ ಜೋಹರ್. ಅವರ ಬೆಂಬಲ ಇಲ್ಲದಿದ್ದರೆ, ನನ್ನ ವಾಯ್ಸ್ ಇಂದಿಗೂ ಅಸ್ತಿತ್ವದಲ್ಲಿರುತ್ತಿತ್ತೋ ಇಲ್ಲವೋ ಗೊತ್ತಿಲ್ಲ” ಎಂದು ಹೇಳಿದ್ದಾರೆ. ಆ ಕ್ಷಣದಲ್ಲಿ ಕರಣ್, ರಾಣಿಗೆ ಮುತ್ತಿಟ್ಟು ಸಮಾಧಾನಪಡಿಸಿದ್ದರಂತೆ.
ಇಂದು ರಾಣಿ ಮುಖರ್ಜಿ ಧ್ವನಿಯೇ ಅವರ ದೊಡ್ಡ ಗುರುತು. ಅವರ ಹಸ್ಕಿ ವಾಯ್ಸ್‌ಗೆ ಕೋಟ್ಯಂತರ ಅಭಿಮಾನಿಗಳು ಫಿದಾ ಆಗಿದ್ದಾರೆ. ಒಮ್ಮೆ ವಿಲನ್ ಆಗಿದ್ದ ಧ್ವನಿಯೇ ಇಂದು ಅವರ ಶಕ್ತಿಯಾಗಿ ಬದಲಾಗಿದೆ. ಇದು ಕೇವಲ ನಟಿಯೊಬ್ಬರ ಯಶೋಗಾಥೆಯಲ್ಲ, ನಂಬಿಕೆ, ಹಠ ಮತ್ತು ಬೆಂಬಲ ಇದ್ದರೆ ಅಸಾಧ್ಯವೂ ಸಾಧ್ಯವಾಗುತ್ತದೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ.
