ರೆಟ್ರೋ ಲವ್..ರಣಬಾಲಿಗೆ ಏಂದಯ್ಯ ಸಾಮಿ ಎಂದ ರಶ್ಮಿಕಾ

ರಶ್ಮಿಕಾ-ವಿಜಯ್‌‌ರದ್ದು ಜನುಮ ಜನುಮಗಳ ಪ್ರೇಮ ಯಾನ

Untitled design 2026 09 24T170342.590

ಅಬ್ಬಬ್ಬಾ.. ರಶ್ಮಿಕಾ-ವಿಜಯ್ ದೇವರಕೊಂಡದು ಬರೀ ಈ ಜನ್ಮದ ಲವ್ ಅಲ್ಲ. ಅದು ಜನುಮ ಜನುಮದ ಅನುಬಂಧ. ಯೆಸ್.. ಅದಕ್ಕೆ ಈ ರಣಬಾಲಿ ಸಿನಿಮಾದ ರೆಟ್ರೋ ರೊಮ್ಯಾಂಟಿಕ್ ಸಾಂಗ್ ಪ್ರತ್ಯಕ್ಷ ಸಾಕ್ಷಿ. ಏಂದಯ್ಯ ಸಾಮಿ ಅಂತ ಕಂಪ್ಲೀಟ್ ಲವ್ ಮೂಡ್‌‌ನಲ್ಲಿರೋ ನ್ಯಾಷನಲ್ ಕ್ರಶ್ ರಶ್ಮಿಕಾ ಮೊಹಬ್ಬತ್ ಕಹಾನಿ ಇಲ್ಲಿದೆ ನೋಡಿ…

ಸ್ವಾತಂತ್ರ್ಯ ಸಂಗ್ರಾಮದ ಕುರಿತ ಕಥಾನಕವಾಗಿರೋ ರಣಬಾಲಿ ಸಿನಿಮಾ ತನ್ನ ಟೀಸರ್‌‌ಗಳಿಂದ ಸಿನಿಮಾದ ಗೈರತ್ತು ಎಂಥದ್ದು ಅನ್ನೋದನ್ನ ಅರ್ಥೈಸಿತ್ತು. ಯೆಸ್.. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಜೋಡಿಯಾಗಿ ನಟಿಸಿರೋ ಈ ಸಿನಿಮಾ ಇದೇ ಅಕ್ಟೋಬರ್ 16ಕ್ಕೆ ತೆರೆಗೆ ಬರ್ತಿದ್ದು, ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಹೋರಾಡಿದ ಕೆಚ್ಚೆದೆಯ ವೀರನ ಕಥೆ ಹೊಂದಿದೆ. ಇಂಟರೆಸ್ಟಿಂಗ್ ಅಂದ್ರೆ ಈ ತಾರಾ ಜೋಡಿ ಸತಿ-ಪತಿ ಆದ ಬಳಿಕ ಬರ್ತಿರೋ ಮೊಟ್ಟ ಮೊದಲ ಕಾಂಬೋ ಮೂವಿ.

ಇದೀಗ ರಣಬಾಲಿಯ ಮೊದಲ ಲಿರಿಕಲ್ ವಿಡಿಯೋ ಸಾಂಗ್ ಹೊರಬಿದ್ದಿದೆ. ಏಂದಯ್ಯ ಸಾಮಿ ಅನ್ನೋ ಈ ಹಾಡು, ಮಕ್ಕಳಿಂದ ಮುದುಕರ ವರೆಗೆ ಎಲ್ಲರಿಗೂ ಇಷ್ಟವಾಗುವಂತಹ ಟ್ಯೂನ್‌ ಒಳಗೊಂಡಿದೆ. ಅದ್ರಲ್ಲೂ ಈ ರೊಮ್ಯಾಂಟಿಕ್ ನಂಬರ್‌‌ನಲ್ಲಿ ವಿಜಯ್-ರಶ್ಮಿಕಾ ಕೆಮಿಸ್ಟ್ರಿ ನೆಕ್ಸ್ಟ್ ಲೆವೆಲ್‌‌ಗಿದೆ. ಅದನ್ನ ನೋಡ್ತಿದ್ರೆ ಅವರು ಬರೀ ಜನುಮದಲ್ಲಿ ಮಾತ್ರ ಪ್ರೀತಿಸಿ ಮದ್ವೆ ಆದಂತಿಲ್ಲ.. ಅವರದ್ದು ಜನುಮ ಜನುಮಗಳ ಅನುಬಂಧ ಅಂದ್ರೆ ತಪ್ಪಾಗಲ್ಲ.

ರಾಹುಲ್ ಸಂಕೃತ್ಯನ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಐತಿಹಾಸಿಕ ಚಿತ್ರವು ವಿಜಯದಶಮಿ ಹಬ್ಬದ ವಿಶೇಷ ಅಕ್ಟೋಬರ್ 16ಕ್ಕೆ ಪ್ಯಾನ್ ಇಂಡಿಯಾ ತೆರೆಕಾಣಲು ಸಜ್ಜಾಗಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಐದೂ ಪ್ರಮುಖ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದ್ದು, ಅದಕ್ಕದೆ ತಕ್ಕನಾಗಿ ಸಾಂಗ್ ಕೂಡ ಈಗ ಐದೈದು ಭಾಷೆಗಳಲ್ಲಿ ಬಿಡುಗಡೆ ಮಾಡಿ, ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ ಟೀಂ.

ಚಿತ್ರದಲ್ಲಿ ವಿಜಯ್ ಮತ್ತು ರಶ್ಮಿಕಾ ಪಾತ್ರಗಳ ಮದುವೆಯ ಸಂಭ್ರಮದ ಸನ್ನಿವೇಶದಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. 19ನೇ ಶತಮಾನದ ಸಾಂಪ್ರದಾಯಿಕ ಕಲ್ಯಾಣ ಮಹೋತ್ಸವದ ಸೊಬಗು, ಅಂದಿನ ಕಾಲಘಟ್ಟದ ಗ್ರಾಮೀಣ ವೈಭವ ಹಾಗೂ ಹಬ್ಬದ ವಾತಾವರಣವನ್ನು ಪರದೆಯ ಮೇಲೆ ಅತ್ಯಂತ ನೈಜವಾಗಿ ಮರುಸೃಷ್ಟಿಸಲಾಗಿದೆ. ನವದಂಪತಿಗಳ ನಡುವಿನ ಮುಗ್ಧ ಪ್ರೇಮ, ಒಲವಿನ ತುಂಟಾಟ ಹಾಗೂ ಭಾವನಾತ್ಮಕ ಕ್ಷಣಗಳನ್ನು ಸೆರೆಹಿಡಿದಿರುವ ಈ ಹಾಡು ಕಣ್ಣಿಗೂ ತಂಪು ಕಿವಿಗೂ ಇಂಪು. ಒಟ್ಟಾರೆ ರಸದೌತಣ ನೀಡುವಂತೆ ಅದ್ಭುತವಾಗಿ ಮೂಡಿಬಂದಿದೆ.

ಖ್ಯಾತ ಸಂಗೀತ ಸಂಯೋಜಕರಾದ ಅಜಯ್-ಅತುಲ್ ಈ ಗೀತೆಗೆ ಮಧುರವಾದ ರಾಗ ಸಂಯೋಜನೆ ಮಾಡಿದ್ದು, ರಾಮಜೋಗಯ್ಯ ಶಾಸ್ತ್ರಿ ಅರ್ಥಪೂರ್ಣ ಸಾಹಿತ್ಯ ಒದಗಿಸಿದ್ದಾರೆ. ಗಾಯಕಿ ಶ್ವೇತಾ ಮೋಹನ್ ಮತ್ತು ಅಜಯ್ ಗೊಗಾವಲೆ ತಮ್ಮ ಸುಮಧುರ ಕಂಠದಿಂದ ಈ ಯುಗಳ ಗೀತೆಗೆ ಜೀವ ತುಂಬಿದ್ದಾರೆ. ಕಾವ್ಯಾತ್ಮಕ ಸಾಲುಗಳು, ಮಣ್ಣಿನ ಸೊಗಡಿನ ಇಂಪಾದ ನಾದ ಹಾಗೂ ಸಾರ್ವಕಾಲಿಕ ಪ್ರೇಮದ ಹಿನ್ನೆಲೆಯುಳ್ಳ ಈ ಗೀತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version