ರಮ್ಯಾಗೆ ಅಶ್ಲೀಲ ಕಾಮೆಂಟ್: ದರ್ಶನ್ ಫ್ಯಾನ್ಸ್‌ ವಿರುದ್ಧ ಸೈಬರ್ ಕ್ರೈಮ್ ಕೇಸ್, ಮೂವರು ಅರೆಸ್ಟ್!

ಬೆಂಗಳೂರು ಪೋಲೀಸರ‌ ಕಾರ್ಯಕ್ಕೆ ನಟಿ ರಮ್ಯಾ ಮೆಚ್ಚುಗೆ!

1 (1)

ಬೆಂಗಳೂರು: ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಾಮೆಂಟ್‌ಗಳನ್ನು ಮಾಡಿದ ಆರೋಪದ ಮೇಲೆ ದರ್ಶನ್ ಅಭಿಮಾನಿಗಳಾದ ಮೂವರನ್ನು ಸೈಬರ್ ಕ್ರೈಮ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಸಂಬಂಧಿಸಿದಂತೆ ರಮ್ಯಾ ಟ್ವೀಟ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು, ಇದಕ್ಕೆ ಪ್ರತಿಕ್ರಿಯೆಯಾಗಿ ದರ್ಶನ್ ಅಭಿಮಾನಿಗಳು ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ವಿಚಾರಣೆಗೆ ಒಪ್ಪಿಕೊಂಡಿದ್ದು, 10 ದಿನಗಳ ಬಳಿಕ ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ. ಈ ಸಂದರ್ಭದಲ್ಲಿ ರಮ್ಯಾ ತಮ್ಮ ಟ್ವೀಟ್‌ನಲ್ಲಿ, “ಸರ್ವೋಚ್ಚ ನ್ಯಾಯಾಲಯವು ಭಾರತದ ಸಾಮಾನ್ಯ ಜನರಿಗೆ ಆಶಾಕಿರಣವಾಗಿದೆ, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಇದೆ,” ಎಂದು ಬರೆದಿದ್ದರು.

ಈ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ದರ್ಶನ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ವಿರುದ್ಧ ಅಶ್ಲೀಲ ಕಾಮೆಂಟ್‌ಗಳು ಮತ್ತು ನಿಂದನೆಯನ್ನು ಆರಂಭಿಸಿದರು. ಇದರಿಂದ ಕೋಪಗೊಂಡ ರಮ್ಯಾ, ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ತೆರಳಿ ದೂರು ದಾಖಲಿಸಿದರು.

ರಮ್ಯಾ ದೂರಿನ ಆಧಾರದ ಮೇಲೆ ಸೈಬರ್ ಕ್ರೈಮ್ ಪೊಲೀಸರು ಕೇಂದ್ರ ವಿಭಾಗದ ಸೆನ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಐಟಿ ಆಕ್ಟ್‌ನ ಸೆಕ್ಷನ್ 67, 66 ಜೊತೆಗೆ BNS ಸೆಕ್ಷನ್‌ಗಳಾದ 351(2), 351(3), 352, 75(1)(4), ಮತ್ತು 79ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಮೋದ್ ಗೌಡ ಎಂಬ ವ್ಯಕ್ತಿಯ ಸೇರಿದಂತೆ 43 ಸೋಷಿಯಲ್ ಮೀಡಿಯಾ ಖಾತೆಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆಗಸ್ಟ್ 1ರಂದು ಸೈಬರ್ ಕ್ರೈಮ್ ತಂಡವು ಸೋಷಿಯಲ್ ಮೀಡಿಯಾ ಐಡಿಗಳನ್ನು ಪರಿಶೀಲಿಸಿ, ಮೂವರನ್ನು ಗುರುತಿಸಿ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಈಗ ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.

Exit mobile version