ಭಾರತೀಯ ಸಿನೀಮಾದಲ್ಲಿ ಅತ್ಯಂತ ನಿರೀಕ್ಷೆ ಮೂಡಿಸಿರುವ ಚಿತ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಸಿನಿಮಾ ‘ರಾಮಾಯಣ’. ಭಾರತೀಯ ಸಂಸ್ಕೃತಿ, ನಂಬಿಕೆ, ಪುರಾಣ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ವಿಶ್ವದ ಮುಂದೆ ಅದ್ದೂರಿಯಾಗಿ ಪರಿಚಯಿಸುವ ಉದ್ದೇಶದಿಂದ ನಿರ್ಮಾಣವಾಗುತ್ತಿರುವ ಈ ಬಿಗ್ ಬಜೆಟ್ ಸಿನಿಮಾ ಈಗಾಗಲೇ ದೇಶ-ವಿದೇಶಗಳಲ್ಲಿ ಭಾರೀ ಕುತೂಹಲ ಹುಟ್ಟುಹಾಕಿದೆ.
ವಿಶೇಷವಾಗಿ ಕನ್ನಡಿಗರಿಗೆ ಈ ಸಿನಿಮಾ ಮತ್ತಷ್ಟು ಹೆಮ್ಮೆಯ ವಿಷಯವಾಗಿದ್ದು, ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಬಹುನಿರೀಕ್ಷಿತ ಚಿತ್ರದ ಟ್ರೇಲರ್ ಬಿಡುಗಡೆಗೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆಯುತ್ತಿರುವ ವಿಶ್ವಪ್ರಸಿದ್ಧ ಸ್ಯಾನ್ ಡಿಯಾಗೋ ಕಾಮಿಕ್ ಕಾನ್ ವೇದಿಕೆಯಲ್ಲಿ ‘ರಾಮಾಯಣ’ ಚಿತ್ರದ ಟ್ರೇಲರ್ ಅನಾವರಣಗೊಳ್ಳಲಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲು ನಟ ಯಶ್ ಹಾಗೂ ರಣಬೀರ್ ಕಪೂರ್ ಮುಂಬೈ ವಿಮಾನ ನಿಲ್ದಾಣದಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ.
ವಿಶ್ವದ ಅತಿದೊಡ್ಡ ಪಾಪ್-ಕಲ್ಚರ್ ಹಾಗೂ ಮನರಂಜನಾ ಉತ್ಸವಗಳಲ್ಲಿ ಒಂದಾದ ಕಾಮಿಕ್ ಕಾನ್‌ನಲ್ಲಿ ಭಾರತೀಯ ಸಿನಿಮಾದ ಟ್ರೇಲರ್ ಪ್ರದರ್ಶನವಾಗುತ್ತಿರುವುದು ಭಾರತೀಯ ಚಿತ್ರರಂಗಕ್ಕೆ ಹೆಮ್ಮೆಯ ಕ್ಷಣವಾಗಿದೆ.
ಇದಕ್ಕೂ ಮುನ್ನ ಆಯ್ದ ಕೆಲವರಿಗೆ ಮಾತ್ರ ಚಿತ್ರದ ಟ್ರೇಲರ್ ಪ್ರದರ್ಶಿಸಲಾಗಿತ್ತು. ಆದರೆ ಈಗ ಮೊದಲ ಬಾರಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸಾವಿರಾರು ಸಿನಿಪ್ರಿಯರ ಮುಂದೆ ಟ್ರೇಲರ್ ಅನಾವರಣಗೊಳ್ಳಲಿದ್ದು, ಜಾಗತಿಕ ಮಟ್ಟದಲ್ಲಿ ಚಿತ್ರದ ಕುರಿತು ಇನ್ನಷ್ಟು ಚರ್ಚೆ ನಡೆಯುವ ನಿರೀಕ್ಷೆ ಇದೆ. ಚಿತ್ರದಲ್ಲಿ ಹಾಲಿವುಡ್ ಸೇರಿದಂತೆ ವಿವಿಧ ದೇಶಗಳ ತಂತ್ರಜ್ಞರು ಕೆಲಸ ಮಾಡಿರುವುದರಿಂದ ಅದರ ತಾಂತ್ರಿಕ ಗುಣಮಟ್ಟವೂ ವಿಶೇಷ ಆಕರ್ಷಣೆಯಾಗಿದೆ.
ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಪಡೆದಿವೆ. ಅದ್ಧೂರಿ ದೃಶ್ಯ ವೈಭವ, ಭವ್ಯ ಸೆಟ್‌ಗಳು ಮತ್ತು ಅತ್ಯಾಧುನಿಕ ದೃಶ್ಯ ಪರಿಣಾಮಗಳು ಸಿನಿಪ್ರಿಯರ ಗಮನ ಸೆಳೆದಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ. ‘ರಾಮಾಯಣ’ದ ಮೊದಲ ಭಾಗ ಈ ವರ್ಷದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಭಾರತೀಯ ಚಿತ್ರರಂಗದ ಹೊಸ ಮೈಲಿಗಲ್ಲಾಗುವ ವಿಶ್ವಾಸ ಚಿತ್ರತಂಡಕ್ಕಿದೆ.
ನಮಿತ್ ಮಲ್ಹೋತ್ರ ನಿರ್ಮಿಸುತ್ತಿರುವ ಈ ಮಹತ್ವಾಕಾಂಕ್ಷೆಯ ಚಿತ್ರವನ್ನು ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶಿಸುತ್ತಿದ್ದಾರೆ. ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ಅಭಿನಯಿಸುತ್ತಿದ್ದರೆ, ರಾವಣನಾಗಿ ಯಶ್ ತಮ್ಮ ವಿಭಿನ್ನ ಅಭಿನಯದ ಮೂಲಕ ಹೊಸ ಮೆರಗು ನೀಡಲಿದ್ದಾರೆ. ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ರವಿ ದುಬೆ, ಅರುಣ್ ಗೋವಿಲ್, ಇಂದಿರಾ ಕೃಷ್ಣನ್, ಲಾರಾ ದತ್ತಾ ಸೇರಿದಂತೆ ಅನೇಕ ಖ್ಯಾತ ಕಲಾವಿದರು ರಾಮಾಯಣದ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಭಾರೀ ಬಜೆಟ್, ಅತ್ಯಾಧುನಿಕ ತಂತ್ರಜ್ಞಾನ, ಅಂತರರಾಷ್ಟ್ರೀಯ ಮಟ್ಟದ ತಂತ್ರಜ್ಞರ ತಂಡ ಮತ್ತು ಸ್ಟಾರ್ ಕಲಾವಿದರ ಸಮಾಗಮದಿಂದ ರೂಪುಗೊಂಡಿರುವ ‘ರಾಮಾಯಣ’ ಭಾರತೀಯ ಸಿನೀಮಾವನ್ನು ಜಾಗತಿಕ ಮಟ್ಟದಲ್ಲಿ ಮತ್ತೊಂದು ಎತ್ತರಕ್ಕೆ ಕೊಂಡೊಯ್ಯುವ ಚಿತ್ರವಾಗಲಿದೆ ಎಂಬ ನಿರೀಕ್ಷೆ ಸಿನಿಪ್ರಿಯರಲ್ಲಿ ಮನೆ ಮಾಡಿದೆ.
