ರಣ್ಬೀರ್ ರಾಮಾಯಣ..ರಾಮನಾಮಕ್ಕೆ 5 ಕೋಟಿ ವೀವ್ಸ್..!

ಜೈ ಜೈ ರಾಮ್ ಭಕ್ತಿಗೀತೆ.. ದಿವ್ಯ ಸಂಗೀತ ಪಯಣ ಶುಭಾರಂಭ

Your paragraph text (73)

ಬೆಳಕಿನ ಹಬ್ಬ ದೀಪಾವಳಿಗೆ ಬರ್ತಿರೋ ರಾಮಾಯಣ ಪಾರ್ಟ್-1 ಸಿನಿಮಾದ ಪ್ರಮೋಷನ್ಸ್ ಭರ್ಜರಿಯಾಗಿ ನಡೆಯುತ್ತಿದೆ. ರಣ್ಬೀರ್-ರಾಕಿಂಗ್ ಸ್ಟಾರ್ ಯಶ್ ರಾಮಾಯಣದ ರಾಮನಾಮ ಗೀತೆಯಿಂದ ಗಾನ ಬಜಾನ ಶುರುವಾಗಿದ್ದು, ಎಲ್ಲರ ಕಣ್ಮನ ತಣಿಸುತ್ತಿದೆ ಆ ದೃಶ್ಯಚಿತ್ತಾರ. ಜೈ ಜೈ ರಾಮ್ ಅನ್ನೋ ರಾಮ ಜಪದ ಗೀತೆಗೆ ಅಭೂತಪೂರ್ವ ಪ್ರಶಂಸೆ ವ್ಯಕ್ತವಾಗಿದ್ದು, ಕೋಟ್ಯಂತರ ವೀವ್ಸ್‌ಗೆ ಸಾಕ್ಷಿ ಆಗಿದೆ. ಇದರ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ..

ಜೈ ಜೈ ರಾಮ್.. ಇದು ಜಾಗತಿಕ ಮಟ್ಟದಲ್ಲಿ ತೀವ್ರ ಕುತೂಹಲ ಮೂಡಿಸಿರುವ, ನಿತೀಶ್ ತಿವಾರಿ ನಿರ್ದೇಶನದ ಮಹಾನ್ ದೃಶ್ಯಕಾವ್ಯ ರಾಮಾಯಣ ಚಿತ್ರದ ಮೊದಲ ಸಾಂಗ್ ಝಲಕ್. ಈ ಮೂಲಕ ಅದ್ರ ಮ್ಯೂಸಿಕಲ್‌ ಜರ್ನಿ ಅಧಿಕೃತವಾಗಿ ಚಾಲನೆ ಪಡೆದಿದೆ. ಶ್ರೀರಾಮನ ದಿವ್ಯ ಚೇತನವನ್ನ ಕೊಂಡಾಡುವ ‘ಜೈ ಜೈ ರಾಮ್’ ಅನ್ನೋ ಸಾಂಗ್ ಬಿಡುಗಡೆ ಮಾಡಿ, ಪ್ರಚಾರದ ಮೊದಲ ಹೆಜ್ಜೆಯನ್ನ ಇಟ್ಟಿದೆ. ಆಧ್ಯಾತ್ಮಿಕ ಆರತಿಯ ಪವಿತ್ರತೆಯೊಂದಿಗೆ ವಿಶಾಲವಾದ ಸಿನಿಮಾ ಸಂಗೀತವನ್ನು ಬ್ಲೆಂಡ್ ಮಾಡಿ ಈ ಹಾಡನ್ನ ತಯಾರಿಸಲಾಗಿದೆ. ಇತ್ತೀಚೆಗೆ ರಿಲೀಸ್ ಆದ ಈ ಗೀತೆ ಯೂಟ್ಯೂಬ್‌ನಲ್ಲಿ 5 ಕೋಟಿಗಿಂತ ಅಧಿಕ ವೀವ್ಸ್ ಪಡೆದಿರೋದು ಇಂಟರೆಸ್ಟಿಂಗ್.

ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ಈ ದಿವ್ಯ ಗೀತೆಗೆ ಸ್ವರ ಸಂಯೋಜನೆ ಮಾಡಿರೋದು ವಿಶೇಷ. ಕನ್ನಡ ಆವೃತ್ತಿಗೆ ವರದರಾಜ್ ಚಿಕ್ಕಬಳ್ಳಾಪುರ ಸಾಹಿತ್ಯ ರಚಿಸಿದ್ದು, ಗಾಯಕರಾದ ರಾಘವ್ ಕೌಶಿಕ್ ಮತ್ತು ರಕ್ಷಿತಾ ಸುರೇಶ್ ತಮ್ಮ ದೈವಿಕ ಕಂಠಸಿರಿಯಲ್ಲಿ ಹಾಡಿದ್ದಾರೆ. ಶ್ರೀರಾಮನ ಕರುಣೆ, ಅಭಯ, ರಕ್ಷಣೆ ಹಾಗೂ ಧರ್ಮನಿಷ್ಠೆಯನ್ನು ಬಣ್ಣಿಸುವ ಈ ಸಾಲುಗಳು, ಮತ್ತೆ ಮತ್ತೆ ಪುನರಾವರ್ತನೆಯಾಗುವ ‘ಜೈ ಜೈ ರಾಮ್’ ನಾಮಸ್ಮರಣೆಯ ಮೂಲಕ ಕೇಳುಗರ ಮನಸ್ಸಿನಲ್ಲಿ ಭಕ್ತಿಯ ರಸವನ್ನು ಉಕ್ಕುವಂತೆ ಮಾಡಿದೆ.

ಈ ಕುರಿತು ಮಾತನಾಡಿದ ನಿರ್ಮಾಪಕ ನಮಿತ್ ಮಲ್ಹೋತ್ರಾ, ಶ್ರೀರಾಮ ರಾಮಾಯಣದ ಹೃದಯಭಾಗವಾಗಿದ್ದು.. ತಲೆಮಾರುಗಳಿಂದ ಪ್ರತಿಯೊಬ್ಬರ ಜೀವನದ ದಾರಿದೀಪವಾಗಿದ್ದಾನೆ. ಕತ್ತಲೆಯ ಕ್ಷಣಗಳಲ್ಲಿ ಆತನ ಶಕ್ತಿ, ಗೊಂದಲದ ಸಮಯದಲ್ಲಿ ಆತನ ಧರ್ಮದ ಮಾರ್ಗ ಹಾಗೂ ಸಂತೋಷದ ಕ್ಷಣಗಳಲ್ಲಿ ಕೃತಜ್ಞತೆಯಿಂದ ಆತನನ್ನು ಸ್ಮರಿಸಲಾಗುತ್ತದೆ. ‘ಜೈ ಜೈ ರಾಮ್’ ಗೀತೆಯು ಪ್ರತಿಯೊಬ್ಬ ಭಾರತೀಯನು ಶ್ರೀರಾಮನೊಂದಿಗೆ ಹೊಂದಿರುವ ಅತ್ಯಂತ ವೈಯಕ್ತಿಕ ಮತ್ತು ಪವಿತ್ರ ಸಂಬಂಧದ ಅಭಿವ್ಯಕ್ತಿಯಾಗಿದೆ ಎಂದು ಅವರು ಹಂಚಿಕೊಂಡಿದ್ದಾರೆ.

ಅಷ್ಟೆ ಅಲ್ಲದೆ.. ರಾಮಾಯಣವನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸುತ್ತಿದ್ದರೂ, ಅದರ ನಿಜವಾದ ತಳಹದಿ ಇರುವುದು ನಮ್ಮ ಭಾವನೆ, ಮೌಲ್ಯ ಮತ್ತು ಭಕ್ತಿಯಲ್ಲಿ ಎಂದಿದ್ದಾರೆ. ಆದ್ದರಿಂದಲೇ ಸಿನಿಮಾದ ಮೊದಲ ಹಾಡು ಆ ಆತ್ಮವನ್ನು ಪ್ರತಿಬಿಂಬಿಸಬೇಕು ಎಂಬ ಉದ್ದೇಶದಿಂದ ರೂಪಿಸಲಾಗಿದೆ. ಶ್ರೀರಾಮ ಕೇವಲ ನಾವು ಪೂಜಿಸುವ ದೇವರಷ್ಟೇ ಅಲ್ಲ, ನಮ್ಮೊಳಗೆ ನಾವು ಕೊಂಡೊಯ್ಯುವ ಧೈರ್ಯ, ಮಾರ್ಗದರ್ಶಿ ಮತ್ತು ಶಕ್ತಿಯ ಮೂಲ ಅನ್ನೋದನ್ನ ಈ ಗೀತೆ ಪ್ರತಿಯೊಬ್ಬರಿಗೂ ನೆನಪಿಸುತ್ತದೆ ಎಂದಿದ್ದಾರೆ.

ಶ್ರೀರಾಮನ ಹೆಸರಿನ ಸರಳ ಮತ್ತು ಶಕ್ತಿಯುತ ಜಪವೇ ಈ ‘ಜೈ ಜೈ ರಾಮ್’ ಹಾಡಿನ ಜೀವಾಳವಾಗಿದೆ ಎಂದಿದ್ದಾರೆ ಸಂಯೋಜಕ ಎ ಆರ್ ರೆಹಮಾನ್. ಕಿವಿಗೆ ತಲುಪುವ ಪ್ರಾರ್ಥನೆಯ ಸಾತ್ವಿಕತೆ ಮತ್ತು ನೈರ್ಮಲ್ಯವನ್ನು ಕಾಯ್ದುಕೊಳ್ಳುತ್ತಲೇ, ಅದನ್ನ ವಿಶಾಲವಾದ ಸಿನಿಮಾ ಮಟ್ಟದ ಗೀತೆಯಾಗಿ ಬೆಳೆಸುವುದು ತಮ್ಮ ಮುಖ್ಯ ಉದ್ದೇಶವಾಗಿತ್ತು. ಸಾಹಿತ್ಯದ ಭಕ್ತಿಭಾವಕ್ಕೆ ಗಾಯಕರು ತಮ್ಮ ಎಮೋಷನಲ್ ಗಾಯನದ ಮೂಲಕ ಜೀವ ತುಂಬಿದ್ದು, ಈ ಹಾಡು ಆಲಿಸುವ ಪ್ರತಿ ಹೃದಯಕ್ಕೂ ಶಾಂತಿ, ನೆಮ್ಮದಿ ಮತ್ತು ದೈವಿಕ ಸಂಪರ್ಕವನ್ನು ನೀಡುತ್ತದೆ ಅಂತ ಅದ್ರ ಭಾವ ಸಾರಿದ್ದಾರೆ.

ದಂಗಲ್ ಫೇಮ್ ಡೈರೆಕ್ಟರ್ ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರ್ತಿರೋ ಈ ದೃಶ್ಯಕಾವ್ಯದಲ್ಲಿ ಬಹುದೊಡ್ಡ ತಾರಾಗಣವಿದೆ. ಚಿತ್ರದಲ್ಲಿ ಶ್ರೀರಾಮನಾಗಿ ರಣ್ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ಲಂಕೇಶ್ವರ ರಾವಣನಾಗಿ ನಮ್ಮ ರಾಕಿಂಗ್ ಸ್ಟಾರ್ ಯಶ್, ಹನುಮಂತನಾಗಿ ಸನ್ನಿ ಡಿಯೋಲ್ ಹಾಗೂ ಲಕ್ಷ್ಮಣನಾಗಿ ರವಿ ದುಬೆ ಅಭಿನಯಿಸಿದ್ದಾರೆ. ಈ ಮಹೋನ್ನತ ಚಿತ್ರವನ್ನ ನಮಿತ್ ಮಲ್ಹೋತ್ರಾ ತಮ್ಮ ‘ಪ್ರೈಮ್ ಫೋಕಸ್ ಸ್ಟುಡಿಯೋಸ್’, 8 ಬಾರಿ ಆಸ್ಕರ್ ಪ್ರಶಸ್ತಿ ವಿಜೇತ ಜಾಗತಿಕ ವಿಎಫ್‌ಎಕ್ಸ್ ಸಂಸ್ಥೆ ‘DNEG’ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ‘ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್’ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿವೆ. ದೀಪಾವಳಿ ಪ್ರಯುಕ್ತ ರಾಮಾಯಣ ಪಾರ್ಟ್-1 ಇದೇ ನವೆಂಬರ್ 6ಕ್ಕೆ ಬೆಳ್ಳಿಪರದೆ ಬೆಳಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version