ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ರಾಕೇಶ್ ಪೂಜಾರಿ ನಿಧನ

Untitled design 2025 05 12t065524.450

ಝೀ ಕನ್ನಡ ವಾಹಿನಿಯ ಜನಪ್ರಿಯ ಕಾಮಿಡಿ ಕಾರ್ಯಕ್ರಮ ‘ಕಾಮಿಡಿ ಕಿಲಾಡಿ’ ಸೀಸನ್-3ರ ವಿಜೇತ, ಪ್ರತಿಭಾನ್ವಿತ ಕಲಾವಿದ ರಾಕೇಶ್ ಪೂಜಾರಿ ಅವರು ನಿಧನರಾಗಿದ್ದಾರೆ. ರಾಕೇಶ್ ಅವರ ಆಕಸ್ಮಿಕ ಸಾವು ಅವರ ಅಭಿಮಾನಿಗಳಿಗೆ ಮಾತ್ರವಲ್ಲ, ಕಿರುತೆರೆಯ ಸಹ ಕಲಾವಿದರಿಗೂ ಆಘಾತವನ್ನುಂಟು ಮಾಡಿದೆ..

ರಾಕೇಶ್ ಪೂಜಾರಿ ಅವರು ಕಾಮಿಡಿ ಕಿಲಾಡಿ ಕಾರ್ಯಕ್ರಮದ ಮೂಲಕ ಕರ್ನಾಟಕದ ಮನೆಮಾತಾಗಿದ್ದರು. ಅವರ ಹಾಸ್ಯ, ಸಹಜತೆ, ಮತ್ತು ಜನರನ್ನು ನಗಿಸುವ ವಿಶಿಷ್ಟ ಶೈಲಿಯಿಂದಾಗಿ ಎಲ್ಲರ ಮನಗೆದ್ದಿದ್ದರು. ಕಾರ್ಯಕ್ರಮದ ಸೀಸನ್-3ರಲ್ಲಿ ತಮ್ಮ ಅದ್ಭುತ ಪ್ರದರ್ಶನದಿಂದ ವಿಜೇತರಾಗಿ ಹೊರಹೊಮ್ಮಿದ್ದ ರಾಕೇಶ್, ಕಿರುತೆರೆಯ ಜೊತೆಗೆ ತುಳು ರಂಗಭೂಮಿಯಲ್ಲೂ ತಮ್ಮದೇ ಛಾಪು ಮೂಡಿಸಿದ್ದರು.

ರಾಕೇಶ್ ಅವರ ಆಪ್ತರ ಪ್ರಕಾರ, ಅವರು ಆರೋಗ್ಯವಾಗಿದ್ದರು ಮತ್ತು ಯಾವುದೇ ಗಂಭೀರ ಅನಾರೋಗ್ಯದಿಂದ ಬಳಲುತ್ತಿರಲಿಲ್ಲ. ದಿನಾಂಕ 11 ಮೇ 2025ರಂದು ತಮ್ಮ ಊರಿನಲ್ಲಿ ನಡೆದ ಮದುವೆಯ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾಕೇಶ್, ಎಂದಿನಂತೆ ತಮ್ಮ ಉತ್ಸಾಹದಿಂದ ಡ್ಯಾನ್ಸ್ ಮಾಡಿ, ಎಲ್ಲರ ಜೊತೆ ಸಂತೋಷದ ಕ್ಷಣಗಳನ್ನು ಕಳೆದಿದ್ದರು. ಆದರೆ, ಕಾರ್ಯಕ್ರಮದ ಬಳಿಕ ರಾಕೇಶ್ ಅವರಿಗೆ ಆಕಸ್ಮಿಕವಾಗಿ ರಕ್ತದೊತ್ತಡ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದರು ಎಂದು ವೈದ್ಯರು ದೃಢಪಡಿಸಿದ್ದಾರೆ.

ಕಾಮಿಡಿ ಕಿಲಾಡಿ ಕಾರ್ಯಕ್ರಮದ ನಿರ್ಣಾಯಕರಾಗಿದ್ದ ನಟಿ ರಕ್ಷಿತಾ ಪ್ರೇಮ್ ಅವರು ರಾಕೇಶ್ ಅವರ ನಿಧನಕ್ಕೆ ಭಾವುಕವಾಗಿ ಸ್ಪಂದಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಕ್ಷಿತಾ ಬರೆದುಕೊಂಡಿದ್ದಾರೆ. “ಮಗನೇ, ನಿನ್ನನ್ನು ತುಂಬಾ ಮಿಸ್ ಮಾಡುತ್ತೇನೆ. ಕಾಮಿಡಿ ಕಿಲಾಡಿ ನನಗೆ ಹೃದಯಕ್ಕೆ ತುಂಬಾ ಹತ್ತಿರವಾದ ಕಾರ್ಯಕ್ರಮ. ನೀನು ಅದರ ಒಂದು ಶಕ್ತಿಯಾಗಿದ್ದೆ. ನಿನ್ನಂತಹ ಅದ್ಭುತ ವ್ಯಕ್ತಿಯ ಆತ್ಮ ಶಾಂತಿಗಾಗಿ ಪ್ರಾರ್ಥಿಸುತ್ತೇನೆ.” ರಕ್ಷಿತಾ ಭಾವುಕರಾಗಿ ಬರೆದುಕೊಂಡಿದ್ದಾರೆ.

ರಾಕೇಶ್ ಪೂಜಾರಿ ಅವರ ಸಾವಿನ ಸುದ್ದಿಯಿಂದ ಕಿರುತೆರೆಯ ಕಲಾವಿದರು, ತುಳು ರಂಗಭೂಮಿಯ ಸಹ ಕಲಾವಿದರು, ಮತ್ತು ಅವರ ಅಭಿಮಾನಿಗಳು ದಿಗ್ಭ್ರಮೆಗೊಂಡಿದ್ದಾರೆ.

Exit mobile version