ಶೆಟ್ಟಿ ಗ್ಯಾಂಗ್‌ನಲ್ಲಿ ಬಿರುಕು..? ರಾಜ್ ಬಿ.ಶೆಟ್ಟಿ ಸ್ಪಷ್ಟನೆ!

ಪ್ರಶಾಂತ್ ವೀರ್ (7)

ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ಕಲಾವಿದರಾದ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಮತ್ತು ರಾಜ್ ಬಿ. ಶೆಟ್ಟಿ ಅವರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದವು. ಅದರಲ್ಲೂ ಪ್ರಮುಖವಾಗಿ ’45’ ಸಿನಿಮಾ ಟ್ರೈಲರ್ ಬಿಡುಗಡೆ ವೇಳೆ ರಿಷಬ್ ಶೆಟ್ಟಿ ಅವರು ರಾಜ್ ಬಿ. ಶೆಟ್ಟಿ ಅವರ ಹೆಸರನ್ನು ಬಿಟ್ಟು ಉಳಿದಂತೆ ಎಲ್ಲರಿಗೂ ವಿಶ್‌ ಮಾಡಿದ್ದರು ಇದು ಅಲ್ಲರ ಅನುಮಾನಕ್ಕೆ ಕಾರಣವಾಗಿತ್ತು. ಈ ಕುರಿತಾದ ಎಲ್ಲಾ ವದಂತಿಗಳಿಗೆ ಈಗ ಸ್ವತಃ ರಾಜ್ ಬಿ. ಶೆಟ್ಟಿ ಅವರೇ ಸ್ಪಷ್ಟೀಕರಣ ನೀಡಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಚಿತ್ರ ’45’ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ರಿಷಬ್ ಶೆಟ್ಟಿ ಅವರು, ಸಿನಿಮಾ ತಂಡಕ್ಕೆ ಶುಭ ಕೋರಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಆದರೆ, ಈ ವಿಡಿಯೋದಲ್ಲಿ ರಿಷಬ್ ಅವರು ಶಿವಣ್ಣ ಮತ್ತು ಉಪೇಂದ್ರ ಅವರ ಬಗ್ಗೆ ಮಾತನಾಡಿದರಾದರೂ, ಪ್ರಮುಖ ಪಾತ್ರಧಾರಿಗಳಲ್ಲಿ ಒಬ್ಬರಾದ ರಾಜ್ ಬಿ. ಶೆಟ್ಟಿ ಅವರ ಹೆಸರನ್ನು ಎಲ್ಲೂ ಉಲ್ಲೇಖಿಸಿರಲಿಲ್ಲ. ಇದು ಅಭಿಮಾನಿಗಳ ವಲಯದಲ್ಲಿ ರಿಷಬ್ ಬೇಕಂತಲೇ ರಾಜ್ ಹೆಸರನ್ನು ಕೈಬಿಟ್ಟರಾ ? ಎಂಬ ಪ್ರಶ್ನೆ ಮೂಡಲು ಕಾರಣವಾಗಿತ್ತು.

ಇನ್ನೊಂದೆಡೆ, ಮೊದಲ ಭಾಗದ ‘ಕಾಂತಾರ’ ಸಿನಿಮಾ ಯಶಸ್ಸಿನ ಹಿಂದೆ ರಕ್ಷಿತ್ ಮತ್ತು ರಾಜ್ ಅವರ ಸಲಹೆ-ಸಹಕಾರ ದೊಡ್ಡದಾಗಿತ್ತು. ಆದರೆ, ಈ ಬಾರಿಯ ‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಹಂತದಲ್ಲೂ ಈ ಇಬ್ಬರು ನಟರು ರಿಷಬ್ ಅವರ ಜೊತೆ ಕಾಣಿಸಿಕೊಳ್ಳದಿರುವುದು ಮತ್ತು ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಬಗ್ಗೆ ಪೋಸ್ಟ್ ಹಂಚಿಕೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ಈ ಎಲ್ಲಾ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ ರಾಜ್ ಬಿ. ಶೆಟ್ಟಿ, ನಮ್ಮ ನಡುವೆ ಯಾವುದೇ ಮನಸ್ತಾಪ ಇಲ್ಲ. ರಿಷಬ್ ಅವರ ವಿಡಿಯೋದಲ್ಲಿ ಫ್ಲೋನಲ್ಲಿ ಹೇಳುವಾಗ ನನ್ನ ಹೆಸರು ಮಿಸ್ ಆಗಿರಬಹುದು ಅಷ್ಟೇ. ಇದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ನಾವೇನು ಜಗಳ ಮಾಡಿಕೊಂಡು ಕೂರಲು ಕಾಲೇಜು ಮಕ್ಕಳಲ್ಲ. ಇಂತಹ ಸಣ್ಣ ವಿಚಾರಗಳನ್ನು ದೊಡ್ಡದು ಮಾಡಿದರೆ ಇಂಡಸ್ಟ್ರಿ ಬೆಳೆಯುವುದಿಲ್ಲ. ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.

ಕಾಂತಾರ ಸಿನಿಮಾದಲ್ಲಿ ಭಾಗಿಯಾಗದಿರುವ ಬಗ್ಗೆಯೂ ಸ್ಪಷ್ಟನೆ ನೀಡಿದ ಅವರು, ನಾನು ‘ಕಾಂತಾರ: ಚಾಪ್ಟರ್ 1’ ರಲ್ಲಿ ಭಾಗಿಯಾಗುತ್ತಿಲ್ಲ ಎಂದು ಮೊದಲೇ ಹೇಳಿದ್ದೆ. ಆ ಸಿನಿಮಾದಲ್ಲಿ ನನ್ನ ಅವಶ್ಯಕತೆ ಇಲ್ಲದಿರಬಹುದು. ಮುಂದೆ ರಿಷಬ್ ಅವರಿಗೆ ನನ್ನ ಅವಶ್ಯಕತೆ ಇರುವಂತಹ ಕಥೆ ಸಿಕ್ಕರೆ ಖಂಡಿತವಾಗಿ ನಾವು ಜೊತೆಯಾಗಿ ಕೆಲಸ ಮಾಡುತ್ತೇವೆ,” ಎಂದು ಭರವಸೆ ನೀಡಿದ್ದಾರೆ.

Exit mobile version