ಧಾರಾವಾಹಿ ಶೂಟಿಂಗ್‌ ವೇಳೆ ದುರಂತ; ಸಮುದ್ರದಲ್ಲಿ ಮುಳುಗಿ ಖ್ಯಾತ ನಟ ರಾಹುಲ್ ನಿಧನ

Untitled design 2026 03 29T225458.079

ಒಡಿಶಾ ಸಮುದ್ರ ತೀರದಲ್ಲಿ ನಡೆದ ಚಿತ್ರೀಕರಣದ ವೇಳೆ ದೋಣಿ ಅಪಘಾತದಲ್ಲಿ ಖ್ಯಾತ ಬಂಗಾಳಿ ನಟ ರಾಹುಲ್ ಅರುಣೋದಯ ಬ್ಯಾನರ್ಜಿ ಅವರು ದುರ್ಘಟನೆಯಿಂದ ಸಾವನ್ನಪ್ಪಿದ್ದಾರೆ. ಈ ದುರಂತ ಸುದ್ದಿ ಬಂಗಾಳಿ ಚಿತ್ರರಂಗಕ್ಕೆ ಭಾರೀ ಆಘಾತ ಉಂಟುಮಾಡಿದೆ.

ಘಟನೆ ಒಡಿಶಾದ ಬಾಲಸೋರ್ ಸಮೀಪದ ಸಮುದ್ರ ಪ್ರದೇಶದಲ್ಲಿ ನಡೆದಿದೆ. ಚಿತ್ರಿಕರಣದ ಭಾಗವಾಗಿ ದೋಣಿ ವಿಹಾರ ಮಾಡುತ್ತಿದ್ದ ವೇಳೆ ರಾಹುಲ್ ಅರುಣೋದಯ ಬ್ಯಾನರ್ಜಿ ಅವರು ಅಕಸ್ಮಾತ್ ಸಮುದ್ರಕ್ಕೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ತಕ್ಷಣವೇ ಸ್ಥಳೀಯರು ಹಾಗೂ ರಕ್ಷಣಾ ತಂಡಗಳು ಕಾರ್ಯಾಚರಣೆ ಆರಂಭಿಸಿ ಅವರನ್ನು ಹೊರತೆಗೆದರು. ಬಳಿಕ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಅವರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಈ ದುರಂತದ ಬಳಿಕ ಅವರ ಮೃತದೇಹವನ್ನು ಪಶ್ಚಿಮ ಬಂಗಾಳದ ದಿಘಾ ರಾಜ್ಯ ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು. ಘಟನೆಗೆ ಸಂಬಂಧಿಸಿದಂತೆ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹವಾಮಾನ ಪರಿಸ್ಥಿತಿ, ಭದ್ರತಾ ಕ್ರಮಗಳ ಕೊರತೆ ಅಥವಾ ಇತರ ತಾಂತ್ರಿಕ ಕಾರಣಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ರಾಹುಲ್ ಅರುಣೋದಯ ಬ್ಯಾನರ್ಜಿ ಅವರು 1983ರ ಅಕ್ಟೋಬರ್ 16ರಂದು ಕೋಲ್ಕತ್ತಾದಲ್ಲಿ ಜನಿಸಿದರು. ಅವರು ತಮ್ಮ ಸಿನಿ ಜೀವನವನ್ನು ರಂಗಭೂಮಿಯಿಂದ ಪ್ರಾರಂಭಿಸಿ ನಂತರ ಟೆಲಿವಿಷನ್ ಹಾಗೂ ಚಲನಚಿತ್ರಗಳಲ್ಲಿ ಸಾಧನೆ ಮಾಡಿದರು. 2008ರಲ್ಲಿ ಬಿಡುಗಡೆಯಾದ ಚಿರೋಡಿನಿ ತುಮಿ ಜೆ ಅಮಾರ್ ಸಿನಿಮಾದ ಮೂಲಕ ಅವರು ಭಾರೀ ಜನಪ್ರಿಯತೆ ಪಡೆದರು. ಈ ಚಿತ್ರವು ಅವರನ್ನು ಬಂಗಾಳಿ ಸಿನಿ ಪ್ರೇಕ್ಷಕರ ಮನೆಮಾತಾಗಿಸಿತು.

ಇದಾದ ಬಳಿಕ ಅವರು ಹಲವು ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದರು. Love Circus, Na Hanyate, Kagojer Bou ಸೇರಿದಂತೆ ಅನೇಕ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದರು. ಚಿತ್ರರಂಗದ ಜೊತೆಗೆ ದೂರದರ್ಶನ ಮತ್ತು ವೆಬ್ ಸೀರಿಸ್‌ಗಳಲ್ಲಿಯೂ ಅವರು ಸಕ್ರಿಯರಾಗಿದ್ದರು.

Exit mobile version