ಗಣೇಶ್ ಅಭಿನಯದ “ಬೃಂದಾವಿಹಾರಿ” ಚಿತ್ರದ “ರಾಧಾ ರಾಧಾ” ಹಾಡಿಗೆ ಮೆಚ್ಚುಗೆಯ ಮಹಾಪೂರ

Untitled design 2026 05 07T212502.307

ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ನಾಯಕರಾಗಿ ಎರಡು ದಶಕಗಳನ್ನು ಪೂರೈಸಿರುವ ಸಂಭ್ರಮದಲ್ಲಿದ್ದಾರೆ‌. ಪ್ರಸ್ತುತ ಗಣೇಶ್ ಅವರು ನಾಯಕರಾಗಿ ನಟಿಸಿರುವ, ಹೆಸರಾಂತ ನಿರ್ಮಾಪಕ ಸಮೃದ್ಧಿ ವಿ ಮಂಜುನಾಥ್ ನಿರ್ಮಾಣದ ಹಾಗೂ ಖ್ಯಾತ ನಿರ್ದೇಶಕ ಶ್ರೀನಿವಾಸರಾಜು ನಿರ್ದೇಶನದ “ಬೃಂದಾವಿಹಾರಿ” ಚಿತ್ರದ “ರಾಧಾ ರಾಧಾ” ಇತ್ತೀಚೆಗೆ ತುಮಕೂರಿನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ಮೂಲಕ ಈ ಹಾಡು ಬಿಡುಗಡೆಯಾಗಿದೆ.

ಬಿಡುಗಡೆಯಾದ ಮೂರೇ ದಿನಗಳಲ್ಲೇ “ರಾಧಾ ರಾಧಾ” ಹಾಡು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. 2.5 ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದೆ. ಗಣೇಶ್ ಅವರ ಅಭಿಮಾನಿಗಳು ಈ ಸುಮಧುರ ಹಾಡಿಗೆ ಫಿದಾ ಆಗಿದ್ದಾರೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ನೀಡಿರುವ ಈ ಹಾಡನ್ನು ಸಿದ್ ಶ್ರೀರಾಮ್ ಮತ್ತು ಚಿನ್ಮಯಿ ಸೊಗಸಾಗಿ ಹಾಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ – ದೇವಿಕಾ ಭಟ್ ಅಭಿನಯಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಬಂದಿರುವ ಸಮೃದ್ಧಿ ಮಂಜುನಾಥ್ ಅವರ ಅದ್ದೂರಿ ನಿರ್ಮಾಣದ, “ಕೃಷ್ಣಂ ಪ್ರಣಯ ಸಖಿ” ಚಿತ್ರದ ನಂತರ ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಹಾಗೂ ಶ್ರೀನಿವಾಸರಾಜು ಅವರ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ “ಬೃಂದಾ ವಿಹಾರಿ” ಚಿತ್ರದ ಬಗ್ಗೆ ಆರಂಭದಿಂದಲೂ ಸಾಕಷ್ಟು ನಿರೀಕ್ಷೆಯಿದ್ದು, ಅಭಿಮಾನಿಗಳು ಚಿತ್ರ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಗಣೇಶ್ ಅವರಿಗೆ ನಾಯಕಿಯರಾಗಿ ದೇವಿಕಾ ಭಟ್ ಹಾಗೂ ಮಾಳವಿಕ ಶರ್ಮ ಅಭಿನಯಿಸಿದ್ದಾರೆ. ಚಂದನವನದ ಅನುಭವಿ ಹಾಗೂ ಹಿರಿಯ ಕಲಾವಿದರ ತಾರಾಬಳಗವೇ ಈ ಚಿತ್ರದಲ್ಲಿದೆ.
‌‌‌

Exit mobile version