ಇಂದು ‘ಅಪ್ಪು’ ಹುಟ್ಟುಹಬ್ಬದ ನೆನಪು..! ‘ರಾಜಕುಮಾರ’ನಿಲ್ಲದೇ 5 ವರ್ಷ ಕಳೆದ ಚಂದನವನ

Untitled design 2026 03 17T091824.006

ಕನ್ನಡ ಚಿತ್ರರಂಗದ ಅಚ್ಚುಮೆಚ್ಚಿನ ನಟ ಪುನೀತ್ ರಾಜ್‌ಕುಮಾರ್ ಅವರ 51ನೇ ಹುಟ್ಟುಹಬ್ಬ ಇಂದು ರಾಜ್ಯಾದ್ಯಂತ ಭಾವಪೂರ್ಣವಾಗಿ ಆಚರಿಸಲಾಗುತ್ತಿದೆ. ಅಪ್ಪು ಎಂದೇ ಪ್ರೀತಿಯಿಂದ ಕರೆಯಲ್ಪಡುವ ಈ ಮಹಾನ್ ವ್ಯಕ್ತಿ ಇಂದು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರ ನೆನಪುಗಳು, ನಗು ಮತ್ತು ಸೇವಾ ಮನೋಭಾವ ಕನ್ನಡಿಗರ ಹೃದಯದಲ್ಲಿ ಸದಾ ಜೀವಂತವಾಗಿದೆ.

ಪುನೀತ್ ರಾಜ್‌ಕುಮಾರ್ ಎಂದಾಕ್ಷಣ ನೆನಪಾಗುವುದು ಅವರ ನಿಷ್ಕಲ್ಮಶ ನಗು.. ಅಭಿಮಾನಿಗಳೊಂದಿಗೆ ಅವರು ಬೆರೆಯುತ್ತಿದ್ದ ರೀತಿ, ಅವರ ಸರಳತೆ ಮತ್ತು ಮನುಷ್ಯತ್ವವೇ ಅವರನ್ನು ವಿಶೇಷವಾಗಿಸಿತು. ಇಂದಿಗೂ ಅವರ ಹುಟ್ಟುಹಬ್ಬ ಎಂದರೆ ಅಭಿಮಾನಿಗಳಿಗೆ ಅದು ಮನೆಯ ಹಬ್ಬದಂತೆಯೇ ಇರುತ್ತದೆ.

ಅಪ್ಪು ಜೀವಂತವಾಗಿದ್ದ ಸಮಯದಲ್ಲಿ, ಪ್ರತೀ ಹುಟ್ಟುಹಬ್ಬವೂ ಅವರ ಮನೆಯಲ್ಲಿ ಹಬ್ಬದ ಸಂಭ್ರಮವಿರುತ್ತಿತ್ತು. ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಅವರ ಮನೆ ಮುಂದೆ ಸೇರುತ್ತಿದ್ದರು. ಅವರು ತಂದ ಕೇಕ್‌ಗಳನ್ನು ಕತ್ತರಿಸಿ, ಎಲ್ಲರೊಂದಿಗೆ ನಗುಮುಖದಿಂದ ಸಂಭ್ರಮಿಸುತ್ತಿದ್ದ ಅಪ್ಪು, ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದರು. ಇಂದು ಅವರು ನಮ್ಮೊಂದಿಗಿಲ್ಲದಿದ್ದರೂ, ಅದೇ ಪ್ರೀತಿ ಮತ್ತು ಅಭಿಮಾನ ಮುಂದುವರಿದಿದೆ.

ಈ ವರ್ಷವೂ ರಾಜ್ಯದ ಅನೇಕ ಕಡೆ ಅಭಿಮಾನಿಗಳು ಪುನೀತ್ ಅವರ ಹೆಸರಿನಲ್ಲಿ ರಕ್ತದಾನ ಶಿಬಿರ, ಅನ್ನದಾನ, ಅನಾಥಾಶ್ರಮಗಳಿಗೆ ಸಹಾಯ ಮುಂತಾದ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಇದು ಅಪ್ಪು ಅವರ ವ್ಯಕ್ತಿತ್ವಕ್ಕೆ ನಿಜವಾದ ಗೌರವವಾಗಿದೆ. ಅವರ ಬದುಕು ಕೇವಲ ಸಿನಿಮಾಗಳಿಗೆ ಸೀಮಿತವಾಗಿರಲಿಲ್ಲ, ಸಮಾಜ ಸೇವೆಯಲ್ಲಿಯೂ ಅವರು ಅಪಾರ ಕೊಡುಗೆ ನೀಡಿದ್ದಾರೆ.

1975ರ ಮಾರ್ಚ್ 17ರಂದು ಜನಿಸಿದ ಪುನೀತ್ ರಾಜ್‌ಕುಮಾರ್, ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಅತಿ ಚಿಕ್ಕ ವಯಸ್ಸಿನಲ್ಲೇ ತಮ್ಮ ಅದ್ಭುತ ಪ್ರತಿಭೆಯಿಂದ ಎಲ್ಲರ ಮನ ಗೆದ್ದರು. ಕೇವಲ 9ನೇ ವಯಸ್ಸಿನಲ್ಲಿ ರಾಷ್ಟ್ರ ಪ್ರಶಸ್ತಿ ಗೆದ್ದ ಸಾಧನೆ ಅವರದ್ದಾಗಿದೆ. 2000ನೇ ಇಸವಿಯಲ್ಲಿ ನಾಯಕ ನಟನಾಗಿ ಪ್ರವೇಶಿಸಿದ ಅವರು, ಮೊದಲ ಸಿನಿಮಾದಲ್ಲೇ ತಮ್ಮದೇ ಆದ ಛಾಪು ಮೂಡಿಸಿದರು. ನಂತರ ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ‘ಪವರ್ ಸ್ಟಾರ್’ ಪಟ್ಟಕ್ಕೇರಿದರು.

ಅವರ ಸಿನಿಮಾಗಳಿಗಿಂತಲೂ ಹೆಚ್ಚಾಗಿ ಅವರ ವ್ಯಕ್ತಿತ್ವವೇ ಜನರನ್ನು ಆಕರ್ಷಿಸಿತು. ಪ್ರಾಣಿಪ್ರೀತಿ, ದಾನ, ಸಮಾಜ ಸೇವೆ ಮಾಡಿದ್ದರು. ಅವರು ತಮ್ಮ ಆದಾಯದ ದೊಡ್ಡ ಭಾಗವನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದರು. ಅನಾಥಾಶ್ರಮ, ವೃದ್ಧಾಶ್ರಮ, ಗೋಶಾಲೆ ಮತ್ತು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅವರು ಮಾಡಿದ ಸಹಾಯ ಅನನ್ಯವಾಗಿದೆ.

Exit mobile version