ಹೌಸ್‌ಫುಲ್ ಹೌಸ್‌ಫುಲ್ ಹೌಸ್‌ಫುಲ್.. ಪ್ರೇಮದ ಊರಲಿ ಸಿನಿಮಾ ಎಲ್ಲೆಡೆ ಹೌಸ್‌ಫುಲ್. 20 ವರ್ಷದ ಹಿಂದೆ ಮುಂಗಾರುಮಳೆ ಮಾಡಿದ್ದ ಅದೇ ಮೋಡಿ ಈಗ ಈ ಚಿತ್ರ ಮಾಡ್ತಿದೆ. ಗಡಿ ಭಾಗದ ಜಿಲ್ಲೆಗಳಲ್ಲಿ ಕೂಡ ಟಿಕೆಟ್ ಸಿಗದಂತಾಗಿದೆ. ಪ್ರಮೋಷನ್ ಇಲ್ಲದೇನೇ ಬಂದು.. ಬರೀ ಎಮೋಷನ್ಸ್‌ನಿಂದ ನೋಡುಗರನ್ನ ಮಂತ್ರಮುಗ್ಧಗೊಳಿಸುತ್ತಿರೋ ಪ್ರೇಮದೂರು ಪ್ರೀತಿಯಿಂದ ಪ್ರೇಕ್ಷಕರನ್ನ ಕೈಬೀಸಿ ಕರೆಯುತ್ತಿದೆ. ಸ್ಯಾಂಡಲ್‌ವುಡ್‌ನ ಈ ಗೇಮ್ ಚೇಂಜರ್ ಮೂವಿಯ ಮ್ಯಾಜಿಕ್ ಎಂಥದ್ದು ಅನ್ನೋದ್ರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.
- 2006ರಲ್ಲಿ ‘ಮುಂಗಾರುಮಳೆ’.. 2026ರಲ್ಲಿ ‘ಪ್ರೇಮದ ಊರಲಿ’
- ಪ್ರೇಕ್ಷಕರಿಗೆ ಫೇವರಿಟ್.. ನೋ ಪ್ರಮೋಷನ್.. ಓನ್ಲಿ ಎಮೋಷನ್
- 70 ಲಕ್ಷದ MM ಗಳಿಸಿತ್ತು 75Cr.. 50ಕೋಟಿ PO ನಾಟ್ ಔಟ್
- ಅಂದು ಅದು.. ಇಂದು ಇದು.. ಮ್ಯೂಸಿಕಲ್ ಮ್ಯಾಜಿಕಲ್ ಹಿಟ್
ಪ್ರೇಮದ ಊರಲಿ.. ಇದು ಬರೀ ಸಿನಿಮಾ ಅಲ್ಲ. ಆಡಿಯೆನ್ಸ್ ಎಮೋಷನ್ಸ್. ಹೊಡಿ ಬಡಿ ಕಡಿ ಸಿನಿಮಾಗಳ ನಡುವೆ ಮನಸ್ಸಿಗೆ ಹಿತ ಅನಿಸುವ, ಕಣ್ಣು ತಂಪಾಗಿಸೋ, ಕಿವಿ ಇಂಪಾಗಿಸೋ ಸಿನಿಮಾ ಬಂದ್ರೆ ಚಿತ್ರಪ್ರೇಮಿಗಳು ಅದನ್ನ ಹೃದಯಕ್ಕೆ ತೆಗೆದುಕೊಳ್ತಾರೆ. ತಲೆ ಮೇಲೆ ಹೊತ್ತು ಮೆರೆಸುತ್ತಾರೆ. ಚಿತ್ರತಂಡ ಪಟ್ಟ ಕಷ್ಟಗಳನ್ನ ಮರೆಸಿ, ಕೈ ತುಂಬಾ ಕಾಸು ಬರುವಂತೆ ಒಪ್ಪಿ, ಅಪ್ಪಿ, ಮುದ್ದಾಡ್ತಾರೆ. ಸದ್ಯ ಪ್ರೇಮದೂರಲಿಗೂ ಅದೇ ಆಗಿದೆ. ಕಣ್ಣಿಂದ ನೋಡೋ ಸಿನಿಮಾಗಳ ನಡುವೆ ಮನಸ್ಸಿಂದ ನೋಡುವಂತೆ ಮಾಡೋ ಚಿತ್ರ ಬಂದಿರೋದು ನಮ್ಮ ಸೌಭಾಗ್ಯ ಅಂತ ಅದಕ್ಕೆ ವಿಶೇಷ ಸ್ಥಾನಮಾನ ನೀಡ್ತಿದ್ದಾರೆ.
ಅಂದಹಾಗೆ ಪ್ರೇಮದ ಊರಲಿ ಸಿನಿಮಾದಲ್ಲಿ ಯಾವುದೇ ಅಬ್ಬರ, ಆಡಂಬರ, ವೈಭವೀಕರಣ ಇಲ್ಲ. ಸಹಜ ಹಾಗೂ ಸ್ವಾಭಾವಿಕ ಲೊಕೇಷನ್ಸ್ ಹಾಗೂ ಪಾತ್ರಗಳ ಅಭಿನಯ ಚಿತ್ರಕ್ಕೆ ಪ್ಲಸ್ ಆಗಿದೆ. ಕೋಟಿ ಕೋಟಿ ಸುರಿದು ಪ್ರಮೋಷನ್ಸ್ ಮಾಡಿ, ಎಲೆಕ್ಷನ್‌ಗೆ ನಿಂತವರು ಠೇವಣಿ ಕಳ್ಕೊಂಡ್ರು ಅಂತಾರಲ್ವಾ ಹಾಗೆ.. ಹಾಕಿರೋ ಬಂಡವಾಳ ಕೂಡ ವಾಪಸ್ ಪರದೆ ಒದ್ದಾಡೋರ ನಡುವೆ.. ಈ ಪ್ರೇಮದ ಊರಲಿ ಚಿತ್ರ ಯಾವುದೇ ಪ್ರಮೋಷನ್ಸ್ ಇಲ್ಲದೆ.. ಬರೀ ಎಮೋಷನ್ಸ್‌ನಿಂದ ಪ್ರೇಕ್ಷಕರ ಹೃದಯಕ್ಕೆ ನಾಟಿದೆ.
ಇಂತಹ ಎವರ್‌ಗ್ರೀನ್ ಸಿನಿಮಾಗಳು ದಶಕ ಅಥ್ವಾ ಎರಡು ದಶಕಕ್ಕೆ ಒಂದು ಬಂದ್ರೆ ಹೆಚ್ಚೆಚ್ಚು. ಸುಮಾರು 20 ವರ್ಷಗಳ ಹಿಂದೆ ಮುಂಗಾರುಮಳೆ ಅನ್ನೋ ಸಿನಿಮಾ ಬಂದಿತ್ತು. ಆಗ ಗೋಲ್ಡನ್ ಸ್ಟಾರ್ ಗಣೇಶ್, ಪೂಜಾ ಗಾಂಧಿ ಹೊಸಬರು. ನಿರ್ದೇಶಕ ಯೋಗರಾಜ್ ಭಟ್ ಕೂಡ ಹೊಸಬರೇ. ಕೇವಲ 70ಲಕ್ಷದಲ್ಲಿ ತಯಾರಾದ ಆ ಸಿನಿಮಾ ಬರೋಬ್ಬರಿ 75 ಕೋಟಿ ಗಳಿಸೋ ಮೂಲಕ ಎಲ್ಲರ ಹುಬ್ಬೇರಿಸಿತ್ತು. 2006ರಲ್ಲಿ ಕನ್ನಡ ಸಿನಿಮಾವೊಂದು.. ಅದ್ರಲ್ಲೂ ಹೊಸಬರ ಟೀಂ 75 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ್ದು ಇಂದಿನ 300 ಕೋಟಿಗೆ ಸಮ ಅಂದ್ರೆ ತಪ್ಪಾಗಲ್ಲ.
ಮುಂಗಾರು ಮಳೆ ಸಿನಿಮಾದಲ್ಲೂ ಎಮೋಷನ್ಸ್ ಇತ್ತು. ಫ್ಯಾಮಿಲಿ ಸೆಂಟಿಮೆಂಟ್ಸ್ ಇತ್ತು. ಮ್ಯೂಸಿಕಲಿ ಅದು ಕೂಡ ಮ್ಯಾಜಿಕ್ ಮಾಡಿತ್ತು. ಮೆಲೋಡಿ ಕಿಂಗ್ ಮನೋಮೂರ್ತಿಯ ಒಂದೊಂದು ಹಾಡು ಕೂಡ ಅದ್ಭುತವಾಗಿದ್ದವು. ಈಗ ಪ್ರೇಮದ ಊರಲಿ ಕೂಡ ಅದೇ ನಿಟ್ಟಿನಲ್ಲಿ ಸಾಗುತ್ತಿದೆ. ಥಿಯೇಟರ್‌ಗೆ ಜನಾನೇ ಬರ್ತಿಲ್ಲ ಅಂತ ಬರ ಬಂದಿರೋ ಈ ಕಾಲದಲ್ಲಿ ಪ್ರೇಮದೂರಿಗೆ ಜನ ಕಿಕ್ಕಿರಿದು ಬರ್ತಿದ್ದಾರೆ. ಹಳ್ಳಿ ಜನ ಥಿಯೇಟರ್‌ಗಳಿಗೆ ನುಗ್ಗಿ ಈ ಸಿನಿಮಾನ ಕಣ್ತುಂಬಿಕೊಳ್ತಿದ್ದಾರೆ.
ಪ್ರೇಮದ ಊರಲಿ ಕೂಡ ಭಾವನಾತ್ಮಕ ಅಂಶಗಳಿಂದ ಕಣ್ಮನ ತಣಿಸುತ್ತಿದೆ. ಎರಡೂವರೆ ಕೋಟಿ ಸ್ಮಾಲ್ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 50 ಕೋಟಿ ಗಳಿಸಿ, ಯಶಸ್ವೀ 100 ಕೋಟಿಯತ್ತ ಮುನ್ನುಗ್ಗುತ್ತಿದೆ. ಇಲ್ಲಿಯೂ ಸಹ ಯಾವುದೇ ಸೂಪರ್ ಸ್ಟಾರ್ಸ್ ಇಲ್ಲ. ಶ್ರೀರಾಮ್, ರಮಿಕಾ ಶಿವು, ತಪಸ್ವಿನಿ ಪೂಣಚ್ಚ, ರಂಗಾಯಣ ರಘು ಅಂತಹ ಅತ್ಯದ್ಭುತ ಕಲಾವಿದರಿದ್ದಾರಷ್ಟೇ. ಆದ್ರೆ ಅವರು ತಮ್ಮ ಪಾತ್ರಗಳಿಗೆ ಜೀವ ತುಂಬಿರೋ ಪರಿ ಮಾತ್ರ ಅವರ್ಣನೀಯ. ನಿರ್ದೇಶಕ ಮನೋಜ್ ಕುಮಾರ್ ಚಾಕಚಕ್ಯತೆಯ ಕೈಗನ್ನಡಿಯಾಗಿದೆ ಈ ಪ್ರೇಮದೂರು. ಸುನಾದ್ ಗೌತಮ್ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಈ ಚಿತ್ರದ ಸ್ಟ್ರೆಂಥ್ ಹೆಚ್ಚಿಸಿದೆ.
- ಅಂದು ‘ಜೋಗ್ ಫಾಲ್ಸ್’.. ಇಂದು ಸೀಗೆಗುಡ್ಡ ‘ಮಳೆ ಮಲ್ಲೇಶ್ವರ’
- ರಾತ್ರೋರಾತ್ರಿ ಟೂರಿಸ್ಟ್ ಸ್ಪಾಟ್ ಆಯ್ತು.. ಜಾತ್ರೆ ರೀತಿ ಜನಸಾಗರ
ಕರ್ನಾಟಕದ ಫೇಮಸ್ ಟೂರಿಸ್ಟ್ ಸ್ಪಾಟ್‌ಗಳಲ್ಲಿ ಜೋಗ್ ಫಾಲ್ಸ್ ಕೂಡ ಒಂದು. ನಟಸಾರ್ವಭೌಮ ಡಾ ರಾಜ್‌ಕುಮಾರ್ ಕೂಡ ಹೇಳಿದ್ರು.. ಸಾಯೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ ಅಂತ. ಆದ್ರೆ ಯಾವಾಗ ಮುಂಗಾರುಮಳೆ ಸಿನಿಮಾ ಬಂತೋ.. ಅದಾದ ಬಳಿಕ ಜೋಗ್ ಫಾಲ್ಸ್‌ಗೆ ಹೊಸ ಕಳೆ ಬಂತು. ಯಾಕಂದ್ರೆ ಮುಂಗಾರುಮಳೆ ಚಿತ್ರದಲ್ಲಿ ಸಿನಿಮಾಟೋಗ್ರಾಫರ್ ಕೃಷ್ಣ ಅವರು ತೋರಿದ ಕ್ಯಾಮೆರಾ ಕೈಚಳಕ ಅಂಥದ್ದು. ಭಿನ್ನ ವಿಭಿನ್ನ ಆ್ಯಂಗಲ್ಸ್‌ನಲ್ಲಿ ಜೋಗ್ ಫಾಲ್ಸ್‌ನ ವಿಹಂಗಮ ನೋಟವನ್ನ ತೋರಿಸಿದ್ರು. ಮುಂಗಾರು ಮಳೆ ಚಿತ್ರದ ಬಳಿಕ ಜೋಗ್ ಫಾಲ್ಸ್‌ಗೆ ಬರೋ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು ಸುಳ್ಳಲ್ಲ.
ಇದೀಗ ಪ್ರೇಮದೂರಲಿ ಕೂಡ ಅಂಥದ್ದೇ ಪಯಣಕ್ಕೆ ಕಾರಣೀಭೂತವಾಗಿದೆ. ಯೆಸ್.. ಹಾಸನದ ಸೀಗೆ ಗುಡ್ಡದಲ್ಲಿರೋ ಮಳೆ ಮಲ್ಲೇಶ್ವರ ಈ ಸಿನಿಮಾದ ಪ್ರಮುಖ ಹೈಲೈಟ್‌ಗಳಲ್ಲಿ ಒಂದು. ಅಲ್ಲಿ ಮೊದಲ ಹೀರೋಯಿನ್ ಮನಸ್ಸು ಮುರಿದು ಬೀಳುವ ದೃಶ್ಯವಿದೆ. ಎರಡನೇ ನಟಿಮಣಿ ಹಾಗೂ ನಾಯಕನಟನ ಸತಿ-ಪತಿ ಪ್ರೇಮಕ್ಕೆ ಮುನ್ನುಡಿ ಬರೆಯುವ ದೃಶ್ಯಗುಚ್ಚವಿದೆ. ಅದ್ರಲ್ಲೂ ಶಿವನ ಬಹುದೊಡ್ಡ ವಿಗ್ರಹವಿರೋ ಆ ಗುಡ್ಡ ಹಚ್ಚ ಹಸಿರಿನಿಂದ ಎಂಥವರನ್ನೂ ಕೈ ಬೀಸಿ ಕರೆಯುವಂತಿದೆ.
ಬಹುಶಃ ಇಷ್ಟು ದಿನ ಅಲ್ಲಿಗೆ ಆ ಊರಿನವರು ಅಥ್ವಾ ಆ ಊರಿನ ಅಕ್ಕಪಕ್ಕದವರು ಮಾತ್ರ ಬರ್ತಿದ್ರು ಅನಿಸುತ್ತೆ. ಆದ್ರೆ ಪ್ರೇಮದ ಊರಲಿ ರಿಲೀಸ್ ಬಳಿಕ.. ಸೀಗೆಗುಡ್ಡ ಒಂಥರಾ ಟೂರಿಸ್ಟ್ ಸ್ಪಾಟ್ ಆಗಿಬಿಟ್ಟಿದೆ. ಆ ಸಣ್ಣ ಟೆಂಪಲ್ ರಾತ್ರೋ ರಾತ್ರಿ ಪ್ರವಾಸಿಗರ ಫೇವರಿಟ್ ಲೊಕೇಷನ್ ಆಗಿ ಬದಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಸೀಗೆಗುಡ್ಡದ ಮಳೆ ಮಲ್ಲೇಶ್ವರನನ್ನ ಕಣ್ತುಂಬಿಕೊಳ್ಳು ಜನ ಸಾಗರೋಪಾದಿಯಲ್ಲಿ ಬರ್ತಿರೋದು ಅಚ್ಚರಿ. ಅದಕ್ಕೆ ಆ ಮಹತ್ವ ಬರೋಕೆ ಕಾರಣವೇ ಡೈರೆಕ್ಟರ್ ಮನೋಜ್ ಕುಮಾರ್ ಹಾಗೂ ಸಿನಿಮಾಟೋಗ್ರಾಫರ್ ರಾಜ್‌ಕಾಂತ್. ಹೌದು.. ರಾಜ್‌ಕಾಂತ್ ಆ ಗುಡ್ಡ ಹಾಗೂ ಮಹದೇಶ್ವರನನ್ನ ತೋರಿಸಿರೋ ಪರಿ ಕಣ್ಣಿಗೆ ಹಬ್ಬ ನೀಡಿದೆ. ಅದೇ ಕಾರಣಕ್ಕೆ ಜನ ಜಾತ್ರೆ ರೀತಿ ಆ ಸ್ಪಾಟ್‌ಗೆ ವಿಸಿಟ್ ಮಾಡ್ತಿದ್ದಾರೆ.
- ಬಂಗಾರಪೇಟೆ, ಚೇಳೂರು ಗಡಿ ಭಾಗಗಳಲ್ಲೂ ಸಿಗ್ತಿಲ್ಲವಂತೆ ಟಿಕೆಟ್ಸ್
- ಪ್ರತೀ ದಿನ ಕನಿಷ್ಟ ಒಂದು ಲಕ್ಷ ಆನ್ಲೈನ್ ಟಿಕೆಟ್ಸ್ ಸೋಲ್ಡ್‌ಔಟ್
- ಎಲ್ಲೆಡೆ ‘ಹೌಸ್‌ಫುಲ್’ & ‘ಪ್ರೇಮದ ಊರಿಗೆ ಸ್ವಾಗತ’ ಬೋರ್ಡ್
- ಇದೇ ನಿಜವಾದ ಸಿನಿಮಾ ಸೆಲೆಬ್ರೇಷನ್.. ಇದೇ ಇಂಡಸ್ಟ್ರಿ ಗೆಲುವು
ಪ್ರೇಮದ ಊರಲಿ ಇದೇ ಸೆಪ್ಟೆಂಬರ್ 25ರಂದು ತೆರೆಕಂಡಿತ್ತು. ಯಶಸ್ವೀ ಎರಡು ವಾರ ಕಂಪ್ಲೀಟ್ ಮಾಡಿ ಮೂರನೇ ವಾರವೂ ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ನೈಟ್ 9 ಗಂಟೆ 10 ಗಂಟೆ ಶೋಗಳು ಕೂಡ ಟಿಕೆಟ್ಸ್ ಸಿಗದಂತಾಗಿವೆ. ಅಷ್ಟರ ಮಟ್ಟಿಗೆ ಜನ ಮುಗಿಬಿದ್ದು ಈ ಸಿನಿಮಾನ ಕಣ್ತುಂಬಿಕೊಳ್ತಿರೋದು ಇಂಟರೆಸ್ಟಿಂಗ್. ಪ್ರತಿ ದಿನ ಕನಿಷ್ಟ ಒಂದು ಲಕ್ಷ ಟಿಕೆಟ್ಸ್ ಅಂತೂ ಆನ್‌ಲೈನ್‌ನಲ್ಲಿ ಸೋಲ್ಡ್‌ಔಟ್ ಆಗ್ತಿವೆ. ಮೊನ್ನೆ ಒಂದೇ ದಿನ ಬರೋಬ್ಬರಿ 2 ಲಕ್ಷ 60 ಸಾವಿರ ಟಿಕೆಟ್ಸ್ ಮಾರಾಟಗೊಂಡು ದಾಖಲೆ ಬರೆದಿತ್ತು.
ಇಂಟರೆಸ್ಟಿಂಗ್ ಅಂದ್ರೆ ಬಂಗಾರಪೇಟೆ, ತುಮಕೂರಿನ ಚೇಳೂರು ಥಿಯೇಟರ್‌ಗಳಲ್ಲಿ ಕೂಡ ಟಿಕೆಟ್ಸ್ ಸಿಗದಂತೆ ಪ್ರೇಕ್ಷಕರು ಒದ್ದಾಡ್ತಿದ್ದಾರೆ. ಕರ್ನಾಟಕದ ಗಡಿ ಪ್ರಾಂತ್ಯಗಳಲ್ಲಿ ಕೂಡ ಕನ್ನಡ ಸಿನಿಮಾವೊಂದಕ್ಕೆ ಈ ಪಾಟಿ ಬೇಡಿಕೆ ಬಂದಿರೋದು ನಿಜಕ್ಕೂ ಹೆಮ್ಮೆ ತರಿಸುವ ವಿಷಯ. ಇನ್ನೂ ಚಿತ್ರಮಂದಿರಗಳ ಮುಂದೆ ಎರಡೆರಡು ಬೋರ್ಡ್‌ಗಳು ಸರ್ವೇ ಸಾಮಾನ್ಯವಾಗಿವೆ. ಒಂದು ಹೌಸ್‌ಫುಲ್ ಬೋರ್ಡ್.. ಮತ್ತೊಂದು ಪ್ರೇಮದ ಊರಿಗೆ ಸ್ವಾಗತ. ಇವೆರಡೂ ಥಿಯೇಟರ್ಸ್ ಮುಂದೆ ಸ್ಪೆಷಲ್ ಅಟ್ರ್ಯಾಕ್ಷನ್. ಇದಲ್ಲವೇ ಸಿನಿಮಾವೊಂದರ ನಿಜವಾದ ಗೆಲುವು. ಇದು ಆ ಸಿನಿಮಾದ ಗೆಲುವಷ್ಟೇ ಅಲ್ಲ.. ಇಡೀ ಚಂದನವನದ ಗೆಲುವು. ಇಂತಹ ಪ್ರಯತ್ನಗಳು ಹಾಗೂ ಪ್ರಯೋಗಗಳು ಮತ್ತೆ ಮತ್ತೆ ಆಗಬೇಕಿದೆ. ಆಗಲೇ ಚಿತ್ರರಂಗದಲ್ಲಿ ಸಮತೋಲನ ಸಾಧ್ಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
