ಜನಪ್ರಿಯ ಧಾರಾವಾಹಿಗಳ ಮೂಲಕ ಜನರ ಮನ ತಲುಪಿರುವ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತೊಂದು ಹೊಸ ಧಾರಾವಾಹಿ ” ಪ್ರೇಮ ಕಾವ್ಯ” ಆಗಸ್ಟ್ 4 ರ ಸೋಮವಾರ ಸಂಜೆ 6.30ಕ್ಕೆ ಪ್ರಸಾರವಾಗಲಿದೆ. ಎರಡು ಜೋಡಿಗಳ ಪ್ರೇಮಕಥೆಯ ಧಾರಾವಾಹಿ “ಪ್ರೇಮ ಕಾವ್ಯ”ದಲ್ಲಿ ಪ್ರೇಮ ಪಾತ್ರದಲ್ಲಿ ಪ್ರಿಯ ಜೆ ಆಚಾರ್, ಕಾವ್ಯ ಪಾತ್ರದಲ್ಲಿ ವೈಷ್ಣವಿ ನಟಿಸುತ್ತಿದ್ದಾರೆ.
“ನಮ್ಮನೆ ಯುವರಾಣಿ” ಖ್ಯಾತಿಯ ರಾಘವೇಂದ್ರ ಹಾಗೂ ವಿಕಾಸ್ ನಾಯಕರಾಗಿ ಅಭಿನಯಿಸುತ್ತಿದ್ದಾರೆ.ರವೀನ್ ಕುಮಾರ್ ಈ ಧಾರಾವಾಹಿಯನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಧಾರಾವಾಹಿಯ ಕಲಾವಿದರು ಹಾಗೂ ನಿರ್ದೇಶಕರು ಮಾಹಿತಿ ನೀಡಿದರು.
ನಾನು ಈ ಧಾರಾವಾಹಿಯಲ್ಲಿ ಪ್ರೇಮ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ತಂದೆ, ತಾಯಿ ಹಾಗೂ ತಂಗಿ ಇದೇ ನನ್ನ ಒಂದು ಪುಟ್ಟ ಪ್ರಪಂಚ. ನಾನು ಹೆಚ್ಚು ವಿದ್ಯಾವಂತೆ ಅಲ್ಲ. ಆದರೆ ತಂಗಿಗೆ ತಾನು ಸೈಂಟಿಸ್ಟ್ ಆಗಬೇಕೆಂಬ ಅಭಿಲಾಷೆ. ಅವಳ ಕನಸಿಗೆ ಸಹಕಾರ ನೀಡುತ್ತಿರುತ್ತೇನೆ. ಜೊತೆಗೆ ಬಾಲ್ಯದ ಗೆಳೆಯ ರಾಮ್ ನನ್ನು ಪ್ರೀತಿಸುತ್ತಿರುತ್ತೇನೆ ಎಂದು ತಮ್ಮ ಪಾತ್ರದ ಬಗ್ಗೆ ನಟಿ ಪ್ರಿಯ ಜೆ ಆಚಾರ್ ಮಾಹಿತಿ ನೀಡಿದರು.
ಕಾವ್ಯ ನನ್ನ ಪಾತ್ರದ ಹೆಸರು ಎಂದು ಮಾತನಾಡಿದ ನಟಿ ವೈಷ್ಣವಿ, ನಾನು ಈ ಧಾರಾವಾಹಿಯಲ್ಲಿ ಬಹಳ ವಿದ್ಯಾವಂತೆ. ಬಾಹ್ಯಾಕಾಶ ವಿಜ್ಞಾನಿ ಆಗಬೇಕೆಂಬ ಆಸೆ. ಹಳ್ಳಿಯಲ್ಲಿ ಹೆಚ್ಚು ಇರಲ್ಲ. ನಗರದಲ್ಲೇ ಹೆಚ್ಚು ವಾಸ್ತವ್ಯ. ಸೌಮ್ಯ ಸ್ವಾಭಾವದ ಹುಡುಗಿ ಎಂದರು.
ಮೊದಲ ಬಾರಿಗೆ ಈ ಧಾರಾವಾಹಿಯ ಮೂಲಕ ನಾಯಕನಾಗಿ ನಟಿಸುತ್ತಿದ್ದೇನೆ. ರಾಮ್ ನನ್ನ ಪಾತ್ರದ ಹೆಸರು. ಮೃದು ಸ್ವಭಾವದವನು. ವೃತ್ತಿಯಲ್ಲಿ ವೈದ್ಯ. ಮಾದೇವನ ದೊಡ್ಡಮ್ಮನ ಮಗ. ದೊಡ್ಡಮ್ಮನಿಗೆ ನಾನಿ ಊರಿನಲ್ಲೇ ಆಸ್ಪತ್ರೆ ಕಟ್ಟಿ ವೈದ್ಯನಾಗಿರಬೇಕೆಂಬ ಆಸೆ. ದೊಡ್ಡಮ್ಮನ ಆಸೆಯೇ ನನ್ನ ಆಸೆ ಕೂಡ ಎಂದು ನವ ನಟ ವಿಕಾಸ್ ತಿಳಿಸಿದರು.