‘ದಿ ರಾಜಾ ಸಾಬ್’ ಮೂಲಕ ಅಪ್ರತಿಮ ದಾಖಲೆ ಬರೆದ ಪ್ಯಾನ್-ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್!

ಪ್ರಭಾಸ್‌ ನಟಿಸಿರೋ ಆರು ಸಿನಿಮಾಗಳ ಮೊದಲ ದಿನದ ಗಳಿಕೆ 100 ಕೋಟಿ!

Untitled design 2026 01 10T180830.230

ಬೆಂಗಳೂರು: ಭಾರತೀಯ ಚಿತ್ರರಂಗದ ಅಪ್ರತಿಮ ಪ್ಯಾನ್-ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಅವರ ಇತ್ತೀಚಿನ ಚಿತ್ರ ‘ದಿ ರಾಜಾ ಸಾಬ್’ ಮೊದಲ ದಿನವೇ ವಿಶ್ವಾದ್ಯಂತ ₹100 ಕೋಟಿಗೂ ಅಧಿಕ ಗಳಿಕೆ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಈ ಅದ್ಭುತ ಯಶಸ್ಸಿನೊಂದಿಗೆ, ಮೊದಲ ದಿನವೇ 100 ಕೋಟಿ ರೂಪಾಯಿಗಳ ಗಡಿ ದಾಟಿದ ಆರು ಚಿತ್ರಗಳನ್ನು ಹೊಂದಿದ ಭಾರತದ ಏಕೈಕ ನಟ ಎಂಬ ಐತಿಹಾಸಿಕ ದಾಖಲೆಯನ್ನು ಪ್ರಭಾಸ್ ತಮ್ಮದಾಗಿಸಿಕೊಂಡಿದ್ದಾರೆ.

ದಾಖಲೆಗಳ ಸರದಾರ

ಈ ಹಿಂದೆ ಪ್ರಭಾಸ್ ನಟನೆಯ ‘ಬಾಹುಬಲಿ 2’, ‘ಕಲ್ಕಿ 2898 AD’, ‘ಸಲಾರ್’, ‘ಸಾಹೋ’ ಮತ್ತು ‘ಆದಿಪುರುಷ್’ ಚಿತ್ರಗಳು ಮೊದಲ ದಿನವೇ 100 ಕೋಟಿ ಕ್ಲಬ್ ಸೇರಿ ಇತಿಹಾಸ ನಿರ್ಮಿಸಿದ್ದವು. ಈಗ ‘ದಿ ರಾಜಾ ಸಾಬ್’ ಈ ಪಟ್ಟಿಗೆ ಸೇರ್ಪಡೆಗೊಳ್ಳುವ ಮೂಲಕ ಪ್ರಭಾಸ್ ಅವರ ಜನಪ್ರಿಯತೆ ಮತ್ತು ಮಾರುಕಟ್ಟೆ ಮೌಲ್ಯ ಎಷ್ಟು ಹಿರಿದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಹೊಸ ಪ್ರಯೋಗಕ್ಕೆ ಒಲಿದ ಜಯ

ಯಾವುದೇ ಜಾನರ್ ಆಗಿರಲಿ ಅಥವಾ ಎಷ್ಟೇ ಹೈಪ್ ಇರಲಿ, ಪ್ರಭಾಸ್ ಸಿನಿಮಾ ಎಂದರೆ ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸುತ್ತಾರೆ. ‘ದಿ ರಾಜಾ ಸಾಬ್’ ಮೂಲಕ ಪ್ರಭಾಸ್ ಅವರು ಹಾರರ್-ಕಾಮಿಡಿ ಎಂಬ ವಿಭಿನ್ನ ಜಾನರ್‌ಗೆ ಕಾಲಿಟ್ಟಿದ್ದರು. ಮೈನವಿರೇಳಿಸುವ ಹಾರರ್ ಮತ್ತು ಹೊಟ್ಟೆ ಹುಣ್ಣಾಗಿಸುವ ಹಾಸ್ಯದ ಜೊತೆಗೆ ಪ್ರಭಾಸ್ ಅವರ ವರ್ಚಸ್ಸು ಮತ್ತು ಮ್ಯಾಗ್ನೆಟಿಕ್ ಸ್ಟಾರ್‌ಡಮ್ ಚಿತ್ರಕ್ಕೆ ಭರ್ಜರಿ ಓಪನಿಂಗ್ ತಂದುಕೊಟ್ಟಿದೆ. ತೆಲುಗು ರಾಜ್ಯಗಳಿಂದ ಹಿಡಿದು ಹಿಂದಿ ಪ್ರಾಂತ್ಯಗಳವರೆಗೆ ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿಯೂ ಪ್ರಭಾಸ್ ಅವರ ಪ್ರಭಾವ ಗಡಿಗಳನ್ನು ಮೀರಿ ಬೆಳೆದಿದೆ.

ಮುಂದಿನ ಗುರಿ ಹತ್ತು ಸಿನಿಮಾಗಳು

ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ‘ಬಾಹುಬಲಿ’ಯಿಂದ ಹಿಡಿದು ವೈಜ್ಞಾನಿಕ ಕಲ್ಪನೆಯ ‘ಕಲ್ಕಿ’ ಹಾಗೂ ಆಕ್ಷನ್ ಭರಿತ ‘ಸಲಾರ್’ವರೆಗೆ ಪ್ರಭಾಸ್ ಅವರ ಪ್ರತಿಯೊಂದು ಚಿತ್ರವೂ ನಿರೀಕ್ಷೆಗಳನ್ನು ಮೀರಿ ಬೆಳೆದಿವೆ. ಮುಂಬರುವ ಎರಡು ವರ್ಷಗಳಲ್ಲಿ ಪ್ರಭಾಸ್ ಅವರ ‘ಸ್ಪಿರಿಟ್’, ‘ಕಲ್ಕಿ 2’, ‘ಸಲಾರ್ 2’ ಮತ್ತು ‘ಫೌಜಿ’ ಚಿತ್ರಗಳು ಸಾಲಾಗಿ ಬರಲಿದ್ದು, ಮೊದಲ ದಿನವೇ 100 ಕೋಟಿ ಗಳಿಸುವ ಹತ್ತು ಸಿನಿಮಾಗಳನ್ನು ಹೊಂದಿದ ಏಕೈಕ ಭಾರತೀಯ ನಟ ಎಂಬ ಕೀರ್ತಿಗೆ ಅವರು ಪಾತ್ರರಾಗಲಿದ್ದಾರೆ.

ಪ್ರಭಾಸ್ ಅವರ ಈ ಪಯಣ ಕೇವಲ ತೆಲುಗು ಚಿತ್ರರಂಗಕ್ಕೆ ಸೀಮಿತವಾಗದೆ, ಜಾಗತಿಕ ವಿದ್ಯಮಾನವಾಗಿ ಬದಲಾಗಿದೆ. ಅಭಿಮಾನಿಗಳ ಅಚಲ ಭಕ್ತಿ ಮತ್ತು ಅವರ ಸಿನಿಮಾಗಳ ಬಗ್ಗೆ ಇರುವ ಅಪಾರ ಕ್ರೇಜ್ ಅವರನ್ನು ಭಾರತದ ಅಧಿಪತಿಯನ್ನಾಗಿ ಮಾಡಿದೆ.

Exit mobile version