‘OG’ ನಿರ್ದೇಶಕನಿಗೆ 3 ಕೋಟಿ ಮೌಲ್ಯದ ಐಷಾರಾಮಿ ಕಾರ್ ಗಿಫ್ಟ್ ಮಾಡಿದ ಪವನ್‌ ಕಲ್ಯಾಣ್‌

ಪ್ರಶಾಂತ್ ವೀರ್ (5)

ಹೈದರಾಬಾದ್: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ತಾವು ನಟಿಸಿರುವ ‘They Call Him OG’ ಚಿತ್ರದ ನಿರ್ದೇಶಕ ಸುಜಿತ್‌ಗೆ ಬರೋಬ್ಬರಿ 3 ಕೋಟಿ ರೂಪಾಯಿ ಮೌಲ್ಯದ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ.

ಸಾಮಾನ್ಯವಾಗಿ ಇಂತಹ ದುಬಾರಿ ಗಿಫ್ಟ್‌ಗಳನ್ನು ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನೂರಾರು ಕೋಟಿ ಕೊಳ್ಳೆ ಹೊಡೆದಾಗ ನೀಡಲಾಗುತ್ತದೆ. ಆದರೆ, ಪವನ್ ಕಲ್ಯಾಣ್ ಮತ್ತು ಸುಜಿತ್ ಕಾಂಬಿನೇಶನ್‌ನ ‘OG’ ಚಿತ್ರವು ಕಳೆದ ಸೆಪ್ಟೆಂಬರ್‌ನಲ್ಲಿ ತೆರೆಕಂಡಿತ್ತು. ಈ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿರಲಿಲ್ಲ ಮತ್ತು ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಪ್ರದರ್ಶನ ಕಂಡಿತ್ತು. ಆದರೂ, ಪವನ್ ಕಲ್ಯಾಣ್ ಅವರು ಚಿತ್ರದ ಮೇಕಿಂಗ್ ಮತ್ತು ನಿರ್ದೇಶಕ ಸುಜಿತ್ ಅವರ ಕೆಲಸದ ಶೈಲಿಯನ್ನು ಮೆಚ್ಚಿ ಈ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಪವನ್ ಕಲ್ಯಾಣ್ ಈ ಚಿತ್ರಕ್ಕೆ ಕೇವಲ ನಾಯಕ ನಟನಾಗಿ ಕೆಲಸ ಮಾಡಿದ್ದಾರೆಯೇ ಹೊರತು ಅವರು ಈ ಚಿತ್ರದ ನಿರ್ಮಾಪಕರಲ್ಲ. ಡಿವಿವಿ ಎಂಟರ್ಟೈನ್ಮೆಂಟ್ಸ್ ಈ ಚಿತ್ರವನ್ನು ನಿರ್ಮಿಸಿತ್ತು. ಸಾಮಾನ್ಯವಾಗಿ ನಿರ್ಮಾಪಕರು ನೀಡಬೇಕಾದ ಉಡುಗೊರೆಯನ್ನು ಸ್ವತಃ ನಾಯಕ ನಟನೇ ನೀಡಿರುವುದು ಪವನ್ ಕಲ್ಯಾಣ್ ಅವರ ದೊಡ್ಡ ಗುಣಕ್ಕೆ ಸಾಕ್ಷಿಯಾಗಿದೆ. ಪವನ್ ಕಲ್ಯಾಣ್ ಅವರ ಈ ನಡೆ ಸದ್ಯ ಟಾಲಿವುಡ್ ಅಂಗಳದಲ್ಲಿ ಸಂಚಲನ ಮೂಡಿಸಿದೆ.

ನಿರ್ದೇಶಕ ಸುಜಿತ್ ಅವರು ಪವನ್ ಕಲ್ಯಾಣ್ ಅವರನ್ನು ತೆರೆಯ ಮೇಲೆ ತೋರಿಸಿದ ರೀತಿ ಮತ್ತು ಆಕ್ಷನ್ ಸೀಕ್ವೆನ್ಸ್‌ಗಳ ವಿನ್ಯಾಸಕ್ಕೆ ಪವರ್ ಸ್ಟಾರ್ ಫಿದಾ ಆಗಿದ್ದಾರೆ ಎನ್ನಲಾಗಿದೆ. ರಾಜಕೀಯ ಕೆಲಸಗಳ ನಡುವೆಯೂ ಸಿನೆಮಾ ಶೂಟಿಂಗ್ ಪೂರ್ಣಗೊಳಿಸಲು ಸುಜಿತ್ ನೀಡಿದ ಸಹಕಾರ ಮತ್ತು ಚಿತ್ರದ ಮೇಲಿನ ಅವರ ಬದ್ಧತೆಯನ್ನು ಗೌರವಿಸಿ ಪವನ್ ಈ ನಿರ್ಧಾರ ಕೈಗೊಂಡು ನಿರ್ದೇಶಕ ಸುಜಿತ್‌ಗೆ ಕಾರು ಉಡುಗೊರೆಯಾಗಿ ನೀಡಿದ್ದಾರೆ.

ಸುಮಾರು 3 ಕೋಟಿ ರೂಪಾಯಿ ಆನ್‌ರೋಡ್ ಬೆಲೆ ಹೊಂದಿರುವ ‘ಲ್ಯಾಂಡ್ ರೋವರ್ ಡಿಫೆಂಡರ್’ ಕಾರು ಸಿನಿಮಾ ಸೆಲೆಬ್ರಿಟಿಗಳ ನೆಚ್ಚಿನ ವಾಹನಗಳಲ್ಲಿ ಒಂದಾಗಿದೆ. ಪವನ್ ಕಲ್ಯಾಣ್ ಅವರ ಈ ಗಿಫ್ಟ್ ಮೂಲಕ ನಿರ್ದೇಶಕ ಸುಜಿತ್ ಈಗ ಟಾಲಿವುಡ್‌ನ ‘ಲಕ್ಕಿ ಡೈರೆಕ್ಟರ್’ ಎನಿಸಿಕೊಂಡಿದ್ದಾರೆ. ಇನ್ನೂ ಈ ಗಿಫ್ಟ್‌ ನೋಡಿ ನಿರ್ದೇಶಕ ಸುಜಿತ್‌ ಸಂತಸ ವ್ಯಕ್ತಪಡಿಸಿದ್ದಾರೆ.

Exit mobile version