ರೇಣುಕಾಸ್ವಾಮಿ ಪ್ರಕರಣದಲ್ಲಿ ಹಲವು ಸವಾಲುಗಳನ್ನು ಎದುರಿಸಿದ ನಟಿ ಪವಿತ್ರಾ ಗೌಡ ಅವರು ಈಗ ಶಕ್ತಿ ದೇವತೆಯ ಮೊರೆ ಹೋಗಿದ್ದಾರೆ.
ಹೌದು ನಟ ದರ್ಶನ್ ಜೊತೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೆಲಕಾಲ ಕಾಲಕಳೆದಿದ್ದ ಪವಿತ್ರಾ ಗೌಡ ಅವರು ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಸೆರೆವಾಸದಿಂದ ಮುಕ್ತರಾದ ಬಳಿಕ, ಅವರು ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ತಮ್ಮ ಆಧ್ಯಾತ್ಮಿಕ ಪಯಣವನ್ನು ಆರಂಭಿಸಿದ್ದಾರೆ.
ಕೆಲ ದಿನಗಳ ಹಿಂದೆ ನಿಮಿಷಾಂಬ ದೇವಸ್ಥಾನಕ್ಕೆ ತೆರಳಿದ್ದ ಪವಿತ್ರಾ ಗೌಡ ಅವರು ಈಗ ಬೆಂಗಳೂರಿನ ಪ್ರಸಿದ್ಧ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ, ಅವರು ಶಕ್ತಿ ದೇವತೆ ಬನಶಂಕರಿ ಅಮ್ಮನವರಿಗೆ ಸೀರೆ ಮತ್ತು ಮಡಲಕ್ಕಿಯನ್ನು ಅರ್ಪಿಸಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮಂಗಳವಾರದಂದು ಬನಶಂಕರಿ ದೇವಸ್ಥಾನಕ್ಕೆ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ದಿನ ವಿಶೇಷವಾಗಿ ದೇವಿಗೆ ಪೂಜೆ ಸಲ್ಲಿಸಿದರೆ ಶುಭವಾಗುತ್ತದೆ ಎಂಬುದು ಭಕ್ತರ ದೃಢವಾದ ನಂಬಿಕೆ. ಈ ನಂಬಿಕೆಯಂತೆ, ಪವಿತ್ರಾ ಗೌಡ ಅವರು ಮಂಗಳವಾರದ ಈ ವಿಶೇಷ ದಿನದಂದು ದೇವಿಯ ದರ್ಶನ ಪಡೆದು, ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ.