ಪತ್ರಕರ್ತ, ಕಾರ್ಯಕಾರಿ ನಿರ್ಮಾಪಕನಾಗಿ ಚಿತ್ರರಂಗಕ್ಕೆ ಪರಿಚಯವಿರುವ ಅಫ್ಜಲ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನೃತ್ಯ ನಿರ್ದೇಶನದ ಜೊತೆಗೆ ನಿರ್ದೇಶನವನ್ನು ಮಾಡಿರುವ ಹಾಗೂ RED & WHITE ಸೆವೆನ್ ರಾಜ್ ನಟಿಸಿ, ನಿರ್ಮಿಸಿರುವ “ನೆನಪುಗಳ ಮಾತು ಮಧುರ” ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಟ್ರೇಲರ್ ಅನಾವರಣ ಮಾಡಿ ಶುಭ ಕೋರಿದರು. ನವಶಕ್ತಿ ನಾಗರಾಜ್, ಮಹೇಂದರ್, ಲೋಕೇಂದ್ರ, ಮುನಿಕೃಷ್ಣ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನನಗೂ ಚಿತ್ರರಂಗಕ್ಕೂ ಮೂವತ್ತೈದು ವರ್ಷಗಳ ನಂಟು. “ರುದ್ರ ತಾಂಡವ”, ” ಮತ್ಸರ”, ” ಅನುಕೂಲಕೊಬ್ಬ ಗಂಡ” ಸೇರಿದಂತೆ ಅನೇಕ ಅನೇಕ ಚಿತ್ರಗಳಲ್ಲಿ ನಟಿಸಿದ್ದೇನೆ. ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಕಲಾವಿದನಾಗಿ ಗುರುತಿಸಿಕೊಂಡಿದ್ದೇನೆ. ಈ ಹಿಂದೆ ಎರಡು ಚಿತ್ರಗಳನ್ನು ನಿರ್ಮಾಣ ಕೂಡ ಮಾಡಿದ್ದೇನೆ. “ನೆನಪುಗಳ ಮಾತು ಮಧುರ” ನನ್ನ ನಿರ್ಮಾಣದ ಮೂರನೇ ಚಿತ್ರ. ಈ ಚಿತ್ರದಲ್ಲೂ ಅಭಿನಯಿಸಿದ್ದೇನೆ. ನನ್ನ ಹುಟ್ಟುಹಬ್ಬದ ದಿನ ಟ್ರೇಲರ್ ಬಿಡುಗಡೆಯಾಗಿದ್ದು ಖುಷಿಯಾಗಿದೆ. ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ಈ ಚಿತ್ರದ ಬಿಡುಗಡೆ ನಂತರ ನನ್ನ ಜೀವನಚರಿತ್ರೆಯನ್ನೇ ಸಿನಿಮಾ ಮಾಡುತ್ತಿದ್ದೇನೆ. ಚಿತ್ರಕ್ಕೆ “7 ರಿಂದ 77” ಎಂದು ಹೆಸರಿಟ್ಟಿದ್ದೇನೆ ಎಂದರು ರೆಡ್ & ವೈಟ್ ಸೆವೆನ್ ರಾಜ್.
“ನೆನಪುಗಳ ಮಾತು ಮಧುರ” ನಾಲ್ಕು ಕಥೆಗಳ ಸಂಗಮ. ಒಂದು ಕಥೆ ಇಪ್ಪತ್ತೈದು ನಿಮಿಷಗಳ ಅವಧಿ ಇರುತ್ತದೆ. ನಾಲ್ಕು ಕಥೆಗಳು ಬೇರೆಯದೆ ಆಯಾಮದಲ್ಲಿ ಸಾಗುತ್ತದೆ. ಸದ್ಯದಲ್ಲೇ ನಾವು ಎದುರುಸುತ್ತಿರುವ ಹಾಗೂ ಕಣ್ಣಮುಂದೆ ನೋಡುತ್ತಿರುವ ಕೆಲವು ವಿಷಯಗಳೆ ಈ ಚಿತ್ರದ ಕಥೆಗೆ ಸ್ಪೂರ್ತಿ. ಇದು ನನ್ನ ನಿರ್ದೇಶನದ ಮೂರನೇ ಚಿತ್ರ. ನನ್ನ ಚಿತ್ರದಲ್ಲಿ ನಟಿಸಲು ಬಂದಿದ್ದ ನಿರ್ಮಾಪಕ ಸೆವೆನ್ ರಾಜ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಲು ಹೇಳಿದರು. ಕಥೆ, ಚಿತ್ರಕಥೆ, ಸಂಭಾಷಣೆ, ನೃತ್ಯ ನಿರ್ದೇಶನದ ಜವಾಬ್ದಾರಿಯನ್ನೂ ನಿರ್ವಹಿಸಿರುವ ನಾನು ಪ್ರಮುಖಪಾತ್ರದಲ್ಲಿ ಅಭಿನಯ ಕೂಡ ಮಾಡಿದ್ದೇನೆ. ಕಳೆದವರ್ಷ ನಿರ್ಮಾಪಕರ ಹುಟ್ಟುಹಬ್ಬದ ದಿನ ಈ ಚಿತ್ರ ಆರಂಭವಾಗಿತ್ತು. ಈ ವರ್ಷ ಅವರ ಹುಟ್ಟುಹಬ್ಬದ ದಿನ ಟ್ರೇಲರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ಚಿತ್ರದ ತಮಿಳು ರೈಟ್ಸ್ ಕೂಡ ಮಾರಾಟವಾಗಿದೆ ಎಂದು ನಿರ್ದೇಶಕ ಅಫ್ಜಲ್ ತಿಳಿಸಿದರು.
ಹಾಡುಗಳ ಕುರಿತು ರಾಜು ಎಮ್ಮಿಗಾನೂರು ಮಾಹಿತಿ ನೀಡಿದರು. ಚಿತ್ರದಲ್ಲಿ ನಟಿಸಿರುವ ವಸಿಷ್ಠ ಬಂಟನೂರು, ರಣವೀರ್, ರಾಜ್ ಪ್ರಭು, ಅಂಜಲಿ, ರೇಖಾ ರಮೇಶ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.
