ಸರ್ಕಾರಿ ಕೆಲಸಕ್ಕೆ ಕೇಶವ, ಡ್ರೈವಿಂಗ್ ಕೆಲಸಕ್ಕೆ ವಲ್ಲಭ!: ಪತ್ನಿಯರ ಮುಂದೆ ಗುಟ್ಟು ಉಳಿಯುತ್ತಾ?

ಸರ್ಕಾರಿ ಕೆಲಸಕ್ಕೆ ಕೇಶವ, ಡ್ರೈವಿಂಗ್ ಕೆಲಸಕ್ಕೆ ವಲ್ಲಭ!: ನಂದಗೋಕುಲದಲ್ಲಿ ಸಹೋದರರ ಸವಾಲ್

Untitled design 2026 05 08T200535.902

ಕಲರ್ಸ್ ಕನ್ನಡ ವಾಹಿನಿಯಲ್ಲಿ ವೀಕ್ಷಕರಿಂದ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿರುವ ಧಾರಾವಾಹಿ ‘ನಂದಗೋಕುಲ’. ಕೌಟುಂಬಿಕ ಮೌಲ್ಯಗಳ ಜೊತೆಗೆ ಸಣ್ಣಪುಟ್ಟ ಮೋಜಿನ ಪ್ರಸಂಗಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುತ್ತಿರುವ ಈ ಸೀರಿಯಲ್‌ನಲ್ಲಿ, ಇದೀಗ ಕೇಶವ ಮತ್ತು ವಲ್ಲಭನ ‘ಸಹೋದರರ ಸವಾಲ್’ ಪ್ರಸಂಗ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸುತ್ತಿದೆ.

ಅಷ್ಟೇ ಅಲ್ಲ ಕೇಶವ ಮತ್ತು ಮೀನಾ ಪ್ರೀತಿಸಿ ಮದುವೆಯಾದವರು. ಆದರೆ ಈ ಮದುವೆ ಮೀನಾ ತಂದೆಗೆ ಎಳ್ಳಷ್ಟೂ ಇಷ್ಟವಿಲ್ಲ. ದೇವಸ್ಥಾನದಲ್ಲಿ ಇವರನ್ನು ನೋಡಿ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ ಎಂದು ಮೀನಾ ತಂದೆ ಅವಮಾನ ಮಾಡಿದ್ದು, ಕೇಶವನ ಸ್ವಾಭಿಮಾನಕ್ಕೆ ಪೆಟ್ಟು ನೀಡಿದೆ. ತಾನು ಸರ್ಕಾರಿ ಕೆಲಸ ಮಾಡ್ತಿಲ್ಲ ಅನ್ನೋ ಬೇಸರದಲ್ಲಿ ಕೇಶವ, ತನ್ನ ತಮ್ಮ ವಲ್ಲಭನ ಮುಂದೆ ಹೋಗಿ ಈ ನೋವನ್ನು ಹಂಚಿಕೊಳ್ಳುತ್ತಾನೆ. ನಾನು ಹೇಗಾದರೂ ಮಾಡಿ ಸರ್ಕಾರಿ ಕೆಲಸಕ್ಕೆ ಸೇರಿಕೊಳ್ಳುತ್ತೇನೆ ಎಂದು ಶಪಥ ಮಾಡುತ್ತಾನೆ. ಇತ್ತ ವಲ್ಲಭ ಕೂಡ ತಾನು ಡ್ರೈವಿಂಗ್ ಕೆಲಸಕ್ಕೆ ಹೋಗಿ ಅಷ್ಟೋ ಇಷ್ಟು ಕಾಸು ಮಾಡಬೇಕು ಎಂಬ ತನ್ನ ಮನದ ಆಸೆಯನ್ನು ಅಣ್ಣನ ಮುಂದೆ ಬಿಚ್ಚಿಡುತ್ತಾನೆ.

ಈ ಇಬ್ಬರು ಸಹೋದರರು ಒಟ್ಟಾಗಿ ಒಂದು ನಿರ್ಧಾರಕ್ಕೆ ಬರುತ್ತಾರೆ. ಯಾವುದೇ ಕಾರಣಕ್ಕೂ ನಮ್ಮಿಬ್ಬರ ನಡುವಿನ ಈ ಮಾತು ನಮ್ಮ ಹೆಂಡ್ತಿಯರಿಗೆ ಗೊತ್ತಾಗಬಾರದು ಎಂಬ ನಿರ್ಧಾರಕ್ಕೆ ಬರುತ್ತಾರೆ. ಗುಟ್ಟು ರಟ್ಟಾಗದಂತೆ ಒಬ್ಬರಿಗೊಬ್ಬರು ಪ್ರಾಮಿಸ್‌ ಪಡೆದುಕೊಳ್ತಾರೆ. ಆದರೆ, ಕೇಶವ ಮನೆಗೆ ಬಂದವನೇ ತನ್ನ ಪತ್ನಿ ಮೀನಾ ಮುಂದೆ ವಲ್ಲಭ ಡ್ರೈವಿಂಗ್ ಕೆಲಸಕ್ಕೆ ಹೋಗುವ ಗುಟ್ಟನ್ನು ಹೇಳಿಬಿಡುತ್ತಾನೆ!. ಆದರೆ ಈ ವಿಷಯವನ್ನು ಯಾವುದೇ ಕಾರಣಕ್ಕೂ ಅಮೂಲ್ಯ ಮುಂದೆ ಹೇಳಬಾರದು ಎಂಬ ಕಂಡೀಷನ್ ಬೇರೆ ಹಾಕುತ್ತಾನೆ.

ಇತ್ತ ವಲ್ಲಭ ಕೂಡ ಅಷ್ಟೇ, ತನ್ನ ಹೆಂಡತಿ ಅಮೂಲ್ಯ ಬಳಿ ಬಂದು ಕೇಶವಣ್ಣ ಗೌವರ್ನ್‌ಮೆಂಟ್‌ ಕೆಲಸಕ್ಕೆ ಸೇರ್ತಾರೆ, ಮೀನಾಳ ಮುಂದೆ ಹೇಳಬೇಡ ಎಂದು ಗುಟ್ಟನ್ನು ರಟ್ಟು ಮಾಡುತ್ತಾನೆ. ಪಾಪ, ಮೀನಾಳಿಗೆ ಗುಟ್ಟುಗಳನ್ನು ಗೌಪ್ಯವಾಗಿಟ್ಟುಕೊಳ್ಳುವುದು ಅಸಾಧ್ಯದ ಮಾತು!. “ಹೊಟ್ಟೆಯಲ್ಲಿ ಏನೋ ಚಿಟ್ಟೆ ಓಡಾಡಿದಂತಾಗುತ್ತಿದೆ” ಎಂದು ಒದ್ದಾಡುವ ಮೀನಾ, ಅಡುಗೆ ಮನೆಯಲ್ಲಿ ಅಮೂಲ್ಯ ಸಿಕ್ಕ ಕೂಡಲೇ ವಲ್ಲಭನ ಪ್ಲಾನ್ ಅನ್ನು ಬಾಯಿ ಬಿಡ್ತಾಳೆ. ಅಲ್ಲಿಗೆ ಸಹೋದರರ ಸವಾಲ್ ಮಣ್ಣು ಪಾಲಾಗಿ, ಹೆಣ್ಮಕ್ಕಳ ಬಾಯಲ್ಲಿ ಮಾತು ನಿಲ್ಲಲ್ಲ ಅನ್ನೋದನ್ನ ನಂದಗೋಕುಲ ಧಾರಾವಾಹಿಯಲ್ಲಿ ಹಾಸ್ಯದ ಮೂಲಕ ಅದ್ಭುತವಾಗಿ ಚಿತ್ರಿಸಲಾಗಿದೆ.

ಗಂಡಂದಿರ ಅತಿಯಾದ ಆತ್ಮವಿಶ್ವಾಸ ಮತ್ತು ಹೆಂಡತಿಯರ ಮುಗ್ಧ ಚಾಡಿ ಮಾತುಗಳ ನಡುವಿನ ಈ ಕಚ್ಚಾಟ ವೀಕ್ಷಕರಿಗೆ ಸಖತ್ ಮನರಂಜನೆ ನೀಡುತ್ತಿದೆ. ಈ ಮೋಜಿನ ಪ್ರಸಂಗಗಳನ್ನು ಮಿಸ್ ಮಾಡದೆ ನೋಡಿ ನಂದಗೋಕುಲದಲ್ಲಿ. ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 9ಕ್ಕೆ ನಿಮ್ಮ ನೆಚ್ಚಿನ ಕಲರ್ಸ್ ಕನ್ನಡ ಮತ್ತು ಜಿಯೋಹಾಟ್‌ಸ್ಟಾರ್‌ನಲ್ಲಿ.

Exit mobile version