ದೇವರ ನಾಡನ್ನು ರಕ್ಷಿಸೋಕೆ ಮತ್ತೆ ಬರ್ತಿದ್ದಾನೆ ‘ಲೂಸಿಫರ್’..!

‘ಲೂಸಿಫರ್’ಗಿಂತ 10 ಪಟ್ಟು ಜೋರಿರಲಿದೆ ‘ಎಂಪುರಾನ್’..!

Befunky collage 2025 03 20t172940.271

ಎಲ್2 ಎಂಪುರಾನ್.. ಇದೇ ಮಾರ್ಚ್ 27ರಂದು ವರ್ಲ್ಡ್ ವೈಡ್ ತೆರೆಗಪ್ಪಳಿಸೋಕೆ ಸಜ್ಜಾಗಿರೋ ಮಲಯಾಳಂ ಸಿನಿಮಾ. 2019ರಲ್ಲಿ ಮಲಯಾಳಂ ಚಿತ್ರರಂಗದಲ್ಲಿ ತೆರೆಕಂಡ ಲೂಸಿಫರ್ ಸಿನಿಮಾದ ಸೀಕ್ವೆಲ್. ಅಂದಹಾಗೆ ಲೂಸಿಫರ್ ಸಿನಿಮಾ, ಮೇಕಿಂಗ್, ಕಥೆ, ಪಾತ್ರಗಳ ಪ್ರಸ್ತುತ ಪಡಿಸುವಿಕೆ, ಬಾಕ್ಸ್ ಆಫೀಸ್ ಹೀಗೆ ಹತ್ತು ಹಲವು ವಿಚಾರಗಳಲ್ಲಿ ದಾಖಲೆಗಳನ್ನ ಬರೆದಿತ್ತು.

ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಲೀಡ್ ನಲ್ಲಿ ನಟಿಸಿದ್ದ ಈ ಸಿನಿಮಾಗೆ ಮತ್ತೊಬ್ಬ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಆ್ಯಕ್ಷನ್ ಕಟ್ ಹೇಳಿದ್ರು. ಅಲ್ಲದೆ, ಆ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಒನ್ಸ್ ಅಗೈನ್ ಮೋಹನ್ ಲಾಲ್ ಜೊತೆ ಪೃಥ್ವಿರಾಜ್ ಕಾಂಬೋ ವರ್ಕೌಟ್ ಆಗಿದೆ. ಲೂಸಿಫರ್ ಸೀಕ್ವೆಲ್ ಎಲ್2 ಎಂಪುರಾನ್ ಟ್ರೈಲರ್ ಮೂಲಕ ಸಿನಿಮಾ ಗತ್ತು, ಗಮ್ಮತ್ತು ಹೊರಹಾಕಿದೆ. ಯೆಸ್.. ಎಂಪುರಾನ್ ಚಿತ್ರದ ಟ್ರೈಲರ್ ಲಾಂಚ್ ಆಗಿದೆ.

ಈ ಬಾರಿ ಲೂಸಿಫರ್ ಚಿತ್ರದ ಹತ್ತು ಪಟ್ಟು ಜೋರಿದೆ ಅದರ ಸೀಕ್ವೆಲ್. ಮೇಕಿಂಗ್ ಯಾವ ಬಾಲಿವುಡ್ ಸಿನಿಮಾಗೂ ಕಮ್ಮಿ ಇಲ್ಲ ಅನಿಸ್ತಿದೆ. ಹಾಲಿವುಡ್ ಶೈಲಿಯ ಸ್ಟಂಟ್ಸ್ ಇಡಲಾಗಿದೆ. ಪಾತ್ರಗಳ ಆಯ್ಕೆ, ಲೊಕೇಷನ್ಸ್, ಕ್ಯಾಮೆರಾ ವರ್ಕ್, ಬ್ಯಾಗ್ರೌಂಡ್ ಸ್ಕೋರ್, ಡ್ರಾಮಾ ಕಥೆ, ಡ್ರಗ್ ದುನಿಯಾ ಹೀಗೆ ಎಲ್ಲವೂ ಸಿನಿಮಾದ ಮೇಲಿನ ಭರವಸೆ ಹತ್ತು ಪಟ್ಟು ಹೆಚ್ಚಿಸಿವೆ. 2019ರಲ್ಲೇ 127 ಕೋಟಿ ಗಳಿಸಿದ್ದ ಲೂಸಿಫರ್ ಸಿನಿಮಾ, ಇದೀಗ ಲೂಸಿಫರ್ 2 ಅದ್ರ ನಾಲ್ಕೈದು ಪಟ್ಟು ಜಾಸ್ತಿನೇ ಗಳಿಸೋ ಮುನ್ಸೂಚನೆ ನೀಡಿದೆ. ಹೌದು.. ಮೋಹನ್ ಲಾಲ್ ಈ ಚಿತ್ರದಲ್ಲಿ ಲೂಸಿಫರ್ ಗಿಂತ ಜಾಸ್ತಿ, ಇಂಟರ್ ನ್ಯಾಷನಲ್ ಗ್ಯಾಂಗ್ ಸ್ಟರ್ ಆಗಿ ಜಾಸ್ತಿ ಕಾಣಸಿಗಲಿದ್ದಾರೆ. ಲೋಕಲ್ ಸ್ಟೀಫನ್ ನಿಡುಂಪಲ್ಲಿಗಿಂತ ಅಬ್ರಾಹಂ ಖುರೇಷಿಯಾಗಿಯೇ ಹೆಚ್ಚು ಖದರ್ ತೋರಿದ್ದಾರೆ.

ಅವರ ಸ್ಟೈಲು, ಮ್ಯಾನರಿಸಂ, ಲುಕ್ಸ್, ಕಾಸ್ಟ್ಯೂಮ್ಸ್ ಎಲ್ಲವೂ ನೋಡುಗರಿಗೆ ಡಬಲ್ ಕಿಕ್ ಕೊಡಲಿದೆ. ಅದ್ರಲ್ಲೂ ಇಂಟರ್ ನ್ಯಾಷನಲ್ ಡ್ರಗ್ ದುನಿಯಾನ ಅನಾವರಣಗೊಳಿಸಿರೋ ಪರಿ ನೋಡುಗರಿಗೆ ಥ್ರಿಲ್ ಕೊಡಲಿದೆ. ಇನ್ನು ನಾಯಕನಟ ಮೋಹನ್ ಲಾಲ್ ಇಂಟರ್ ನ್ಯಾಷನಲ್ ಲೆವೆಲ್ ಗಷ್ಟೇ ಅಬ್ರಾಹಂ.. ಆತ ದೇವರ ನಾಡು ಅರ್ಥಾತ್ ಹುಟ್ಟಿದೂರಿನ ಪಾಲಿಗೆ ಸದಾ ಸ್ಟೀಫನ್ ನಡುಂಪಲ್ಲಿಯೇ. ಹಾಗಾಗಿ ಟ್ರೈಲರ್ ನಲ್ಲಿ ಬರೋ ಆ ಒಂದು ಕರೆಯಿಂದ ದೇವರ ನಾಡನ್ನ ರಕ್ಷಿಸೋಕೆ ಪಂಚೆ ಕಟ್ಟಿ ನಿಲ್ತಾರೆ.

ಇನ್ನು ರಾಮನಿಗೆ ಹನುಮನಿದ್ದಂತೆ, ಇಲ್ಲಿ ಮೋಹನ್ ಲಾಲ್ ಜೊತೆ ಝಾಯೆದ್ ಮಸೂದ್ ಆಗಿ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರ ಪೋಷಿಸಿದ್ದಾರೆ. ನಿರ್ದೇಶನದ ಜೊತೆಗೆ ಸಿನಿಮಾಗೆ ಮಹತ್ವದ ತಿರುವು ನೀಡುವ ಪಾತ್ರದಲ್ಲಿ ಪೃಥ್ವಿರಾಜ್ ಸಿನಿಮಾದ ಪಂಚ್ ಹೆಚ್ಚಿಸಲಿದ್ದಾರೆ. ಮಂಜು ವಾರಿಯರ್, ಟೊವಿನೋ ಥಾಮಸ್, ಅಭಿಮನ್ಯು ಸಿಂಗ್, ಇಂದ್ರಜಿತ್ ಸುಕುಮಾರನ್ ಪ್ರಮುಖ ತಾರಾಗಣದಲ್ಲಿದ್ದು, ರಾಮದಾಸ್ ಕುಟುಂಬದ ಆಂತರಿಕ ಕಲಹಗಳು, ರಾಜನೀತಿ ಯಥಾವತ್ ಮುಂದುವರೆದಿದೆ.

ತಂದೆ ಮತ್ತು ಮಗನ ನಡುವಿನ ಕಗ್ಗತ್ತಲ ಪ್ರಪಂಚವೇ ಈ ಎಂಪುರಾನ್ ಅನ್ನೋದು ಸಿನಿಮಾದ ಒಟ್ಟಾರೆ ಹೂರಣವಾಗಿದ್ದು, ಮಂಜುಮ್ಮೆಲ್ ಬಾಯ್ಸ್ ಹಾಗೂ 2018 ಸಿನಿಮಾಗಳ ಬಾಕ್ಸ್ ಆಫೀಸ್ ಕಲೆಕ್ಷನ್ ದಾಖಲೆಯನ್ನ ಸರಿಗಟ್ಟುವ ಸೂಚನೆ ನೀಡಿದೆ. ಮಲಯಾಳಂ ಜೊತೆ ಒಟ್ಟು ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ರಿಲೀಸ್ ಆಗ್ತಿರೋ ಎಂಪುರಾನ್ ಸಿನಿಮಾನ ಕರ್ನಾಟಕದಲ್ಲಿ ಪ್ರತಿಷ್ಠಿತ ಹೊಂಬಾಳೆ ಫಿಲಂಸ್ ವಿತರಿಸುತ್ತಿದೆ. ಹಾಗಾಗಿ ವಿಶ್ವದಾದ್ಯಂತ ಈ ಸಿನಿಮಾ ಎಷ್ಟು ಕೋಟಿ ಲೂಟಿ ಮಾಡಲಿದೆ ಅನ್ನೋದನ್ನ ನಿರೀಕ್ಷಿಸಬೇಕಿದೆ.

Exit mobile version