ಕನ್ನಡ ಚಿತ್ರರಂಗದ ಹಿರಿಯ ನಟಿ ಎಂ.ಎನ್. ಲಕ್ಷ್ಮೀದೇವಿ ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದೀಗ ಈ ವದಂತಿಗೆ ಅವರ ಕುಟುಂಬದವರು ಸ್ಪಷ್ಟನೆ ನೀಡಿದ್ದಾರೆ. 92 ವರ್ಷದ ಲಕ್ಷ್ಮೀದೇವಿ ಅವರು ಆರೋಗ್ಯವಾಗಿದ್ದು, ನಿಧನರಾಗಿಲ್ಲ ಎಂದು ಅವರ ಮೊಮ್ಮಗಳು ದೀಪಿಕಾ ಶರಣ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗೆ ಪ್ರತಿಕ್ರಿಯಿಸಿರುವ ದೀಪಿಕಾ ಶರಣ್, “ಲಕ್ಷ್ಮೀದೇವಿ ಅವರು ಆರೋಗ್ಯವಾಗಿದ್ದಾರೆ. ದಯವಿಟ್ಟು ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ” ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಲಕ್ಷ್ಮೀದೇವಿ ಅವರೂ ಸ್ವತಃ ವಿಡಿಯೋ ಮೂಲಕ ಪ್ರತಿಕ್ರಿಯಿಸಿ ತಮ್ಮ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಹಿರಿಯ ಕಲಾವಿದರ ನಿಧನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹರಡುವುದು ಇದೇ ಮೊದಲೇನಲ್ಲ. ಈ ಹಿಂದೆ ಹಿರಿಯ ನಟ ದೊಡ್ಡಣ್ಣ ಅವರ ನಿಧನದ ಬಗ್ಗೆಯೂ ಇದೇ ರೀತಿಯ ವದಂತಿ ಹರಡಿತ್ತು. ಆಗ ದೊಡ್ಡಣ್ಣ ಅವರು ಸ್ವತಃ ಸ್ಪಷ್ಟನೆ ನೀಡಿ ವದಂತಿಗೆ ತೆರೆ ಎಳೆದಿದ್ದರು. ಇದೀಗ ಲಕ್ಷ್ಮೀದೇವಿ ಅವರ ವಿಚಾರದಲ್ಲೂ ಇಂತಹದ್ದೇ ಘಟನೆ ನಡೆದಿದೆ.
ಏಳು ದಶಕಗಳ ಸುದೀರ್ಘ ಕಲಾಸೇವೆ
ಬ್ಲಾಕ್ ಆಂಡ್ ವೈಟ್ ಚಿತ್ರಗಳ ಕಾಲದಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಲಕ್ಷ್ಮೀದೇವಿ ಅವರು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ನೂರಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು ಹಾಸ್ಯ, ಪೋಷಕ ಪಾತ್ರಗಳು ಹಾಗೂ ಅಜ್ಜಿ ಪಾತ್ರಗಳ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.
‘ಶ್ರೀನಿವಾಸ ಕಲ್ಯಾಣ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು ಕನ್ನಡ ಚಿತ್ರರಂಗದ ಹಲವು ದಿಗ್ಗಜ ನಟ-ನಟಿಯರೊಂದಿಗೆ ಅಭಿನಯಿಸಿದ್ದಾರೆ. ‘ಭಕ್ತ ಕನಕದಾಸ’, ‘ಬಂಗಾರದ ಮನುಷ್ಯ’, ‘ವೀರ ಕೇಸರಿ’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
ಹಿರಿಯ ಹಾಸ್ಯ ನಟ ನರಸಿಂಹರಾಜು ಅವರೊಂದಿಗೆ ಲಕ್ಷ್ಮೀದೇವಿ ಅವರ ಕಾಮಿಡಿ ಕಾಂಬಿನೇಷನ್ ಕೂಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ ಅವರು ‘ಕಳ್ಳರ ಕಳ್ಳ’ ಸಿನಿಮಾದ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಜೊತೆಗೆ ಡಾ. ರಾಜ್‌ಕುಮಾರ್ ಜೀವನಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಏಳು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿರುವ ಈ ಹಿರಿಯ ಕಲಾವಿದೆಯ ನಿಧನದ ಬಗ್ಗೆ ಹರಡಿರುವ ಸುದ್ದಿ ಸುಳ್ಳು ಎಂಬುದು ಕುಟುಂಬದ ಸ್ಪಷ್ಟನೆಯಿಂದ ದೃಢಪಟ್ಟಿದೆ. ಈ ರೀತಿಯ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ಕುಟುಂಬದವರು ಮನವಿ ಮಾಡಿದ್ದಾರೆ.
