ಹಾರರ್ ‘ಮಿಕ್ಸಿಂಗ್ ಪ್ರೀತಿಯಲ್ಲಿ’ ಸೂಪರ್ ಮಾಡೆಲ್ ಸಂಹಿತಾ ವಿನ್ಯಾ

Untitled design 2026 02 17T203016.866

ಪೊಲ್ಲಾಚಿ ಮಹಾಲಿಂಗಂ ಅವರ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ, ಹಾರರ್, ಥ್ರಿಲ್ಲರ್ ಜಾನರ್ ಚಲನಚಿತ್ರ ‘ಮಿಕ್ಸಿಂಗ್ ಪ್ರೀತಿ’ ಇದೇ ತಿಂಗಳ 20ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಸ್ಯಾಂಡಲ್‌ವುಡ್ ನಟಿ ಮತ್ತು ಸೂಪರ್ ಮಾಡೆಲ್ ಸಂಹಿತಾ ವಿನ್ಯಾ ನಾಯಕಿಯಾಗಿ ನಟಿಸಿದ್ದಾರೆ.

ಒಂದು ರೆಸಾರ್ಟ್ ನಲ್ಲಿ ನಡೆಯುವ ಹಾರರ್ ಕಥೆ ಇದಾಗಿದ್ದು, 3 ಜನ ಫ್ರೆಂಡ್ಸ್ ಆ ರೆಸಾರ್ಟ್ ಗೆ ಹೋದಾಗ ಅವರು ಎದುರಿಸುವ ದೆವ್ವದ ಕಾಟ, ಅಲ್ಲಿಂದ ಅವರೆಲ್ಲ ಹೇಗೆ ಹೊರಬಂದರು ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಈ ನಡುವೆ ಒಂದು ಲವ್ ಸ್ಟೋರಿ ಕೂಡ ಸಾಗುತ್ತದೆ. ಕೇರಳ, ಚೆನ್ನೈ ಹಾಗೂ ಬೆಂಗಳೂರಲ್ಲಿ ಚಿತ್ರೀಕರಣ‌ ನಡೆಸಲಾಗಿದೆ. ರೆಸಾರ್ಟ್ ನಲ್ಲಿ ರಾತ್ರಿ ವೇಳೆ ಶೂಟ್ ಮಾಡುವಾಗ ನಿಜವಾದ ಹಾರರ್ ಫೀಲ್ ಆಯ್ತು ಎಂದು ನಾಯಕಿ ಸಂಹಿತಾ ಚಿತ್ರೀಕರಣದ ಅನುಭವ ಹಂಚಿಕೊಂಡರು.

ದೇಶ ವಿದೇಶಗಳ 75ಕ್ಕೂ ಹೆಚ್ಚು ಫ್ಯಾಷನ್ ಷೋಗಳಲ್ಲಿ ಶೋಸ್ಟಾಪರ್ ಆಗಿ ಭಾಗವಹಿಸಿ, ಸೂಪರ್ ಮಾಡೆಲ್ ಎನಿಸಿಕೊಂಡಿರುವ ಸಂಹಿತಾ ವಿನ್ಯಾ ಕನ್ನಡ ಹಾಗೂ ತಮಿಳು ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಅವರು ಹಾರರ್, ಥ್ರಿಲ್ಲರ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಸಂಹಿತಾ ವಿನ್ಯಾ ನಾಯಕಿಯಾಗಿ ನಟಿಸಿರುವ ಮೆಜೆಸ್ಟಿಕ್ -2′, ಆಯುಧ, ಸ್ವಾಭಿಮಾನಿ, ಯಾಕೋ ಬೇಜಾರು, ವಿದೂಷಕ ಚಿತ್ರಗಳು ಸದ್ಯದಲ್ಲೇ ಬಿಡುಗಡೆಗೆ ಸಿದ್ದವಾಗಿವೆ‌. ಅಮೃತಘಳಿಗೆ, ಜಿಎಸ್ ಟಿ, ಲಂಗೋಟಿ ಮ್ಯಾನ್ ಅಲ್ಲದೆ ತೆಲುಗಿನ ಯು ಆರ್ ಮೈ ಹೀರೋ ಚಿತ್ರದಲ್ಲೂ ಸಂಹಿತಾ ವಿನ್ಯಾ ಅವರು ನಟಿಸಿದ್ದಾರೆ.

ಹಾಲು ತುಪ್ಪ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಸಂಹಿತಾ ವಿನ್ಯಾ,‌ ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು, ಅಮೃತ ಘಳಿಗೆ, ವಿಷ್ಣು ಸರ್ಕಲ್, ನಸಾಬ್, ಮಿಕ್ಸಿಂಗ್ ಪ್ರೀತಿ, ಸ್ವಾಭಿಮಾನಿ ಅಲ್ಲದೆ ತೆಲುಗು, ತಮಿಳು ಸೇರಿದಂತೆ 18ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಇದಲ್ಲದೆ ತಮಿಳಲ್ಲಿ ಜತಿನ್ ರಮೇಶ್ ಅಭಿನಯದ ಸಿನಿಮಾ, ಅಲ್ಲದೆ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ ಹಿಡನ್ ಕ್ಯಾಮೆರಾ ಚಿತ್ರದಲ್ಲಿ ಸಂಹಿತಾ ನಾಯಕಿಯಾಗಿ ನಟಿಸುತ್ತಿದ್ದು, ಆ ಚಿತ್ರದ ಕೆಲಸ ಕೇರಳದಲ್ಲಿ ನಡೆಯುತ್ತಿದೆ.
ಮಿಕ್ಸಿಂಗ್ ಪ್ರೀತಿ ಚಿತ್ರದಲ್ಲಿ ಹೆಸರಾಂತ ಮಲಯಾಳಂ ನಟ ಸಿಂಟೊ ಜಾಕೋಬ್ ನಾಯಕನಾಗಿ ನಟಿಸಿದ್ದಾರೆ. ಉಳಿದಂತೆ ಪ್ರಿಯಾ ಪವನ್, ದಿವ್ಯ ಜಸ್ಮಿತಾ ನಟಿಸಿದ್ದಾರೆ.

ಈ ಚಿತ್ರಕ್ಕೆ ರಾಜೇಶ್ ಮೋಹನ್ ಮತ್ತು ಗಣೇಶ್ವರನ್ ಅವರ ಸಂಗೀತ, ಸಾಧಿಕ್ ಕಬೀರ್ ಅವರ ಛಾಯಾಗ್ರಹಣವಿದೆ.
ಇದೇ ಚಿತ್ರವು ತಮಿಳಲ್ಲಿ ಮಿಕ್ಸಿಂಗ್ ಕಾದಲ್ ಎಂಬ ಹೆಸರಲ್ಲಿ ಬಿಡುಗಡೆಯಾಗುತ್ತಿದೆ.

Exit mobile version