ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ ಚೊಚ್ಚಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ‘ಮ್ಯಾಂಗೋ ಪಚ್ಚ’ ಚಿತ್ರ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈಗಾಗಲೇ ಹಸಿರವ್ವ ಹಾಡಿನ ಮೂಲಕ ಯುವಜನತೆಯ ಮನಗೆದ್ದಿದ್ದ ಚಿತ್ರತಂಡ, ಇದೀಗ ಎರಡನೇ ಹಾಡು ಅರಗಿಣಿಯೇ ಬಿಡುಗಡೆ ಮಾಡುವ ಮೂಲಕ ಪ್ರೇಮಿಗಳ ಲೋಕದಲ್ಲಿ ಸಂಚಲನ ಮೂಡಿಸಿದೆ.
ಮೈಸೂರಿನ ಸೌಂದರ್ಯದ ಅನಾವರಣ
ಈ ಹಾಡಿನ ವಿಶೇಷತೆಯೆಂದರೆ ಇದರ ದೃಶ್ಯ ವೈಭವ. ದಶಕಗಳ ಹಿಂದೆ ಪಲ್ಲವಿ ಅನುಪಲ್ಲವಿ ಸಿನಿಮಾದಲ್ಲಿ ಬೆಂಗಳೂರನ್ನು ಎಷ್ಟು ಸುಂದರವಾಗಿ ಚಿತ್ರಿಸಲಾಗಿತ್ತೋ, ಅಷ್ಟೇ ಸೊಗಸಾಗಿ ಸಾಂಸ್ಕೃತಿಕ ನಗರಿ ಮೈಸೂರನ್ನು ಈ ಹಾಡಿನಲ್ಲಿ ಸೆರೆಹಿಡಿಯಲಾಗಿದೆ. ಮೈಸೂರಿನ ಐತಿಹಾಸಿಕ ಕಟ್ಟಡಗಳು, ರಸ್ತೆಗಳು ಮತ್ತು ಅಲ್ಲಿನ ಪರಿಸರವನ್ನು ಕ್ಯಾಮೆರಾ ಕಣ್ಣುಗಳಲ್ಲಿ ಅದ್ಭುತವಾಗಿ ಕಟ್ಟಿಕೊಡಲಾಗಿದ್ದು, ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಧ್ವನಿಯಾದ ಸಾನ್ವಿ ಸುದೀಪ್:
ಸಂಗೀತ ನಿರ್ದೇಶಕ ಚರಣ್ ರಾಜ್ ಅವರ ವಿಶಿಷ್ಟ ಶೈಲಿಯ ಸಂಗೀತಕ್ಕೆ ಧನಂಜಯ್ ರಂಜನ್ ಸಾಹಿತ್ಯ ಬರೆದಿದ್ದಾರೆ. ಈ ಮೆಲೋಡಿ ಹಾಡಿಗೆ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ ಹಾಗೂ ಕಪಿಲ್ ಕಪಿಲನ್ ಧ್ವನಿ ನೀಡಿದ್ದಾರೆ. ಸಾನ್ವಿ ಅವರ ಧ್ವನಿ, ಹಾಡಿಗೆ ಹೊಸ ಕಳೆ ತಂದಿದ್ದು, ಹರ್ಷ ಮಾಸ್ಟರ್ ಅವರ ನೃತ್ಯ ಸಂಯೋಜನೆ ಪ್ರೇಕ್ಷಕರನ್ನು ಸೆಳೆಯುವಂತಿದೆ.
ತಾರಾಗಣ ಮತ್ತು ತಾಂತ್ರಿಕ ತಂಡ:
ಯುವ ನಿರ್ದೇಶಕ ವಿವೇಕಾ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸಂಚಿತ್ ಸಂಜೀವ್ ಅವರಿಗೆ ಜೋಡಿಯಾಗಿ ಕಾಜಲ್ ಕುಂದರ್ ನಟಿಸಿದ್ದು, ಪೋಷಕ ಪಾತ್ರಗಳಲ್ಲಿ ಮಯೂರ್ ಪಟೇಲ್, ವಿಜಯ ರಾಘವೇಂದ್ರ ಅವರ ಅಕ್ಕನ ಮಗ ಜೇಯ್ ಮತ್ತು ಹಂಸ ಕಾಣಿಸಿಕೊಂಡಿದ್ದಾರೆ.
ಈ ಚಿತ್ರವನ್ನು ಪ್ರತಿಷ್ಠಿತ ಕೆಆರ್ ಜಿ ಸ್ಟುಡಿಯೋ ಹಾಗೂ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಒಡೆತನದ ಸುಪ್ರಿಯಾನ್ವಿ ಪ್ರೊಡಕ್ಷನ್ ಜಂಟಿಯಾಗಿ ನಿರ್ಮಿಸಿವೆ. ಗುಣಮಟ್ಟದ ಮೇಕಿಂಗ್ ಹಾಗೂ ಸ್ಟಾರ್ ಕಿಡ್‌ಗಳ ಎಂಟ್ರಿಯಿಂದಾಗಿ ಮ್ಯಾಂಗೋ ಪಚ್ಚ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿದೆ.
