ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ‘ಮ್ಯಾಂಗೋ ಪಚ್ಚ’ ಚಿತ್ರದ ಹವಾ ಜೋರಾಗಿದೆ. ಸಿನಿಮಾ ಸೂಪರ್ ಸಕ್ಸಸ್ ಆಗಿ ಮುನ್ನುಗ್ಗುತ್ತಿರುವ ಬೆನ್ನಲ್ಲೇ ಚಿತ್ರತಂಡ ಹಮ್ಮಿಕೊಂಡಿದ್ದ ಸಕ್ಸಸ್ ಮೀಟ್‌ನಲ್ಲಿ ಅಸಲಿ ವಿಷಯ ಬಿಚ್ಚಿಟ್ಟಿದ್ದಾರೆ. ಇನ್ನೊಂದು ಕಡೆ ಕಿಚ್ಚ ಸುದೀಪ್ ಗೆ ಎದುರಾದ ನೆಪೋಟಿಸಂ ಪ್ರಶ್ನೆಗೆ ರಿಯಾಕ್ಟ್ ಮಾಡಿದ್ದೆ ಬೇರೆ ರೀತಿ. ಹಾಗಾದ್ರೆ ಮ್ಯಾಂಗೋ ಪಚ್ಚ ಸಕ್ಸಸ್ ಹೈಲೈಟ್ಸ್ ಜೊತೆಗೆ ಕಿಚ್ಚನ ನೆಪೋಟಿಸಂ ಕಿಚ್ಚು ಹೇಗಿತ್ತು ಅನ್ನೋದರ ಡಿಟೇಲ್ಸ್ ಇಲ್ಲಿದೆ…
- ಯಶಸ್ಸಿನ ಅಲೆಯಲ್ಲಿ ಮ್ಯಾಂಗೋ ಪಚ್ಚ.. ಸಕ್ಸಸ್ ಮೀಟ್ ಹೈಲೈಟ್ಸ್
- ಸುದೀಪ್ ಕಾಲು ಮುಟ್ಟಿ ನಮಸ್ಕರಿಸಿದ ಸಂಚಿತ್..!
- “ನನ್ನ ಮಗ ಇನ್ನು ನಿಮ್ಮ ಮಗ” ಪ್ರಿಯಾ ಸುದೀಪ್ ಭಾವುಕ
- ಕನ್ನಡದಲ್ಲಿ ನೆಪೋಟಿಸಂ ಇಲ್ಲ, ಬಾಲಿವುಡ್ ಕಥೆ ಇಲ್ಲಿ ಬೇಡ
ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡ್ತಿರೋ ‘ಮ್ಯಾಂಗೋ ಪಚ್ಚ’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ, ಚಿತ್ರತಂಡ ಹಮ್ಮಿಕೊಂಡಿದ್ದ ಸಕ್ಸಸ್ ಮೀಟ್ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಸಂಚಲನ ಮೂಡಿಸಿದೆ. ಇತ್ತೀಚೆಗಷ್ಟೇ ಥಿಯೇಟರ್‌ನಲ್ಲಿ ಕಿಚ್ಚನ ಹಿಂದೆ ನಿಂತಿದ್ದ ನಿಗೂಢ ವಿದೇಶಿ ಬಾಡಿಗಾರ್ಡ್‌ನ ಚರ್ಚೆ ಮುಗಿಯುವ ಮುನ್ನವೇ, ಈಗ ಈ ಸಕ್ಸಸ್ ಮೀಟ್‌ನ ವೇದಿಕೆ ಮತ್ತೊಂದು ಬಿಸಿ ಬಿಸಿ ಚರ್ಚೆಗೆ ಸಾಕ್ಷಿಯಾಗಿದೆ. ಚಿತ್ರದ ನಿರ್ಮಾಪಕಿ ಪ್ರಿಯಾ ಸುದೀಪ್, ನಿರ್ದೇಶಕ ವಿವೇಕ್, ನಟ ಸಂಚಿತ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಎಲ್ಲರೂ ಒಂದೇ ವೇದಿಕೆಯಲ್ಲಿ ಹಾಜರಿದ್ದು, ಚಿತ್ರದ ಗೆಲುವಿನ ಸಂಭ್ರಮದ ನಡುವೆಯೇ ಎದುರಾದ ವಿವಾದಗಳಿಗೆ ಖಾರವಾಗಿಯೇ ಉತ್ತರಿಸಿದ್ದಾರೆ.
ಸಕ್ಸಸ್ ಮೀಟ್‌ನಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕಿ ಪ್ರಿಯಾ ಸುದೀಪ್, ತಮ್ಮ ಮಗ ಸಂಚಿತ್ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿರುವ ಬಗ್ಗೆ ಅತ್ಯಂತ ಭಾವುಕರಾಗಿ ಮಾತನಾಡಿದರು. “ನಮ್ಮ ಸಿನಿಮಾ ಇಂದು ಥಿಯೇಟರ್‌ಗಳಲ್ಲಿ ಮಾತಾಡ್ತಿದೆ, ನಾನು ಜಾಸ್ತಿ ಮಾತಾಡುವುದು ಏನು ಇಲ್ಲ. ಈ ಸಿನಿಮಾದಿಂದ ಸಂಚಿತ್‌ಗೆ ತುಂಬಾ ತಾಯಂದಿರ ಪ್ರೀತಿ ಸಿಕ್ಕಿದೆ, ಅವ್ನು ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾನೆ” ಎಂದು ಹೆಮ್ಮೆಯಿಂದ ಹೇಳಿದ್ದಾರೆ.
ಇತ್ತ ನಾಯಕ ಸಂಚಿತ್ ಸಂಜೀವ್ ವೇದಿಕೆಯಲ್ಲಿ ಮಾತನಾಡುತ್ತಾ ತನ್ನ ಒಂದುವರೆ ವರ್ಷದ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಇದು ಎಂದು ಭಾವುಕರಗಿ ಮಾತಾಡಿದ್ರು ಇದರ ಜೊತೆಗೆ ಕಿಚ್ಚನಿಗೆ ಕೊಟ್ಟ ಗೌರವ ಎಂತದ್ದು ನೀವೇ ಈ ದೃಶ್ಯ ನೋಡಿ.
ಈ ಭಾವುಕ ಕ್ಷಣಗಳ ನಡುವೆ ಪತ್ರಕರ್ತರೊಬ್ಬರು ‘ನೆಪೋಟಿಸಂ’ ಕುರಿತು ಪ್ರಶ್ನೆ ಕೇಳುತ್ತಿದ್ದಂತೆ ಕಿಚ್ಚ ಸುದೀಪ್ ಖಾರವಾಗಿ ಪ್ರತಿಕ್ರಿಯಿಸಿದರು, “ಈ ಪ್ರಶ್ನೆಯನ್ನು ನೀವು ದೊಡ್ಮನೆಗೂ ಕೇಳಬೇಕಿತ್ತು, ಶಿವರಾಜ್ ಕುಮಾರ್ ಅವರಿಗೂ ಯಾಕೆ ಕೇಳಬಾರದು? ಅಷ್ಟೇ ಯಾಕೆ, ಅಂಬಾನಿ ಮಗನಿಗೆ ಯಾಕೆ ನೀವು ಈ ಪ್ರಶ್ನೆ ಕೇಳೋದಿಲ್ಲ?” ಎಂದು ನೇರವಾಗಿಯೇ ಗುಡುಗಿದರು. ದೊಡ್ಮನೆಯ ಶಿವಣ್ಣ ಹಾಗೂ ಅಪ್ಪು ಅವರಿಂದ ಎಷ್ಟೋ ಜನಕ್ಕೆ ಒಳ್ಳೆಯದಾಗಿದೆ, ಅದಕ್ಕೆ ಅವರಲ್ಲಿರೋ ಪ್ರತಿಭೆ ಕಾರಣವೇ ಹೊರತು ನೆಪೋಟಿಸಂ ಅಲ್ಲ ಎಂದು ಚಾಟಿ ಬೀಸಿದರು.
ನನಗೆ ನನ್ನ ಅಪ್ಪ ಇದ್ದಾರೆ, ಸಂಚಿತ್‌ಗೆ ಮಾಮನಾಗಿ ನಾನು ಇದ್ದೀನಿ. ನನ್ನ ಮಗಳಿಗೆ ಸಿಂಗಿಂಗ್ ಇಂಟ್ರೆಸ್ಟ್ ಇದೆ ಬಂದಿದ್ದಾಳೆ, ಇವನಿಗೆ ಆಕ್ಟಿಂಗ್ ಇಷ್ಟ ಬಂದಿದ್ದಾನೆ. ನಮ್ಮ ಮನೆಯಲ್ಲಿ ಇನ್ನು ತುಂಬಾ ಜನ ಅಕ್ಕನ ಮಕ್ಕಳಿದ್ದಾರೆ, ಅವರು ಯಾರೂ ಸಿನಿಮಾ ಇಂಡಸ್ಟ್ರಿಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ ಸುದೀಪ್ ಕೊನೆಯದಾಗಿ, ಕನ್ನಡ ಚಿತ್ರರಂಗದಲ್ಲಿ ನೆಪೋಟಿಸಂ ಅನ್ನೋ ಪ್ರಶ್ನೆಯೇ ಬರೋದಿಲ್ಲ. ಆ ಬಾಲಿವುಡ್ ಪ್ರಶ್ನೆಗಳನ್ನ ತಂದು ಇಲ್ಲಿ ಕೇಳಬೇಡಿ ಎಂದು ಕಡಾಖಂಡಿತವಾಗಿ ಹೇಳುವ ಮೂಲಕ ನೆಪೋಟಿಸಂ ಚರ್ಚೆಗೆ ಕಿಚ್ಚ ಸುದೀಪ್ ಕಂಪ್ಲೀಟ್ ಆಗಿ ಫುಲ್ ಸ್ಟಾಪ್ ಇಟ್ಟಿದ್ದಾರೆ.
