ಹಣಕಾಸು ವಂಚನೆ ಆರೋಪ: ನಟ ಮಹೇಶ್ ಬಾಬುಗೆ ಇಡಿ ಸಮನ್ಸ್!

Add a heading (21)

ಹೈದರಾಬಾದ್: ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್ ಮಹೇಶ್ ಬಾಬು, ಸಾಮಾನ್ಯವಾಗಿ ವಿವಾದಗಳಿಂದ ದೂರವಿರುವ ನಟ. ಸಿನಿಮಾ, ಕುಟುಂಬ, ಮತ್ತು ಜಾಹೀರಾತುಗಳಿಗೆ ಸೀಮಿತವಾದ ಅವರ ಜೀವನ, ಶಾಂತವಾಗಿತ್ತು. ಆದರೆ, ಈಗ ‘ಸಾಯಿ ಸೂರ್ಯ ಡೆವೆಲಪರ್ಸ್’ ಎಂಬ ರಿಯಲ್ ಎಸ್ಟೇಟ್ ಕಂಪನಿಯೊಂದಿಗಿನ ಸಂಬಂಧದಿಂದ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ನೊಟೀಸ್ ಜಾರಿಗೊಳಿಸಿದೆ.

ನಟ ಮಹೇಶ್ ಬಾಬು ‘ಸಾಯಿ ಸೂರ್ಯ ಡೆವೆಲಪರ್ಸ್’ ಕಂಪನಿಯ ಜಾಹೀರಾತಿನ ರಾಯಭಾರಿಯಾಗಿದ್ದರು. ಈ ಕಂಪನಿಯು ಅವರ ಚಿತ್ರವನ್ನು ಬಳಸಿಕೊಂಡು, ಅನಧಿಕೃತ ಲೇಔಟ್‌ಗಳನ್ನು ಗ್ರಾಹಕರಿಗೆ ಮಾರಾಟ ಮಾಡಿದೆ ಎಂಬ ಗಂಭೀರ ಆರೋಪ ಎದುರಾಗಿದೆ. ಹೈದರಾಬಾದ್‌ನ ಬಾಲಾಪುರ ಹಳ್ಳಿಯ ಸಮೀಪದಲ್ಲಿ ಈ ಕಂಪನಿಯು ರೂಪಿಸಿದ ಲೇಔಟ್‌ನ ಸೈಟ್‌ಗಳನ್ನು ಪ್ರತಿ ಸೈಟಿಗೆ ಸುಮಾರು 35 ಲಕ್ಷ ರೂಪಾಯಿಗಳಂತೆ ಮಾರಾಟ ಮಾಡಿತ್ತು. ಆದರೆ, ಈ ಲೇಔಟ್‌ಗಳು ಕಾನೂನಿನ ದೃಷ್ಟಿಯಿಂದ ಅಸ್ಥಿತ್ವದಲ್ಲೇ ಇರಲಿಲ್ಲ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ.

ADVERTISEMENT
ADVERTISEMENT
ವಂಚನೆಯ ಆರೋಪ:

ಸಾಯಿ ಸೂರ್ಯ ಡೆವೆಲಪರ್ಸ್, ಮಹೇಶ್ ಬಾಬುವಿನ ಚಿತ್ರವಿರುವ ಬ್ರೋಚರ್‌ಗಳನ್ನು ತಯಾರಿಸಿ, ಗ್ರಾಹಕರಿಗೆ ವಿತರಿಸಿತ್ತು. ಈ ಬ್ರೋಚರ್‌ಗಳಿಂದ ಆಕರ್ಷಿತರಾದ ಗ್ರಾಹಕರು, ಸೂಕ್ತ ದಾಖಲೆಗಳಿಲ್ಲದ ಭೂಮಿಗಳನ್ನು ಖರೀದಿಸಿದ್ದಾರೆ. ಈ ವಂಚನೆಯಿಂದ ಕೋಪಗೊಂಡ ಗ್ರಾಹಕರು, ಗ್ರಾಹಕರ ವೇದಿಕೆ ಮತ್ತು ಇಡಿಯಲ್ಲಿ ದೂರು ದಾಖಲಿಸಿದ್ದಾರೆ. ಇಡಿಯ ತನಿಖೆಯಿಂದ ತಿಳಿದುಬಂದಿರುವಂತೆ, ಕಂಪನಿಯು ಮಹೇಶ್ ಬಾಬುಗೆ ಜಾಹೀರಾತಿಗಾಗಿ 5.90 ಕೋಟಿ ರೂಪಾಯಿಗಳ ಸಂಭಾವನೆ ಪಾವತಿಸಿತ್ತು. ಈ ಹಿನ್ನೆಲೆಯಲ್ಲಿ, ಇಡಿಯು ಮಹೇಶ್ ಬಾಬುಗೆ ನೊಟೀಸ್ ಜಾರಿಗೊಳಿಸಿದೆ. ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಮಹೇಶ್ ಬಾಬು, ಮುಂದಿನ ದಿನಗಳಲ್ಲಿ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ಮಹೇಶ್ ಬಾಬು ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೋವಿಡ್ ಸಮಯದಲ್ಲಿ ಜಾಹೀರಾತುಗಳಿಂದ ಗಳಿಸಿದ ಹಣದಿಂದ ದೊಡ್ಡ ಆಸ್ತಿಯನ್ನು ಖರೀದಿಸಿ, ಮನೆ ಕಟ್ಟಿದ್ದಾಗಿ ಅವರು ಒಮ್ಮೆ ಹೇಳಿದ್ದರು. ಆದರೆ, ಈಗ ಒಂದು ಜಾಹೀರಾತಿನಿಂದಲೇ ಅವರಿಗೆ ವಿವಾದ ಎದುರಾಗಿದೆ. ಈ ಘಟನೆಯಿಂದ, ಅವರು ರಾಯಭಾರಿಯಾಗಿರುವ ಇತರ ಕಂಪನಿಗಳ ಬಗ್ಗೆಯೂ ಗ್ರಾಹಕರು ಎಚ್ಚರಿಕೆಯಿಂದಿರಬೇಕಾದ ಸ್ಥಿತಿ ಉಂಟಾಗಿದೆ.

Exit mobile version