ಸಂತ್ರಸ್ತೆ ನೀಡಿದ್ದ ದೂರಿನ ಬಗ್ಗೆ ವಿಚಾರಣೆಯಲ್ಲಿ ಮಡೆನೂರು ಮನು ಹೇಳಿದ್ದೇನು?

Untitled design 2025 05 27t115848.731

ಬೆಂಗಳೂರು: ಕಾಮಿಡಿ ಕಿಲಾಡಿ ಖ್ಯಾತಿಯ ನಟ ಮಡೆನೂರು ಮನು ವಿರುದ್ಧ ಇತ್ತೀಚೆಗೆ ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಕೇಳಿಬಂದಿತ್ತು. ಸಹ ನಟಿಯೊಬ್ಬರು ಈ ಆರೋಪವನ್ನು ಮಾಡಿದ್ದು, ಈ ಹಿನ್ನೆಲೆಯಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಮನು ಅವರನ್ನು ಬಂಧಿಸಿ, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಮನು ಕೆಲವು ಮಹತ್ವದ ವಿಷಯಗಳನ್ನು ಒಪ್ಪಿಕೊಂಡಿದ್ದಾರೆ, ಆದರೆ ಕೆಲವು ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಮನು ತಮ್ಮ ಹೇಳಿಕೆಯಲ್ಲಿ, ಸಂತ್ರಸ್ತೆಯೊಂದಿಗೆ ತಮಗೆ ಐದಾರು ವರ್ಷಗಳಿಂದ ಪರಿಚಯವಿದೆ ಎಂದು ತಿಳಿಸಿದ್ದಾರೆ. ಇಬ್ಬರೂ ಸಂಬಂಧದಲ್ಲಿದ್ದಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಮದುವೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನಾನು ಆಕೆಗೆ ತಾಳಿ ಕಟ್ಟಿಲ್ಲ. ಬೆಂಗಳೂರಿನಲ್ಲಿ ಮನೆ ಹುಡುಕಲು ಸಹಾಯ ಮಾಡಿದ್ದೆ. ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿರುವ ಕೆಲವು ಘಟನೆಗಳು ನಡೆದಿರುವುದು ನಿಜ, ಆದರೆ ಯಾವುದೇ ರೀತಿಯ ಬಲವಂತದ ಲೈಂಗಿಕ ದೌರ್ಜನ್ಯ ನಡೆಸಿಲ್ಲ,” ಎಂದು ಮನು ಪೊಲೀಸರಿಗೆ ತಿಳಿಸಿದ್ದಾರೆ.

ಅಲ್ಲದೆ, ಕಳೆದ ಮೇ 17ರಂದು ಬೆಂಗಳೂರಿನ ನಾಗರಭಾವಿಯಲ್ಲಿ ಸಂತ್ರಸ್ತೆಯನ್ನು ಭೇಟಿಯಾಗಿದ್ದು ಸತ್ಯ ಎಂದು ಮನು ಒಪ್ಪಿಕೊಂಡಿದ್ದಾರೆ. ಆದರೆ, ಆಕೆಯ ಮೇಲೆ ಯಾವುದೇ ರೀತಿಯ ಹಲ್ಲೆ ನಡೆಸಿಲ್ಲ ಅಥವಾ ಖಾಸಗಿ ವಿಡಿಯೋ ಚಿತ್ರೀಕರಿಸಿಲ್ಲ ಎಂದು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ತಮ್ಮ ಮದುವೆಯ ವಿಷಯವೂ ಸಂತ್ರಸ್ತೆಗೆ ಗೊತ್ತಿತ್ತು ಎಂದು ಮನು ತಿಳಿಸಿದ್ದಾರೆ. “ನನ್ನ ಕುಟುಂಬಸ್ಥರಿಗೂ ಆಕೆಯ ಪರಿಚಯವಿತ್ತು. ನಮ್ಮ ಫೋಟೋಗಳನ್ನು ಸಿನಿಮಾ ತಂಡಕ್ಕೆ ತೊಂದರೆಯಾಗದಂತೆ ಆಕೆಯೇ ನನ್ನ ಹೇಳಿಕೆಯ ವಿಡಿಯೋ ಚಿತ್ರೀಕರಿಸಿದ್ದಾಳೆ,” ಎಂದು ಮನು ಹೇಳಿಕೊಂಡಿದ್ದಾರೆ. ಸಿನಿಮಾ ನಿರ್ಮಾಪಕರಿಗೆ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಈ ವಿಡಿಯೋ ಮಾಡಲಾಗಿತ್ತು ಎಂದು ಅವರು ಹೇಳಿದ್ದಾರೆ.

ಪೊಲೀಸ್ ತನಿಖೆಯಲ್ಲಿ ಇದುವರೆಗೆ ಯಾವುದೇ ಅಶ್ಲೀಲ ವಿಡಿಯೋ ಸಿಕ್ಕಿಲ್ಲ. ಇಬ್ಬರ ವಾಟ್ಸ್‌ಆ್ಯಪ್ ಚಾಟ್‌ನಲ್ಲಿಯೂ ಯಾವುದೇ ಅಶ್ಲೀಲ ಫೋಟೋ ಅಥವಾ ವಿಡಿಯೋ ಪತ್ತೆಯಾಗಿಲ್ಲ. ಪೊಲೀಸರು ಈಗ ಮನು ಜೊತೆಗೆ ಸ್ಥಳ ಮಹಜರು ನಡೆಸಿದ್ದಾರೆ. ತನಿಖೆಯ ಭಾಗವಾಗಿ, ಮನು ಅವರನ್ನು ಪೊಲೀಸ್ ಕಸ್ಟಡಿಯಿಂದ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಗಿದೆ. ಒಂದು ವೇಳೆ ಮೊಬೈಲ್ ಡೇಟಾ ರಿಕವರಿಯಲ್ಲಿ ಯಾವುದೇ ಅಶ್ಲೀಲ ವಿಡಿಯೋ ಸಿಕ್ಕರೆ, ಮನು ಅವರನ್ನು ಬಾಡಿ ವಾರಂಟ್‌ನ ಮೂಲಕ ಮತ್ತೆ ವಿಚಾರಣೆಗೆ ಕರೆಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಂತ್ರಸ್ತೆಯ ಆರೋಪಗಳು ಮತ್ತು ಮನು ಅವರ ಹೇಳಿಕೆಗಳ ನಡುವಿನ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

Exit mobile version