ಹೌಸ್‌‌ಫುಲ್..ಹೌಸ್‌ಫುಲ್..ಲ್ಯಾಂಡ್‌ಲಾರ್ಡ್‌ ಸಕ್ಸಸ್‌ಫುಲ್

ಬದಲಾವಣೆಗೆ ಲ್ಯಾಂಡ್‌ಲಾರ್ಡ್‌ ಓಂಕಾರ.. ಪ್ರೇಕ್ಷಕರಿಂದ ಶ್ರೀಕಾರ

Untitled design (90)

ಲ್ಯಾಂಡ್‌ಲಾರ್ಡ್‌.. ಇದು ಬರೀ ಕನ್ನಡ ಚಿತ್ರರಂಗದ ಸಿನಿಮಾ ಮಾತ್ರವಲ್ಲ. ಇತಿಹಾಸದ ಪುಟಗಳು ಸೇರುತ್ತಿರೋ ಮೈಲಿಗಲ್ಲು ಚಿತ್ರ. ಅಣ್ಣಾವ್ರ ಸಾಮಾಜಿಕ ಚಿತ್ರಗಳ ರೀತಿ ಕ್ರಾಂತಿಯ ಕಿಡಿ ಹಚ್ಚಿರೋ ಸಿನಿಮಾ. ಮನರಂಜನೆ ಜೊತೆ ಮನೋವಿಕಾಸದ ಬೀಜ ಬಿತ್ತಿರೋ ಚಿತ್ರ. ಸಂವಿಧಾನದ ಮಹತ್ವ ಸಾರಿರುವ ದಂತಕಥೆ. ಉಳ್ಳವರು-ಇಲ್ಲದವರ ನಡುವಿನ ಸಂಘರ್ಷವೇ ಆದ್ರೂ ಸಮಾಜದ ಕೈಗನ್ನಡಿಯೂ ಹೌದು. ಟಾಕ್ ಆಫ್ ದಿ ಟೌನ್ ಆಗಿ ಎಲ್ಲೆಡೆ ಸಂಚಲನ ಮೂಡಿಸಿರೋ ಲ್ಯಾಂಡ್‌ಲಾರ್ಡ್‌ ಅಸಲಿ ಕಥೆ ಇಲ್ಲಿದೆ ನೋಡಿ.

ಈ ವರ್ಷದ ಮೊದಲ ಬಿಗ್ ಸ್ಟಾರ್ ಮೂವಿ ಲ್ಯಾಂಡ್‌ಲಾರ್ಡ್‌ ಆರಂಭದಲ್ಲೇ ಸ್ಯಾಂಡಲ್‌ವುಡ್‌ನ ಜೋಶ್ ಹೆಚ್ಚಿಸಿದೆ. ಇದು ಹೊಸ ವರ್ಷದ ಮೊದಲ ಗೆಲುವಿನ ಸಿಂಚನವೂ ಹೌದು. ಗಟ್ಟಿಯಾದ ಕಥೆ, ಪಾತ್ರಗಳಲ್ಲಿನ ಜೀವಂತಿಕೆ, ಸಾಮಾಜಿಕ ಕಳಕಳಿಯ ಅಂಶಗಳು, ಅದ್ಭುತ ಮೇಕಿಂಗ್.. ಹೀಗೆ ಎಲ್ಲಾ ಆ್ಯಂಗಲ್‌ನಿಂದ ಲ್ಯಾಂಡ್‌ಲಾರ್ಡ್‌ ಚಿತ್ರ ಅದ್ಭುತ, ಅಮೋಘ, ಅದ್ವಿತೀಯ ಅನಿಸಿದೆ.

ಸಿನಿಮಾಗಳ ಮೂಲ ಉದ್ದೇಶ ಮನರಂಜನೆಯೇ ಆದ್ರೂ, ಮನೋವಿಕಾಸದ ಬೀಜ ಬಿತ್ತುವ ಮುಖೇನ ಸಾಮಾಜಿಕ ಬದ್ಧತೆ ಬೆರೆದಿದೆ ಲ್ಯಾಂಡ್‌ಲಾರ್ಡ್‌. ಯೆಸ್.. ಇದು ಬರೀ ನಮ್ಮ ಸಿನಿದುನಿಯಾದ ಗೆಲುವಲ್ಲ. ಸಂವಿಧಾನದ ಅಸಲಿ ಗೆಲುವು. ಸಮಾನತೆ, ಸಾಮಾಜಿಕ ನ್ಯಾಯ, ಧರ್ಮ, ಮೂಲಭೂತ ಹಕ್ಕುಗಳನ್ನ ಪ್ರತಿಪಾದಿಸೋ ಭಾರತದ ಸಂವಿಧಾನವನ್ನ ಕೇಂದ್ರವಾಗಿಟ್ಟುಕೊಂಡು ಈ ಸಿನಿಮಾ ತಯಾರಾಗಿದೆ.

ದಬ್ಬಾಳಿಕೆ, ಕ್ರಾಂತಿ, ಅಕ್ಷರ ಕ್ರಾಂತಿ ಹೀಗೆ ಮೂರು ಹಂತಗಳಲ್ಲಿ ಲ್ಯಾಂಡ್‌ಲಾರ್ಡ್‌ ಸಿನಿಮಾ ವ್ಹಾವ್ ಫೀಲ್ ತರಿಸಿದೆ. ನೋಡೋಕೆ 80ರ ದಶಕದ ಸಿನಿಮಾ ಅನಿಸಿದ್ರೂ, ಇಂದಿಗೂ ಆ ಅನಿಷ್ಠ ಪದ್ಧತಿಗಳು ನಮ್ಮ ಪ್ರಸ್ತುತ ಸಮಾಜದಲ್ಲಿ ಚಾಲ್ತಿಯಲ್ಲಿರೋದು ದುರಂತವೇ ಸರಿ. ಹಾಗಾಗಿ ನಿರ್ದೇಶಕ ಜಡೇಶ್ ಕೆ ಹಂಪಿ ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳನ್ನ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ತರುವಲ್ಲಿ ಯಶಸ್ವಿ ಆಗಿದ್ದಾರೆ.

ನೋಡೋಕೆ ಇದು ಸಿನಿಮಾ. ಆದ್ರೆ ಇಂದಿಗೂ ಅದೇ ರೀತಿ ಶೋಷಣೆಗೆ, ದಬ್ಬಾಳಿಕೆಗೆ ಒಳಗಾಗ್ತಿರೋ ಮಂದಿಗೆ ಇದೊಂದು ಬಗೆಯ ಅಸ್ತ್ರ ಅಂದ್ರೆ ತಪ್ಪಾಗಲ್ಲ. ಅಸಮಾನತೆಯಲ್ಲಿ ನೊಂದು, ಬೆಂದು, ಒದ್ದಾಡ್ತಿರೋ ಜೀವಗಳಿಗೆ ಇದು ನಿಜಕ್ಕೂ ಧೈರ್ಯದ ವೆಪನ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಜಾತಿ ಪದ್ಧತಿ, ಅಸ್ಪೃಶ್ಯತೆ, ಅಸಮಾನತೆ, ಶೋಷಣೆ, ದಬ್ಬಾಳಿಕೆ, ಊರ ಬಸವಿ ಪದ್ಧತಿ, ದೇವದಾಸಿ ಪದ್ಧತಿ, ಊರಿನ ಮುಖ್ಯಸ್ಥರೇ ನಡೆಸೋ ಪಂಚಾಯ್ತಿ ವ್ಯವಸ್ಥೆ, ವಿಧವೆ ಶಾಸ್ತ್ರ, ಮಡಿ-ಮೈಲಿಗೆ, ಜೀತ ಪದ್ಧತಿ, ಒಡೆದು ಆಳುವ ನೀತಿ.. ಹೀಗೆ ಒಂದಲ್ಲ ಎರಡಲ್ಲ ಸಾಲು ಸಾಲು ಸಾಮಾಜಿಕ ಪಿಡುಗುಗಳನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದೆ ಲ್ಯಾಂಡ್‌ಲಾರ್ಡ್‌ ಸಿನಿಮಾ. ಒಬ್ಬ ಕಮರ್ಷಿಯಲ್ ಹೀರೋ ಆಗಿದ್ದುಕೊಂಡು ನಟ ದುನಿಯಾ ವಿಜಯ್ ರಾಚಯ್ಯನ ಪಾತ್ರದ ಮೂಲಕ ಇಂಥದ್ದೊಂದು ಪ್ರಯೋಗವನ್ನ ಬಿಗ್‌‌ಸ್ಕ್ರೀನ್‌ಗೆ ತಂದಿರೋದು ನಿಜಕ್ಕೂ ಮೆಚ್ಚಲೇಬೇಕು.

ಅಂದಹಾಗೆ ತಮಿಳಿನ ಧನುಷ್ ನಟನೆಯ ಅಸುರನ್ ಹಾಗೂ ಸೂರ್ಯ ನಟನೆಯ ಜೈ ಭೀಮ್ ಚಿತ್ರಗಳು ಸಿಕ್ಕಾಪಟ್ಟೆ ಸಂಚಲನ ಮೂಡಿಸಿದ್ದವು. ಸದ್ಯ ಅದೇ ಜಾನರ್‌ಗೆ ಸೇರುವ ಅಂತಹದ್ದೇ ಕ್ರಾಂತಿಕ ಕಿಡಿ ಹೊತ್ತಿಸೋ ಚಿತ್ರವಾಗಿ ಲ್ಯಾಂಡ್‌ಲಾರ್ಡ್‌ ಗಮನ ಸೆಳೆದಿದೆ. ಸಮಾನತೆಗಾಗಿ ಅಂಬೇಡ್ಕರ್ ಹೋರಾಟ ಎಂಥದ್ದು ಅನ್ನೋದಕ್ಕೆ ಸಾಕ್ಷಿ ಆಗಿತ್ತು. ಇದೀಗ ಆ ಸಾಂವಿಧಾನಿಕ ಮೌಲ್ಯಗಳನ್ನ ಸಾರುವ ಚಿತ್ರದ ಮೂಲಕ ಅವ್ರ ಅನುಯಾಯಿ ದುನಿಯಾ ವಿಜಯ್ ಸಾಗಿರುವುದು ಗಮನಾರ್ಹ ವಿಷಯ.

ಬೆಳಗಾವಿ ಹಾಗೂ ಸವದತ್ತಿ ಸುತ್ತ ಮುತ್ತಲ ಪ್ರದೇಶಗಳಲ್ಲಿ ಇಂದಿಗೂ ದೇವದಾಸಿ ಪದ್ಧತಿ ಜೀವಂತವಾಗಿದೆ ಅಂದ್ರೆ ನೀವು ಶಾಕ್ ಆಗ್ತೀರಾ. ಅದೆಷ್ಟೂ ಗ್ರಾಮಗಳಲ್ಲಿ ದಲಿತರಿಗೆ ಇಂದಿಗೂ ದೇವಾಲಯಗಳಿಗೆ ಪ್ರವೇಶವೇ ಇಲ್ಲ. ಜಮೀನ್ದಾರರು ಅಥ್ವಾ ಉಳ್ಳವರದ್ದೇ ಅಲ್ಲಿ ದರ್ಬಾರು. ಸದ್ಯ ಲ್ಯಾಂಡ್‌ಲಾರ್ಡ್‌ನಲ್ಲಿ ಸಣ್ಣ ದಣಿಗಳಾಗಿ ಜಮೀನ್ದಾರನ ಗತ್ತು, ಗೈರತ್ತು ತೋರಿದ್ದಾರೆ ರಾಜ್ ಬಿ ಶೆಟ್ಟಿ.

ಊರ ಬಸವಿ ಅಥ್ವಾ ದೇವದಾಸಿ ಪದ್ಮ ಪಾತ್ರದಲ್ಲಿ ಗಾಳಿಪಟ ಭಾವನಾ ಹೃದಯದಲ್ಲಿ ಉಳಿಯುವಂತಹ ಪಾತ್ರ ಮಾಡಿದ್ದಾರೆ. ನೋಡೋಕೆ ಇದು ಮನರಂಜನೆ ಅನಿಸಿದ್ರೂ, ನೋಡುಗರ ಹೃಯದ ತಟ್ಟಲಿದೆ. ಮನಸ್ಸು ಮುಟ್ಟುತ್ತಿದೆ. ಇಂತಹ ಪದ್ಧತಿಗಳನ್ನ ಹೋಗಲಾಡಿಸೋ ನಿಟ್ಟಿನಲ್ಲಿ ಈ ಚಿತ್ರ ಹೊಸ ಆಯಾಮ ಕೊಡೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಕಾಲಿಗೆ ಹಾಕಿಕೊಳ್ಳುವ ಚಪ್ಪಲಿಗಳನ್ನ ಕೊರಳಿಗೆ ಹಾರ ಮಾಡಿ ಹಾಕಿಕೊಂಡ್ರೆ ಹೇಗಿರುತ್ತೆ ಹೇಳಿ..? ಸದ್ಯ ಲ್ಯಾಂಡ್‌ಲಾರ್ಡ್‌ನಲ್ಲಿ ರಾಚಯ್ಯ ಪಾತ್ರಧಾರಿ ವಿಜಯ್, ಊರ ಒಡೆಯ ಹಾಗೂ ಅವ್ರ ಇಡೀ ಕುಟುಂಬದ ಚಪ್ಪಳಿಗಳನ್ನ ಕಣ್ಣಿಗೆ ಒತ್ತಿಕೊಂಡು, ನಂತ್ರ ಕೊರಳಿಗೆ ಹೂವಿನ ಹಾರದಂತೆ ಹಾಕಿಕೊಳ್ಳೋ ದೃಶ್ಯ ನಿಜಕ್ಕೂ ಅಮಾನವೀಯತೆಯನ್ನ ಎತ್ತಿ ತೋರಿಸುತ್ತೆ. ಇಂತಹ ಪಾತ್ರ ಅವ್ರು ಮಾಡಿದ್ದಾರೆ ಅಂದ್ರೆ ಅದು ಮತ್ತೆ ಮರುಕಳಿಸದಿರಲಿ ಅನ್ನೋದು ಸಿನಿಮಾದ ಉದ್ದೇಶವಾಗಿದೆ.

ಒಂದ್ಕಡೆ ಅಸಹಾಯಕತೆಯನ್ನ ಸಹಾಯಕತೆಯಾಗಿ ಅಥ್ವಾ ಸಂರಕ್ಷಣೆಯ ಅಸ್ತ್ರವಾಗಿ ಬಳಸೋಕೆ ಮಗಳನ್ನ ಪೊಲೀಸ್ ಕಾನ್ಸ್‌ಟೇಬಲ್ ಮಾಡ್ತಾರೆ ನಾಯಕನಟ. ರಿತನ್ಯ ಎರಡು ಶೇಡ್‌‌ಗಳಲ್ಲಿ ತಮ್ಮ ನಟನಾ ಗೈರತ್ತು ತೋರಿರುವುದು ವಿಶೇಷ. ಒಂದ್ಕಡೆ ಖಾಕಿ ಖದರ್‌ ಹಾಗೂ ಅದಕ್ಕಿರೋ ಪವರ್‌.. ಮತ್ತೊಂದ್ಕಡೆ ಅದೆಲ್ಲಾ ಇದ್ರೂ ಸಹ, ಶೋಷಣೆಯನ್ನ ತಡೆಯಲಾಗದ ಅಸಹಾಯಕತೆ. ಎರಡನ್ನೂ ಸಮರ್ಪಕವಾಗಿ ಬ್ಯಾಲೆನ್ಸ್ ಮಾಡಿದ್ದಾರೆ ರಿತನ್ಯ ವಿಜಯ್ ಕುಮಾರ್.

ಕೂಲಿ ಚಿತ್ರದಲ್ಲಿ ಕಿಲ್ಲರ್ ಕಲ್ಯಾಣಿಯಾಗಿ ಕಮಾಲ್ ಮಾಡಿರೋ ರಚಿತಾ, ತನ್ನ ಸಿನಿ ಕರಿಯರ್‌‌ನಲ್ಲಿ ಹೊಸ ಪರ್ವ ಆರಂಭಿಸಿದ್ದಾರೆ. ಗ್ರೇ ಹೇರ್‌ನಲ್ಲಿ ನಿಂಗವ್ವ ಅನ್ನೋ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿರೋ ರಚ್ಚು, ಅಕ್ಷರಶಃ ರಾಚಯ್ಯನ ಹಿಂದಿನ ಶಕ್ತಿಯಾಗಿ ಸಿನಿಮಾದ ಸ್ಟ್ರೆಂಥ್ ಹೆಚ್ಚಿಸಿದ್ದಾರೆ. ಅವ್ರ ನಟನೆ ನೋಡಿದ್ರೆ ಗೊತ್ತಾಗುತ್ತೆ ಯಾಕೆ ರಚಿತಾರನ್ನ ಲೇಡಿ ಸೂಪರ್ ಸ್ಟಾರ್ ಅಂತ ಕರೆಯುತ್ತಾರೆ ಅನ್ನೋದು. ಇದು ರಚ್ಚು ನಟನಾ ಪವರ್‌ಗಿರೋ ವೈಶಿಷ್ಟ್ಯತೆ ಅಂತಲೂ ಕರೆಯಬಹುದು.

ಇದೊಂದು ರೆವೆಲ್ಯೂಷನ್.. ನೋಡಿದ್ರೆ ಸಿಗುತ್ತೆ ಸಲ್ಯೂಷನ್

ಬದಲಾವಣೆಗೆ ಲ್ಯಾಂಡ್‌ಲಾರ್ಡ್‌ ಓಂಕಾರ ಹಾಡಿದ್ದು, ಪ್ರೇಕ್ಷಕರಿಂದ ಎಲ್ಲೆಡೆ ಶ್ರೀಕಾರ ಸಿಗ್ತಿದೆ. ಅದೇ ಕಾರಣದಿಂದ ರಾಜ್ಯದ ಮೂಲೆ ಮೂಲೆಗಳಲ್ಲಿ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಮೌತ್ ಪಬ್ಲಿಸಿಟಿಯಿಂದ ನೋಡಿದವರೆಲ್ಲಾ ಸಿನಿಮಾನ ಕೊಂಡಾಡುವಂತೆ ಆಗ್ತಿದೆ. ಇದೊಂದು ರೆವೆಲ್ಯೂಷನ್‌ ಸಿನಿಮಾ ಆದರೂ ಸಹ, ಸಾಕಷ್ಟು ಸಮಸ್ಯೆಗಳಿಗೆ ಸಲ್ಯೂಷನ್ ಕೊಡೋ ದಂತಕಥೆಯ ಸಿನಿಮಾ ಕೂಡ ಹೌದು ಅನ್ನೋದನ್ನ ಮರೆಯೋ ಹಾಗಿಲ್ಲ.

ದುನಿಯಾದಿಂದ ಸಿನಿ ಜಗತ್ತಿಗೆ ಹೀರೋ ಆಗಿ ಬಂದ ವಿಜಯ್‌ ಕುಮಾರ್, ಈ ಲ್ಯಾಂಡ್‌ಲಾರ್ಡ್‌ ದುನಿಯಾದಿಂದ ಮತ್ತೊಂದು ಮಹತ್ವದ ಹಂತ ತಲುಪಿದ್ದಾರೆ. ಇಷ್ಟು ದಿನ ಯೂತ್‌ಗೆ ಮಾತ್ರ ಸೀಮಿತ ಆಗಿದ್ದ ವಿಜಯ್ ಅವರು ಇದೀಗ ಫ್ಯಾಮಿಲಿ ಆಡಿಯೆನ್ಸ್ ಸ್ವತ್ತು ಆಗಿದ್ದಾರೆ. ಅಷ್ಟೇ ಯಾಕೆ ಕನ್ನಡ ಚಿತ್ರರಂಗಕ್ಕೆ ಅವ್ರಿಂದ ಈ ಬಗೆಯ ಮತ್ತಷ್ಟು ಕೊಡುಗೆಗಳು ಆಗಬೇಕಿದೆ ಅನ್ನೋದಕ್ಕೆ ಮುನ್ನುಡಿಯ ಮಂತ್ರ ಕೂಡ ಜಪಿಸಿದಂತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version