ದಯವಿಟ್ಟು ಇದನ್ನು ಇಲ್ಲಿಯೇ ನಿಲ್ಲಿಸಿ: ಕೈಮುಗಿದು ಮನವಿ ಮಾಡಿದ ನಟಿ ಕೃಷಿ ತಾಪಂಡ

Untitled design 2026 06 29T075457.929

ನಟಿ ಕೃಷಿ ತಾಪಂಡ (Krishi Tapanda) ಅವರ ಆಪ್ತ ಸ್ನೇಹಿತ ವೈಶಾಕ್ ಅವರ ಆತ್ಮಹತ್ಯೆ ಬೆನ್ನಲ್ಲೇ, ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಅನಗತ್ಯ ಊಹಾಪೋಹಗಳು ಹರಿದಾಡುತ್ತಿದ್ದವು. ಕೆಲವು ದಿನಗಳ ಬಳಿಕ ಇದೀಗ ಕೃಷಿ ತಾಪಂಡ ಅವರು ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಸರಣಿ ಪೋಸ್ಟ್ ಹಂಚಿಕೊಂಡಿದ್ದು, ಈ ಮೂಲಕ ಮೌನ ಮುರಿದಿದ್ದಾರೆ. ತಮ್ಮ ಮನದಾಳದ ನೋವು, ಆಪ್ತ ಸ್ನೇಹಿತನ ನೆನಪು ಮತ್ತು ಮಾಧ್ಯಮಗಳ ಅತಿರೇಕದ ವರ್ತನೆಯ ಬಗ್ಗೆ ಅವರು ಅತ್ಯಂತ ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ.

ಮೌನ ಮುರಿದ ಕೃಷಿ

ಅವರು ಹಂಚಿಕೊಂಡ ಪೋಸ್ಟ್‌‌ನಲ್ಲಿ “ಇಂತಹ ಒಂದು ಬರಹವನ್ನು ಬರೆಯಬೇಕಾಗುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ನನಗೆ ಅತ್ಯಂತ ಆಪ್ತವಾಗಿದ್ದ, ಯಾವಾಗಲೂ ನನ್ನ ಬೆನ್ನಿಗೆ ನಿಂತಿದ್ದ ವ್ಯಕ್ತಿಯನ್ನು ಕಳೆದುಕೊಂಡಿರುವ ನೋವಿನಿಂದ ಇನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ. ಈ ದುಃಖವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ,” ಎಂದು ಅವರು ಭಾವುಕರಾಗಿ ಬರೆದುಕೊಂಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ಕೆಲ ಮಾಧ್ಯಮಗಳು ಗೌರವಯುತವಾಗಿ ವರ್ತಿಸಿದರೆ, ಇನ್ನೂ ಕೆಲವು ಕೇವಲ ಪ್ರತಿಕ್ರಿಯೆ ಪಡೆಯುವ ಉದ್ದೇಶದಿಂದ ನಿರಂತರವಾಗಿ ಸಂಪರ್ಕಿಸುತ್ತಿವೆ ಎಂದು ಆರೋಪಿಸಿದ್ದಾರೆ.

“ನೀವು ಹೇಗಿದ್ದೀರಾ ಎಂದು ಕೇಳುವ ಬದಲು, ನಿಮ್ಮ ರಿಯಾಕ್ಷನ್ ಏನು ಎಂದು ಮಾತ್ರ ಕೇಳುತ್ತಿದ್ದಾರೆ. ಒಂದು ಕುಟುಂಬ ತನ್ನ ಮಗನನ್ನು ಕಳೆದುಕೊಂಡ ನೋವಿನಲ್ಲಿ ಇದೆ. ಸ್ನೇಹಿತರು ತಮ್ಮ ಆತ್ಮೀಯರನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಊಹಾಪೋಹಗಳು, ಸುಳ್ಳು ಕಥೆಗಳು ಹಾಗೂ ಅನಗತ್ಯ ಪ್ರಶ್ನೆಗಳು ಉಳಿದವರ ನೋವನ್ನು ಮತ್ತಷ್ಟು ಹೆಚ್ಚಿಸುತ್ತವೆ,” ಎಂದು ಕೃಷಿ ತಿಳಿಸಿದ್ದಾರೆ.

ಅವರು ಸಾರ್ವಜನಿಕರು ಹಾಗೂ ಮಾಧ್ಯಮಗಳಿಗೆ ವಿಶೇಷ ಮನವಿ ಮಾಡುತ್ತಾ, ವೈಶಾಕ್ ಸಾವಿನ ಕುರಿತು ನಡೆಯುತ್ತಿರುವ ಊಹಾಪೋಹಗಳಿಗೆ ಅಂತ್ಯ ಹಾಡುವಂತೆ ವಿನಂತಿಸಿದ್ದಾರೆ. “ನಮಗೆ ಶಾಂತಿಯಿಂದ ದುಃಖಿಸಲು ಅವಕಾಶ ನೀಡಿ. ಪ್ರತಿಯೊಬ್ಬರ ಜೀವನಕ್ಕೂ ಗೌರವ ಬೇಕು. ದಯವಿಟ್ಟು ಈ ಚರ್ಚೆಗಳನ್ನು ಇಲ್ಲಿಗೇ ನಿಲ್ಲಿಸಿ,” ಎಂದು ಕೈಮುಗಿದು ಕೇಳಿಕೊಂಡಿದ್ದಾರೆ.

ಈ ಕಷ್ಟದ ಸಮಯದಲ್ಲಿ ಸಂದೇಶಗಳು, ಕರೆಗಳು ಹಾಗೂ ಪ್ರಾರ್ಥನೆಗಳ ಮೂಲಕ ಬೆಂಬಲ ನೀಡಿದ ಎಲ್ಲರಿಗೂ ಕೃಷಿ ಕೃತಜ್ಞತೆ ಸಲ್ಲಿಸಿದ್ದಾರೆ. “ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಉತ್ತರಿಸುವಷ್ಟು ಮಾನಸಿಕ ಶಕ್ತಿ ಸದ್ಯಕ್ಕೆ ನನ್ನಲ್ಲಿ ಇಲ್ಲ. ಆದರೆ ನಿಮ್ಮ ಪ್ರೀತಿ, ಕಾಳಜಿ ಮತ್ತು ಬೆಂಬಲಕ್ಕೆ ನಾನು ಚಿರಋಣಿ,” ಎಂದು ಹೇಳಿದ್ದಾರೆ.

ತಮ್ಮ ಕೊನೆಯ ಸಂದೇಶದಲ್ಲಿ ಸಮಾಜಕ್ಕೆ ಅರ್ಥಪೂರ್ಣ ಸಂದೇಶ ನೀಡಿರುವ ಅವರು, “ಯಾರಿಗಾದರೂ ಬದುಕಲು ಕಾರಣ ನೀಡಲು ಸಾಧ್ಯವಾಗದಿದ್ದರೆ, ಕನಿಷ್ಠ ಅವರು ಭರವಸೆ ಕಳೆದುಕೊಳ್ಳುವಂತೆ ಮಾಡಬೇಡಿ. ದಯೆ, ಕರುಣೆ ಮತ್ತು ಮಾನವೀಯತೆಯನ್ನು ಆಯ್ಕೆ ಮಾಡಿಕೊಳ್ಳಿ. ದಯವಿಟ್ಟು ಇದನ್ನು ಇಲ್ಲಿಯೇ ನಿಲ್ಲಿಸಿ,” ಎಂದು ಮನವಿ ಮಾಡಿದ್ದಾರೆ.

Exit mobile version