ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಜೀ ಮ್ಯೂಜಿಕ್ ಬಿಡುಗಡೆ ಮಾಡಿದ “ಕೊರಗಜ್ಜ” ಚಿತ್ರದ “ಗುಳಿಗಾ… ಗುಳಿಗಾ…” ಹಾಡು ಈಗ ದೇಶದೆಲ್ಲೆಡೆ ಸಂಚಲನ ಮೂಡಿಸಿದೆ. ಜಾವೇದ್ ಅಲಿ ಮತ್ತು ಸುಧೀರ್ ಅತ್ತಾವರ್ ಧ್ವನಿಯಲ್ಲಿ ಮೂಡಿಬಂದ ಈ ಹಾಡಿಗೆ ಗೋಪಿ ಸುಂದರ್ ಸಂಗೀತವಿದ್ದರೆ, ಸುಧೀರ್ ಅತ್ತಾವರ್ ಸಾಹಿತ್ಯವನ್ನು ರಚಿಸಿದ್ದರು. ಆದರೆ ಈ ಹಾಡಿನ ಜೊತೆಗೇ ಒಂದು ದೊಡ್ಡ ವಿವಾದವೂ ಎದ್ದಿದೆ. ಭಯಾನಕ ಉಗ್ರ ರೂಪಕ್ಕೆ ಹೆಸರುವಾಸಿಯಾದ ಗುಳಿಗ ದೈವಕ್ಕೆ ಈ ಹಾಡು ಅಪಚಾರವೇ? ಕ್ರೋಧ ತಂದಿದೆಯೇ? ಎಂಬ ಸಂಶಯ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಗೊಂದಲಕ್ಕೆ ಸ್ಪಷ್ಟ ಉತ್ತರ ಬೇಕೆಂದು ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್ ಅವರು ಕೇರಳದ ತ್ರಿಶೂರಿನಲ್ಲಿ ನೆಲೆಸಿರುವ ಮಂಗಳೂರು ಮೂಲದ ಪ್ರಸಿದ್ಧ ಜ್ಯೋತಿಷಿ ವಿಧ್ವಾಂಸ ವರುಣ್ ಭಟ್ ಅವರ ಬಳಿ ಪ್ರಶ್ನಾಷ್ಟಕ (ಪ್ರಶ್ನೆ ಜ್ಯೋತಿಷ್ಯ) ಮಾಡಿಸಿದರು.
ವರುಣ್ ಭಟ್ ಅವರು ಆಳವಾದ ಚಿಂತನ-ಮಂತನ ನಡೆಸಿದ್ದು, “ವೃಶ್ಚಿಕ ರಾಶಿಯಲ್ಲಿ ಗುರು ಒಂಭತ್ತನೇ ಮನೆಯಲ್ಲಿದ್ದು, ಐದನೇ ಮನೆಯಲ್ಲಿ ಗುಳಿಗ ಮತ್ತು ಶನಿ ಸ್ಥಾನ ಪಡೆದಿದೆ. ಇದರಿಂದ ಗುಳಿಗ ದೈವಕ್ಕೆ ಸಂಪೂರ್ಣ ತೃಪ್ತಿ, ಅಪಾರ ಸಂತೋಷವಿದೆ. ಕೊರಗಜ್ಜ ದೈವಕ್ಕೂ ತುಂಬಾ ಖುಷಿಯಿದೆ. ಚಿತ್ರಕ್ಕೆ ದೈವದ ಪೂರ್ಣ ಆಶೀರ್ವಾದವಿದೆ.”ಎಂಬ ವಿಚಾರ ತಿಳಿದು ಬಂತು.
ಗುಳಿಗಾ ..ಗುಳಿಗಾ ಹಾಡಿನ ಬಗ್ಗೆ ಕಾಮೆಂಟ್
ಸೋಷಿಯಲ್ ಮೇಡಿಯಾದಲ್ಲಿ ಪರ-ವಿರೋಧ ಚರ್ಚೆ ಕೂಡಾ ಜೋರಾಗಿ ಸಾಗುತ್ತಿದೆ. ಇನ್ನು ಕೆಲವು ವಿಕ್ರತ ಮನಸ್ಥಿತಿಯವರಂತೂ ನಿರ್ದೇಶಕರಿಗೆ ಸೇರಿ ಚಿತ್ರತಂಡಕ್ಕೆ ಉರಿ ಶಾಪಹಾಕುವ ಕಮೆಂಟ್ ಗಳನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಗುಳಿಗ ದೈವವೇ ರಕ್ತ ಕಾರಿ ಸಾಯಿಸುತ್ತದೆ ಎಂಬ ಹಲವು ವಿಕೃತ ಮನಸ್ಸಿನಿಂದ, ಮತ್ಸರದಿಂದ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ.
ಜ್ಯೋತಿಷ್ಯದಲ್ಲಿ ಗುಳಿಗನಿಗೆ ತ್ರಪ್ತಿ ಇರುವ ವಿಚಾರ ಕೇಳಿ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಹಾಗೂ ಸಕ್ಸಸ್ ಫಿಲ್ಮ್ಸ್ ನ ವಿದ್ಯಾಧರ್ ಶೆಟ್ಟಿ ಹರ್ಷಗೊಂಡಿದ್ದಾರೆ. ಜನರು ಅನಗತ್ಯವಾದ ಕೆಟ್ಟ ಕಮೆಂಟ್ ಹಾಕಿ ಕಿರಿ ಕಿರಿ ಮಾಡದೆ, ಚಿತ್ರದ ಯಶಸ್ಸಿಗೆ ಸಹಕರಿಸಬೇಕೆಂದು ಕೂಡಾ ನಿರ್ಮಾಪಕರು ಮನವಿ ಮಾಡಿರುತ್ತಾರೆ. ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ ಅಡಿಯ , ಬಹುನಿರೀಕ್ಷಿತ ಪ್ಯಾನ್ ಇಂಡಿಯಾ “ಕೊರಗಜ್ಜ” ಚಿತ್ರ ಜನವರಿ ಬಿಡುಗಡೆಗೊಳ್ಳುವ ನಿಟ್ಟಿನಲ್ಲಿ ಪ್ರಮೋಷನ್ ಕೆಲಸ ಭರದಿಂದ ಸಾಗುತ್ತಿದೆ.
