‘ಕೊರಗಜ್ಜ’ ಚಿತ್ರಕ್ಕೆ ಎಐ ಮ್ಯಾಜಿಕ್: ಶ್ರೇಯಾ ಘೋಷಾಲ್ ಹಾಡಿಗೆ ಹೊಸ ಲುಕ್!

Untitled design (10)

ಬೆಂಗಳೂರು: ದೈವಿಕ ಹಿನ್ನೆಲೆಯ ಕಥಾಹಂದರ ಹೊಂದಿರುವ ಬಹುನಿರೀಕ್ಷಿತ “ಕೊರಗಜ್ಜ” ಸಿನಿಮಾದ ಬಗ್ಗೆ ಚಿತ್ರಪ್ರೇಮಿಗಳಲ್ಲಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚುತ್ತಿದೆ. ವಿಶ್ವವಿಖ್ಯಾತ ಫುಟ್ ಬಾಲ್ ತಾರೆ ಲಿಯೊನಲ್ ಮೆಸ್ಸಿ ಅವರ ಭಾರತ ಭೇಟಿಯ ಸಂದರ್ಭದಲ್ಲಿ ವೈರಲ್ ಆಗಿದ್ದ ‘ಮೈದಾನಂ ಮೀದಾ…’ ಎನ್ನುವ ಎಐ (AI) ಹಾಡನ್ನು ಸೃಷ್ಟಿಸಿದ ಅದೇ ಕ್ರಿಯೇಟಿವ್ ತಂಡ ಈಗ “ಕೊರಗಜ್ಜ” ಚಿತ್ರದ ಹಾಡಿಗೂ ಕೈಜೋಡಿಸಿ ಕುತೂಹಲಕ್ಕೆ ಹೆಚ್ಚಿಸಿದೆ.

ಸುಧೀರ್ ಅತ್ತಾವರ್ ನಿರ್ದೇಶನದ ಈ ಚಿತ್ರದ ಎರಡನೆಯ ಹಾಡು ಬಿಡುಗಡೆಗೆ ಸಜ್ಜಾಗಿದ್ದು, ಇದನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನ ಬಳಸಿ ವಿನೂತನವಾಗಿ ವಿನ್ಯಾಸಗೊಳಿಸಲಾಗಿದೆ. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಈ ಹಾಡಿಗೆ ಅದ್ಭುತವಾಗಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ವಿಶೇಷವೆಂದರೆ, ಗಾಯಕಿ ಶ್ರೇಯಾ ಘೋಷಾಲ್ ಅವರು ಹಾಡಿನ ಟ್ರ್ಯಾಕ್ ಕೇಳಿದ ತಕ್ಷಣವೇ ಹಾಡಲು ಒಪ್ಪಿಕೊಂಡಿದ್ದಾರೆ. ಸುಧೀರ್ ಅತ್ತಾವರ್ ಬರೆದಿರುವ “ಗಾಳಿ ಗಂಧ… ತೀಡಿ ತಂದ…” ಎಂಬ ಸಾಹಿತ್ಯಕ್ಕೆ ಶ್ರೇಯಾ ಘೋಷಾಲ್ ಮತ್ತು ಅರ್ಮನ್ ಮಲಿಕ್ ಅವರ ಮಧುರ ಧ್ವನಿ ಹೊಸ ಮೆರುಗು ನೀಡಿದೆ.

ಇತ್ತೀಚೆಗಷ್ಟೇ ಹಾಡಿನ ಸಾಹಿತ್ಯ ಬಿಡುಗಡೆ ಮಾಡಿದ್ದ ಚಿತ್ರತಂಡ, ಇದೀಗ ಹಾಡಿನಲ್ಲಿ ಬರುವ ಪ್ರೇಮಿಗಳ ಸುಂದರವಾದ ಫೋಟೋಗಳನ್ನು ಹೊರಹಾಕಿದೆ. ಈ ಫೋಟೋಗಳು ಸಿನಿಮಾದಲ್ಲಿ ಬಲಿಷ್ಠ ಪ್ರೇಮಕಥೆಯೂ ಇರುವುದನ್ನು ಸೂಚಿಸುತ್ತಿವೆ. ಸಾಮಾನ್ಯವಾಗಿ ಕೊರಗಜ್ಜ ದೈವದ ಸಿನಿಮಾದಲ್ಲಿ ಪ್ರಣಯದ ಸನ್ನಿವೇಶಗಳಿವೆಯೇ ಎಂದು ಕೆಲವರು ಪ್ರಶ್ನಿಸಬಹುದು, ಆದರೆ ನಿರ್ದೇಶಕ ಸುಧೀರ್ ಅತ್ತಾವರ್ ಈ ಚಿತ್ರಕ್ಕೆ ವಿಭಿನ್ನ ಆಯಾಮ ನೀಡಿದ್ದಾರೆ ಎನ್ನಲಾಗುತ್ತಿದೆ.

ತ್ರಿವಿಕ್ರಮ ಸಿನಿಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ವಿದ್ಯಾಧರ್ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತಿದ್ದಾರೆ. ಅತ್ಯಾಧುನಿಕ ವಾದ್ಯವೃಂದ ಮತ್ತು ವಿಭಿನ್ನ ಸ್ಟ್ರಿಂಗ್ಸ್ ಬಳಸಿ ಈ ಹಾಡನ್ನು ಸಿದ್ಧಪಡಿಸಲಾಗಿದೆ. ಎಐ ತಂತ್ರಜ್ಞಾನದ ಬಳಕೆ ಈ ಹಾಡನ್ನು ಅಂತರಾಷ್ಟ್ರೀಯ ಮಟ್ಟದ ಗುಣಮಟ್ಟಕ್ಕೆ ಕೊಂಡೊಯ್ಯಲಿದೆ ಎಂದು ಅಭಿಮಾನಿಗಳು ಹಾಗೂ ಸಿನಿ ಪ್ರೇಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.

ಸಿನಿಮಾ ಬಿಡುಗಡೆಗೊಂಡ ನಂತರವಷ್ಟೇ ಪ್ರೇಕ್ಷಕರ ಎಲ್ಲಾ ಕುತೂಹಲಗಳಿಗೆ ಉತ್ತರ ಸಿಗಲಿದೆ. ಅಲ್ಲಿಯವರೆಗೆ ಈ ರೀತಿಯ ಹೊಸ ಅಪ್‌ಡೇಟ್‌ಗಳು ಚಿತ್ರದ ಮೇಲಿನ ಹೈಪ್ ಅನ್ನು ಇನ್ನಷ್ಟು ಹೆಚ್ಚಿಸಲಿವೆ.

Exit mobile version