ದರ್ಶನ್‌ಗೆ ನಾನು ಒಳ್ಳೆಯದನ್ನೇ ಭಯಸುತ್ತೇನೆ: ಫ್ಯಾನ್ಸ್‌‌ ವಾರ್‌ಗೆ ಬ್ರೇಕ್ ಹಾಕಿದ್ರಾ ಕಿಚ್ಚ ಸುದೀಪ್?

Untitled design 2025 12 24T211546.098

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ (Sandalwood) ಕೆಲ ದಿನಗಳಿಂದ ಜೋರಾಗಿ ಚರ್ಚೆಯಾಗುತ್ತಿದ್ದ ‘ಫ್ಯಾನ್ಸ್ ವಾರ್’ ವಿಷಯಕ್ಕೆ ನಟ ಕಿಚ್ಚ ಸುದೀಪ್ (Kichcha Sudeep) ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಹುಬ್ಬಳ್ಳಿಯೊಂದರ ಕಾರ್ಯಕ್ರಮದ ವೇದಿಕೆಯಲ್ಲಿ ಸುದೀಪ್ ಆಡಿದ ಕೆಲವು ಮಾತುಗಳು ನಟ ದರ್ಶನ್ (Actor Darshan) ಹಾಗೂ ಅವರ ಅಭಿಮಾನಿಗಳನ್ನು ಕೆರಳಿಸಿತ್ತು ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ನಟರ ಅಭಿಮಾನಿಗಳ ನಡುವೆ ತೀವ್ರ ವಾಗ್ವಾದ, ಟ್ರೋಲ್ಸ್ ಹಾಗೂ ಆರೋಪ-ಪ್ರತ್ಯಾರೋಪಗಳ ಸರಮಾಲೆಯೇ ಶುರುವಾಗಿದೆ.

ಈ ಎಲ್ಲಾ ಗೊಂದಲಗಳ ನಡುವೆಯೇ ಇದೀಗ ಕಿಚ್ಚ ಸುದೀಪ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿ, ಫ್ಯಾನ್ಸ್ ವಾರ್‌ಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದಾರೆ. “ನಾನು ಮಾತನಾಡಿದ್ದು ಯಾರ ವಿರುದ್ಧವೂ ಅಲ್ಲ. ವಿಶೇಷವಾಗಿ ದರ್ಶನ್ ಅಥವಾ ಅವರ ಅಭಿಮಾನಿಗಳನ್ನು ನೋಯಿಸುವ ಉದ್ದೇಶ ನನ್ನದಲ್ಲ” ಎಂಬ ಸಂದೇಶವನ್ನು ಸುದೀಪ್ ನೀಡಿದ್ದಾರೆ.

ಇತ್ತೀಚೆಗೆ ಕಿಚ್ಚ ಸುದೀಪ್ ‘ಆಸ್ಕ್ ಕಿಚ್ಚ’ (Ask Kichcha) ಎಂಬ ಸೋಶಿಯಲ್ ಮೀಡಿಯಾ ಸಂವಾದದ ಮೂಲಕ ಅಭಿಮಾನಿಗಳೊಂದಿಗೆ ನೇರವಾಗಿ ಮಾತನಾಡುತ್ತಿದ್ದರು. ಈ ವೇಳೆ ದರ್ಶನ್ ಅಭಿಮಾನಿಯೊಬ್ಬರು, “ನಿಮ್ಮ ಮತ್ತು ದರ್ಶನ್ ಸ್ನೇಹದ ಬಗ್ಗೆ ಒಂದು ಮಾತು ಹೇಳಿ” ಎಂದು ಪ್ರಶ್ನೆ ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್, ತಮ್ಮ ಹಾಗೂ ದರ್ಶನ್ ಹಳೆಯ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಆ ಫೋಟೋಗೆ, “ನಾನು ಯಾವಾಗಲೂ ದರ್ಶನ್‌ಗೆ ಒಳ್ಳೆಯದನ್ನೇ ಬಯಸುತ್ತೇನೆ” ಎಂದು ಬರೆದು, ಇಬ್ಬರ ನಡುವೆ ಯಾವುದೇ ದ್ವೇಷ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಈ ಪೋಸ್ಟ್ ಮೂಲಕ ಕಿಚ್ಚ ಸುದೀಪ್ ಒಂದು ಮಹತ್ವದ ಸಂದೇಶ ನೀಡಿದ್ದಾರೆ. ಈ ಸಂದೇಶ ಹಿಂದೆ ದರ್ಶನ್ ಮೇಲಿದ್ದ ಪ್ರೀತಿ, ಗೌರವ ಹಾಗೂ ಸ್ನೇಹ ಈಗಲೂ ಅದೇ ರೀತಿಯಲ್ಲಿ ಮುಂದುವರೆದಿದೆ ಎಂಬುದನ್ನು ಸೂಚಿಸುವಂತಿದೆ. ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥಮಾಡಿಕೊಂಡು ಅನಗತ್ಯವಾಗಿ ಫ್ಯಾನ್ಸ್ ವಾರ್ ನಡೆಯಬಾರದು ಎಂಬದು ಸುದೀಪ್ ಅವರ ಉದ್ದೇಶವಾಗಿದೆ.

ಸುದೀಪ್ ಹಳೆಯದು ಫೋಟೊ ಹಂಚಿಕೊಂಡಿದ್ದು, ಆ ಫೋಟೋ ನೋಡುತ್ತಿದ್ದಂತೆ ಅನೇಕ ಅಭಿಮಾನಿಗಳು “ಅಂದು ಇದ್ದ ಸ್ನೇಹ ಮತ್ತೆ ಕಾಣಬೇಕು”, “ಫ್ಯಾನ್ಸ್‌ಗಳ ಕಾರಣಕ್ಕೆ ಕಲಾವಿದರು ದೂರವಾಗಬಾರದು” ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಕಿಚ್ಚನ ಈ ನಡೆಗೆ ಶ್ಲಾಘನೆ ವ್ಯಕ್ತಪಡಿಸಿ, ಇದು ಫ್ಯಾನ್ಸ್ ವಾರ್‌ಗೆ ಫುಲ್ ಸ್ಟಾಪ್ ಆಗಲಿ ಎಂದು ಆಶಿಸಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್ ಮತ್ತು ಸುದೀಪ್ ಇಬ್ಬರೂ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗ ಹೊಂದಿರುವ ನಟರು. ಆದರೆ, ಅಭಿಮಾನಿಗಳ ಅತಿರೇಕದ ವರ್ತನೆಯಿಂದ ಕಲಾವಿದರ ಹೆಸರು ಕೆಡಬಾರದು ಎಂಬ ಸಂದೇಶವನ್ನು ಕಿಚ್ಚ ಸುದೀಪ್ ಪರೋಕ್ಷವಾಗಿ ನೀಡಿದ್ದಾರೆ ಎನ್ನಬಹುದು. “ನಟರು ಒಬ್ಬರನ್ನೊಬ್ಬರು ಗೌರವಿಸುತ್ತಾರೆ, ಆದರೆ ಫ್ಯಾನ್ಸ್‌ಗಳ ಯುದ್ಧದಿಂದ ಅನಗತ್ಯ ಗೊಂದಲ ಸೃಷ್ಟಿಯಾಗುತ್ತದೆ” ಎಂಬ ಮಾತುಗಳು ಈ ಘಟನೆಯಿಂದ ಮತ್ತೆ ಸಾಬೀತಾಗಿವೆ.

Exit mobile version