ಕೌನ್ ಬನೇಗಾ ಕರೋಡ್‌ಪತಿ ಶೋನಲ್ಲಿ ಬಿಗ್‌ ಬಿಯನ್ನು ಅವಮಾನಿಸಿದ ಬಾಲಕ: ವಿಡಿಯೋ ವೈರಲ್

Untitled design (56)

ಬಾಲಿವುಡ್‌ನ ದಿಗ್ಗಜ ನಟ ಅಮಿತಾಭ್ ಬಚ್ಚನ್ ಅವರು ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲದೇ ಟೆಲಿವಿಷನ್ ಜಗತ್ತಿನಲ್ಲೂ ದೊಡ್ಡ ಹೆಸರು ಮಾಡಿದ್ದಾರೆ. ಅವರ ನಿರೂಪಣೆಯ ‘ಕೌನ್ ಬನೇಗಾ ಕರೋಡ್‌ಪತಿ’ (ಕೆಬಿಸಿ) ರಿಯಾಲಿಟಿ ಶೋ ಭಾರತೀಯ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಈ ಕ್ವಿಝ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಜ್ಞಾನ ಮತ್ತು ಹಣ ಗಳಿಸುವ ಅವಕಾಶ ಪಡೆಯುತ್ತಾರೆ. ಆದರೆ ಇತ್ತೀಚೆಗೆ ಈ ಶೋನಲ್ಲಿ ಜೂನಿಯರ್ ಸಂಚಿಕೆಯಲ್ಲಿ ಘಟಿಸಿದ ಒಂದು ಘಟನೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸಿದೆ. ಒಬ್ಬ 5ನೇ ತರಗತಿ ಬಾಲಕ ಅಮಿತಾಭ್ ಬಚ್ಚನ್ ಅವರೊಂದಿಗೆ ಅಗೌರವಯುತವಾಗಿ ವರ್ತಿಸಿದ್ದು, ನೆಟ್ಟಿಗರಿಂದ ತೀವ್ರ ಟೀಕೆಗೆ ಗುರಿಯಾಗಿದೆ.

ಕೆಬಿಸಿ ಶೋನಲ್ಲಿ ಪ್ರತಿ ಸೀಸನ್ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಅಮಿತಾಭ್ ಬಚ್ಚನ್ ಅವರ ವಿಶಿಷ್ಟ ನಿರೂಪಣಾ ಶೈಲಿ, ಹಾಸ್ಯಪ್ರಜ್ಞೆ ಮತ್ತು ತಾಳ್ಮೆಯು ಶೋವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದೆ. ಈ ಬಾರಿಯ ಜೂನಿಯರ್ ಸಂಚಿಕೆಯೂ ಸಹ ಉತ್ತಮವಾಗಿ ಮೂಡಿಬಂದಿದೆ. ಆದರೆ ಗುಜರಾತ್‌ನ ಗಾಂಧಿನಗರದ ಇಶಿತ್ ಭಟ್ ಎಂಬ 5ನೇ ತರಗತಿ ವಿದ್ಯಾರ್ಥಿಯ ವರ್ತನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಈ ಬಾಲಕ ಶೋನಲ್ಲಿ ಕುಳಿತ ಕೂಡಲೇ ಅಮಿತಾಭ್ ಬಚ್ಚನ್ ಅವರನ್ನು ‘ಸಹನೆ ಇಲ್ಲದ ದೊಡ್ಡವರು’ ಎಂದು ಕರೆದು ಅಗೌರವ ತೋರಿದ್ದಾನೆ. ವಿಡಿಯೋದಲ್ಲಿ ಬಾಲಕ ಆರಂಭದಲ್ಲೇ, “ನನಗೆ ಈ ಶೋ ನಿಯಮಗಳನ್ನೆಲ್ಲ ಹೇಳುವುದಕ್ಕೆ ಹೋಗಬೇಡಿ. ನನಗೆ ಎಲ್ಲವೂ ಗೊತ್ತಿದೆ” ಎಂದು ಆಜ್ಞೆಯಂತೆ ಮಾತನಾಡುತ್ತಾನೆ. ಇದಕ್ಕೆ ಬಿಗ್ ಬಿ ತಾಳ್ಮೆಯಿಂದಲೇ ಸಮ್ಮತಿಸಿ ಮುಂದುವರಿದ್ದಾರೆ.

ಪ್ರಶ್ನೋತ್ತರ ಆರಂಭವಾದ ನಂತರವೂ ಬಾಲಕ ಮುಂದುವರೆಸಿದ್ದು, ಮೊದಲ ಪ್ರಶ್ನೆಯಲ್ಲಿ ‘ಯಾವುದನ್ನು ಬೆಳಗ್ಗೆ ತಿನ್ನಲಾಗುತ್ತದೆ?’ ಎಂದು ಕೇಳಿದಾಗ, ಬಾಲಕ ಆಯ್ಕೆಗಳನ್ನು ಕೇಳದೇ ‘ಬ್ರೇಕ್‌ಫಾಸ್ಟ್’ ಎಂದು ಹೇಳಿ, ನಂತರ ‘ಬಿ ಆಪ್ಶನ್ ಲಾಕ್ ಮಾಡಿ’ ಎಂದು ಆದೇಶಿಸುತ್ತಾನೆ. ಮುಂದಿನ ಪ್ರಶ್ನೆ ‘ಚೆಸ್‌ನಲ್ಲಿ ಎಷ್ಟು ರಾಜರು ಇರುತ್ತಾರೆ?’ ಎಂಬುದಕ್ಕೆ ‘ಇದೊಂದು ಕೇಳುವಂತಹ ಪ್ರಶ್ನೆಯೇ? ಕೇವಲ 2 ರಾಜರು’ ಎಂದು ಅಸಹನೆಯಿಂದ ಉತ್ತರಿಸುತ್ತಾನೆ. ರಾಮಾಯಣದ ಮೊದಲ ಕಾಂಡ ಯಾವುದು ಎಂಬ ಐದನೇ ಪ್ರಶ್ನೆಗೆ ಆಯ್ಕೆಗಳನ್ನು ಬೊಬ್ಬೆ ಹಾಕಿ ಕೇಳುತ್ತಾನೆ. ತಪ್ಪು ಉತ್ತರ ನೀಡಿದ ನಂತರ, ‘ಬಿಗ್ ಬಿ ಅಂಕಲ್, ನೀವು ಕೂಡ ತಪ್ಪುಗಳನ್ನು ಮಾಡುತ್ತೀರಿ ಅಲ್ಲವೇ?’ ಎಂದು ಟೀಕಿಸುತ್ತಾನೆ. ಅಂತಿಮವಾಗಿ ತಪ್ಪು ಉತ್ತರದಿಂದಾಗಿ ಶೋದಿಂದ ನಿರ್ಗಮಿಸುತ್ತಾನೆ.

ಈ ಸಂಚಿಕೆಯ ಕ್ಲಿಪ್ಸ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಮಕ್ಕಳನ್ನು ಅತಿಯಾಗಿ ಮುದ್ದು ಮಾಡಿ ಬೆಳೆಸಿದರೆ ಹೀಗೆ ಆಗುತ್ತದೆ. ವಿನಯ, ನಯ ಮತ್ತು ನಾಜೂಕತೆಯನ್ನು ಕಲಿಸುವುದು ಪೋಷಕರ ಜವಾಬ್ದಾರಿ” ಎಂದು ಒಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ಅಮಿತಾಭ್ ಬಚ್ಚನ್ ದೊಡ್ಡ ಸ್ಟಾರ್ ಆಗಿರಲಿ ಅಥವಾ ಇಲ್ಲದಿರಲಿ, ಅವರ ವಯಸ್ಸು, ಅನುಭವ ಮತ್ತು ಜ್ಞಾನಕ್ಕಾದರೂ ಗೌರವ ಕೊಡಬೇಕಿತ್ತು” ಎಂದು ಅಭಿಪ್ರಾಯಪಟ್ಟಿದ್ದಾರೆ.

Exit mobile version