ಬೆಂಗಳೂರು: ‘ರಾಧಾ ರಮಣ’ ಧಾರಾವಾಹಿ ಖ್ಯಾತಿಯ ನಟಿ ಕಾವ್ಯ ಗೌಡ ಹಾಗೂ ಅವರ ಪತಿ ಸೋಮಶೇಖರ್ ಮೇಲೆ ಕುಟುಂಬದವರಿಂದಲೇ ಹಲ್ಲೆ ನಡೆದಿರುವ ಘಟನೆ ಭಾರೀ ಸಂಚಲನ ಮೂಡಿಸಿದೆ. ಜನವರಿ 26ರಂದು ನಡೆದ ಈ ಘಟನೆಗೆ ಸಂಬಂಧಿಸಿದಂತೆ, ಸೋಮಶೇಖರ್ ಅವರ ಸಹೋದರ ನಂದೀಶ್, ಅವರ ಪತ್ನಿ ಪ್ರೇಮಾ ಹಾಗೂ ಪ್ರೇಮಾ ಅವರ ತಂದೆ ರವಿಕುಮಾರ್ ಅವರು ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಪ್ರಕರಣದಲ್ಲಿ ನಟಿ ಕಾವ್ಯ ಗೌಡ ಅವರಿಗೆ ಅತ್ಯಾಚಾರ ಬೆದರಿಕೆ ಹಾಕಲಾಗಿದೆ ಎಂಬ ಆರೋಪವೂ ಇದೆ. ಈ ಕುರಿತು ಮಾಧ್ಯಮದ ಮುಂದೆ ಮಾತನಾಡಿರುವ ಕಾವ್ಯ, ತಮ್ಮ ಮೇಲೆ ನಡೆದ ದೌರ್ಜನ್ಯವನ್ನು ವಿವರಿಸಿದ್ದಾರೆ.
‘ಹಿಂದೆ ಮೌನ ವಹಿಸಿದ್ದೆ, ಆದರೆ ಈಗ ಕಾನೂನಿನ ಮೊರೆ ಹೋಗಲೇಬೇಕಾಯಿತು’
ಘಟನೆಯ ಕುರಿತು ಮಾತನಾಡಿದ ನಟಿ ಕಾವ್ಯ ಗೌಡ, “ಈ ಹಿಂದೆ ನನಗೆ ಒಂದು ಬಾರಿ ಹೊಡೆದಿದ್ದರು. ಕುಟುಂಬದ ಮಾನ ಹಾಳಾಗಬಾರದು ಎಂಬ ಕಾರಣಕ್ಕೆ ನಾನು ಪಬ್ಲಿಕ್‌ಗೆ ಬರಲಿಲ್ಲ. ಆದರೆ ನನ್ನ ಗಂಡನಿಗೆ ಹಿಂದಿನಿಂದ ಚಾಕು ಚುಚ್ಚಿದಾಗ ಭಯದಿಂದ ನಡುಗಿಹೋಗಿದೆ. ನನಗೆ ನೇರವಾಗಿ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾನು ಕಾನೂನಿನ ಮೊರೆ ಹೋಗದೇ ಇರಲು ಸಾಧ್ಯವೇ ಇಲ್ಲ. ನನ್ನ ಮೇಲೆ ಹಲ್ಲೆ ಮಾಡಿದವರು ಖಂಡಿತವಾಗಿಯೂ ತಮ್ಮ ಕೃತ್ಯದ ಫಲವನ್ನು ಅನುಭವಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತಿ ICUನಲ್ಲಿ ಚಿಕಿತ್ಸೆ
ಈ ಹಲ್ಲೆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸೋಮಶೇಖರ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಎದುರು ಆರೋಪಗಳು: ಪ್ರೇಮಾ ಹೇಳಿದ್ದೇನು?
ಇತ್ತ, ಕಾವ್ಯ ಗೌಡ ಮೇಲೆ ಹಲ್ಲೆ ಆರೋಪ ಎದುರಿಸುತ್ತಿರುವ ಪ್ರೇಮಾ ಅವರು ಕೂಡ ಪ್ರತಿಕ್ರಿಯೆ ನೀಡಿದ್ದು, ಸಂಪೂರ್ಣ ಬೇರೆ ರೀತಿಯ ಕಥನ ನೀಡಿದ್ದಾರೆ. “ಕಾವ್ಯಾ ಅವರ ಪತಿ ಸೋಮಶೇಖರ್ ನನ್ನ ತಂಗಿಯ ಮೇಲೆ ಹಲ್ಲೆ ಮಾಡಿದ್ದಾರೆ. ಅವರು ನಮಗೆ ಕೊಲೆ ಬೆದರಿಕೆ ಹಾಗೂ ರೇಪ್ ಬೆದರಿಕೆ ಹಾಕಿದ್ದಾರೆ. ಈಗ ಅವರು ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕಾವ್ಯಾ ನಮ್ಮನ್ನು ಮನೆಯಿಂದ ಹೊರಗೆ ಹಾಕಬೇಕು ಎಂಬ ಕಾರಣಕ್ಕಾಗಿ ಈ ರೀತಿ ಕಿರಿಕ್ ಮಾಡುತ್ತಿದ್ದಾರೆ” ಎಂದು ಪ್ರೇಮಾ ಆರೋಪಿಸಿದ್ದಾರೆ.
ಎಫ್‌ಐಆರ್‌ನಲ್ಲಿ ಏನಿದೆ?
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ದೂರಿನ ಪ್ರಕಾರ, ಪಿರ್ಯಾದುದಾರರಾದ ಭವ್ಯಾ ರಾಣಿ ಅವರು ತಮ್ಮ ತಂಗಿ ಕಾವ್ಯ ಗೌಡ ಅವರಿಗೆ ಮದುವೆ ಮಾಡಿಕೊಟ್ಟಿದ್ದು, ಜನವರಿ 26ರಂದು ಸಂಜೆ 6.30ರ ಸುಮಾರಿಗೆ ಕಾವ್ಯ ಫೋನ್ ಮಾಡಿ, ಪ್ರೇಮಾ, ನಂದೀಶ್ ಹಾಗೂ ಅವರ ತಂದೆ ರವಿಕುಮಾರ್ ತಮ್ಮ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ, ಅವರು ಕೆಟ್ಟ ಪದಗಳಿಂದ ಬೈದು, ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂಬುದನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಮಾಹಿತಿ ಪಡೆದ ಭವ್ಯಾ ರಾಣಿ ತಕ್ಷಣ ತಮ್ಮ ತಂಗಿಯ ಮನೆಗೆ ತೆರಳಲು ಹೊರಟಾಗ, ಮಾರ್ಗ ಮಧ್ಯೆ ಕಾವ್ಯ ಹಲವು ಬಾರಿ ಕರೆ ಮಾಡಿ, ತನಗೆ ಮತ್ತು ತನ್ನ ಪತಿ ಸೋಮಶೇಖರ್‌ಗೆ ಹೊಡೆಯುತ್ತಿದ್ದಾರೆ ಹಾಗೂ ಚಾಕುವಿನಿಂದ ತಿವಿಯಲು ಬರುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪೊಲೀಸ್ ತನಿಖೆ ಚುರುಕು
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎರಡೂ ಪಕ್ಷಗಳ ಹೇಳಿಕೆಗಳನ್ನು ಪರಿಶೀಲಿಸಿ ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಗಳು, ವೈದ್ಯಕೀಯ ವರದಿ ಹಾಗೂ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
