ಈಗಾಗ್ಲೇ ಕಾಂತಾರ ಸಿನಿಮಾ ನ್ಯಾಷನಲ್ ಅವಾರ್ಡ್ ಪಡೆದಾಗಿದೆ. ಕಾಂತಾರ-1 ಅದನ್ನೂ ಮೀರಿ ಚಮತ್ಕಾರ ಮಾಡ್ತಿದೆ. ಜೀಟಿಗೆ ಸಿನಿಮಾಗೇ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ ಅಂದಾಗ, ಅದನ್ನ ಹಿಡಿದ ದೈವದ ಕುರಿತ ಕಾಂತಾರಗೆ ಆಸ್ಕರ್ ಸಿಗಬೇಕಲ್ಲವೇ..? ಇದರೊಟ್ಟಿಗೆ ಈ ವರ್ಷ ಸ್ಯಾಂಡಲ್‌ವುಡ್‌ಗೆ ಆಸರೆಯಾದ ರಾಜ್ ಬಿ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಕುರಿತ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.
- ‘ಜೀಟಿಗೆ’ಗೆ ನ್ಯಾಷನಲ್ ಗರಿ.. ಅದನ್ನ ಹಿಡಿದ ದೈವಕ್ಕೆ ಆಸ್ಕರ್..?
- ಕಾಂತಾರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಾಗಿದೆ.. ಅದನ್ನ ಮೀರಿದ ಚಮತ್ಕಾರ
- ಅಂದು ರಾಜ್.. ಇಂದು ರಿಷಬ್.. ಇಂಡಸ್ಟ್ರಿಗೆ ಶೆಟ್ರೇ ಆಸರೆ..!
- 120ಕೋಟಿ ಬ್ಯುಸಿನೆಸ್ನಿಂದ ಹುಬ್ಬೇರಿಸಿದ ಸು ಫ್ರಮ್ ಸೋ
- 700ಕೋಟಿ ಕ್ಲಬ್ ಸೇರಿ ಸಾವಿರ ಕೋಟಿಯತ್ತ ಕಾಂತಾರ ನಡೆ
- ಶೆಟ್ರ ಸಿನಿಮೋತ್ಸಾಹಕ್ಕೆ ಈ ಅಭೂತಪೂರ್ವ ಸಕ್ಸಸ್ಗಳೇ ಕೈಗನ್ನಡಿ
ಕಾಂತಾರ.. ಅಂದ್ರೆ ದಟ್ಟವಾದ ಕಾಡು. ಆ ಕಾಡಿನಲ್ಲಿ ಸಾಕಷ್ಟು ದಂತಕಥೆಗಳು ಅಡಗಿರಲಿವೆ. ಸದ್ಯ ಅವುಗಳನ್ನ ಒಂದೊಂದಾಗಿ ಹೊರಗಚ್ಚಿ, ಬೆಳ್ಳಿಪರದೆ ಬೆಳಗಿಸುವ ಕಾರ್ಯ ಮಾಡ್ತಿದ್ದಾರೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ. ಅವರ ಆ ಕನಸುಗಳಿಗೆ ನೀರೆರೆದು, ಕೋಟ್ಯಂತರ ರೂಪಾಯಿ ಬಂಡವಾಳ ಹಾಕ್ತಿದೆ ಹೊಂಬಾಳೆ ಫಿಲಂಸ್. ಆ ವೇದಿಕೆಯನ್ನ ಸಮರ್ಪಕವಾಗಿ ಬಳಸಿಕೊಂಡ ರಿಷಬ್, ತನ್ನ ವಿವೇಚನೆಯಂತೆ ಹಾಗೂ ನೋಡುಗರ ನಿರೀಕ್ಷೆಯನ್ನ ಮ್ಯಾಚ್ ಮಾಡಿದ್ದಾರೆ.
ಮೂರು ವರ್ಷಗಳ ಹಿಂದೆ ಬಂದಂತಹ ಕಾಂತಾರ ಸಿನಿಮಾನೇ ಮೈಲಿಗಲ್ಲು ಚಿತ್ರವಾಗಿ ಹೊರಹೊಮ್ಮಿತ್ತು. ಇದೀಗ ಅದ್ರ ಪ್ರೀಕ್ವೆಲ್ ಕಾಂತಾರ ಚಾಪ್ಟರ್-1 ಅದರ ಹತ್ತು ಪಟ್ಟು ದಾಖಲೆಗಳನ್ನ ಬರೆಯುತ್ತಿದೆ. ಅದಕ್ಕೆ ಕಾರಣ ರಿಷಬ್ ಶೆಟ್ಟಿಯಲ್ಲಿರೋ ಸಿನಿಮೋತ್ಸಾಹ. ಕೇವಲ ಹನ್ನೊಂದೇ ಹನ್ನೊಂದು ದಿನಕ್ಕೆ 655 ಕೋಟಿ ಗಳಿಸಿದೆ ಕಾಂತಾರ-1. ಯಶಸ್ವಿ ಸಾವಿರ ಕೋಟಿ ಕ್ಲಬ್‌ನತ್ತ ಮುನ್ನುಗ್ಗುತ್ತಿದೆ. ಇಂತಹ ಚಿತ್ರಕ್ಕೆ ಆಸ್ಕರ್ ಅವಾರ್ಡ್ ಸಿಗಲೇಬೇಕು ಅನ್ನೋದು ಹಲವರ ಅಭಿಪ್ರಾಯ ಹಾಗೂ ಆಶಯವಾಗಿದೆ.
ಯೆಸ್.. ಈಗಾಗ್ಲೇ ಕಾಂತಾರ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್ ಸಿಕ್ಕಾಗಿದೆ. ಅದರ ಪ್ರೀಕ್ವೆಲ್ ಅದನ್ನ ಮೀರಿ ಚಮತ್ಕಾರ ಮಾಡ್ತಿದೆ. ಗುಳಿಗ ದೈವ, ಕಾರ್ಣಿಕ ಕಲ್ಲು, ಶಿವ ಗಣ, ಇತಿಹಾಸದ ಪುಟಗಳಲ್ಲಿರುವಂತೆ ಮಸಾಲೆ ಪದಾರ್ಥಗಳ ವಿದೇಶಿ ವ್ಯಾಪಾರೀಕರಣವನ್ನ ಕದಂಬರ ಕಾಲಘಟ್ಟದಲ್ಲಿ ಮಾಡುವುದು ತಮಾಷೆಯ ಮಾತಲ್ಲ. ಹಾಗಾಗಿ ಇದಕ್ಕೆ ಆಸ್ಕರ್ ನೀಡಿದ್ರೂ ಕಮ್ಮಿನೇ ಅನ್ನೋದು ಹಲವರ ಅಭಿಪ್ರಾಯವಾಗಿದೆ. ಇಂಟರೆಸ್ಟಿಂಗ್ ಅಂದ್ರೆ ಈ ಬಾರಿಯೂ ನ್ಯಾಷನಲ್ ಅವಾರ್ಡ್ ಬಂದ್ರೆ ಅಚ್ಚರಿಯಿಲ್ಲ.
ಜೀಟಿಗೆ ಅನ್ನೋ ತುಳು ಸಿನಿಮಾಗೆ ನ್ಯಾಷನಲ್ ಅವಾರ್ಡ್ ಬಂದಿದೆ. ಇನ್ನೂ ಆ ಜೀಟಿಗೆ ಅನ್ನೋ ಬೆಳಕಿನ ಪಂಜು ಹಿಡಿದು, ಅಂಧಕಾರದಿಂದ ಬೆಳಕಿನೆಡೆಗೆ ನಡೆಸುವ ದೈವದ ಕುರಿತು ಮಾಡಿರೋ ಕಾಂತಾರ-1ಗೆ ಆಸ್ಕರ್ ಅವಾರ್ಡ್ ಕೊಡದಿದ್ರೆ ಹೇಗೆ ಅಲ್ಲವೇ..?
ಈ ವರ್ಷ ನಮ್ಮ ಕನ್ನಡ ಚಿತ್ರರಂಗ ಭಾರತೀಯ ಚಿತ್ರರಂಗಕ್ಕೆ ಅತಿ ಹೆಚ್ಚು ಗಳಿಸಿದ 2ನೇ ಸಿನಿಮಾನ ಕೊಡುಗೆಯಾಗಿ ನೀಡಿದ ಗರಿಮೆಯಿದೆ. ಹೌದು.. ಸೈಯ್ಯಾರ ಸಿನಿಮಾದ ಗಳಿಕೆಯನ್ನ ಹಿಂದಿಕ್ಕಿ ಕಾಂತಾರ-1 ಮುನ್ನುಗ್ಗುತ್ತಿದೆ. ಮೂರ್ನಾಲ್ಕು ದಿನದಲ್ಲಿ ವಿಕ್ಕಿ ಕೌಶಲ್‌ರ ಛಾವಾ ಚಿತ್ರದ ಗಳಿಕೆಯನ್ನ ಕೂಡ ಮೀರಿಸುವ ಭರವಸೆ ಇದೆ. ಸದ್ಯ 700 ಕೋಟಿ ಕಲೆಕ್ಷನ್ ಮಾಡಿ, ಇಂದಿಗೂ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ ಕಾಂತಾರ ಚಾಪ್ಟರ್-1.
ಇದಕ್ಕೂ ಮುನ್ನ ಸ್ಯಾಂಡಲ್‌ವುಡ್‌ಗೆ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ನೀಡಿದ್ದು ರಾಜ್ ಬಿ ಶೆಟ್ಟಿ. ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ಆಗಿರೋ ರಾಜ್ ಶೆಟ್ಟಿ, ಕೇವಲ ನಾಲ್ಕೈದು ಕೋಟಿ ಸಣ್ಣ ಬಜೆಟ್‌ನ ಸು ಫ್ರಮ್ ಸೋ ಸಿನಿಮಾದಿಂದ ಪ್ರೇಕ್ಷಕರಿಗೆ ನೂರು ಪಟ್ಟು ಮಸ್ತ್ ಮನರಂಜನೆ ನೀಡಿದ್ರು. ನಗುವಿನ ಟಾನಿಕ್‌ನಿಂದ ಬರೋಬ್ಬರಿ 120 ಕೋಟಿ ಬ್ಯುಸಿನೆಸ್ ಮಾಡಿದ್ರು. ಕನ್ನಡದಲ್ಲಿ ಬರೀ ಬಿಗ್ ಬಜೆಟ್ ಚಿತ್ರಗಳಷ್ಟೇ ಅಲ್ಲ, ಕಂಟೆಂಟ್‌ನಿಂದ ಸಣ್ಣ ಬಜೆಟ್ ಚಿತ್ರಗಳು ಕೂಡ ನೂರಾರು ಕೋಟಿ ಬ್ಯುಸಿನೆಸ್ ಮಾಡಬಲ್ಲವು ಅನ್ನೋದಕ್ಕೆ ನಾಂದಿ ಹಾಡಿದ್ರು.
ಇದೀಗ ರಿಷಬ್ ಶೆಟ್ಟಿ ಅವರ ಸರದಿ. ಒಟ್ಟಾರೆ ಹೀರೋಗಳ ಕೊರತೆ ಇದೆ. ಬರಹಗಾರರ ಕೊರತೆ ಇದೆ. ಮಾರ್ಕೆಟ್ ಚಿಕ್ಕದು. ಅದು ಇದು ಅಂತ ಕಥೆಗಳನ್ನ ಹೇಳೋರ ಮುಂದೆ ಸದ್ಯ ಸ್ಯಾಂಡಲ್‌ವುಡ್‌ಗೆ ಈ ವರ್ಷ ಆಸರೆಯಾಗಿದ್ದೇ ಕರಾವಳಿ ಭಾಗದ ಮಲ್ಟಿ ಟ್ಯಾಲೆಂಟ್‌ಗಳಾದ ಶೆಟ್ರು. ರಾಜ್ ಶೆಟ್ಟಿ-ರಿಷಬ್ ಶೆಟ್ಟಿ ಒಳ್ಳೆಯ ಸ್ನೇಹಿತರು. ಇದೀಗ ಆ ಗೆಳೆಯರ ಬಳಗದಿಂದಲೇ ಇಂತಹ ಬಿಗ್ಗೆಸ್ಟ್ ಹಿಟ್ಸ್ ಹೊರ ಹೊಮ್ಮಿರುವುದು ಚರಿತ್ರೆಯೇ ಸರಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್