ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡ್ತಿರೋ ಸಿನಿಮಾ ಕಾಂತಾರ. ಇದೀಗ ಆ ಮಾಸ್ಟರ್‌ಕ್ಲಾಸ್ ಹಾಗೂ ಮಾಸ್ಟರ್‌ಪೀಸ್ ಪ್ರತಿಷ್ಠಿತ ಆಸ್ಕರ್ ಅಂಗಳಕ್ಕೆ ಕಾಲಿಡ್ತಿದೆ. ಈ ಖುಷಿಯ ವಿಚಾರದ ಜೊತೆ ಆಸ್ಟ್ರೇಲಿಯಾ ಬಾಕ್ಸ್ ಆಫೀಸ್ ಕಿಂಗ್ ಆಗಿ ರಾರಾಜಿಸ್ತಿರೋ ರಿಷಬ್ ಶೆಟ್ಟಿಯ ಆಲ್ ಟೈಂ ರೆಕಾರ್ಡ್ ಕೂಡ ನಿಮಗೆ ಹೇಳ್ತೀವಿ ಈ ಸ್ಟೋರಿ ನೋಡಿ.
ಆಸ್ಕರ್ ಅಂಗಳಕ್ಕೆ ಕಾಂತಾರ.. ಕನ್ನಡಿಗರ ಹೆಮ್ಮೆ ಹೊಂಬಾಳೆ..!
RRR ನಾಟು ನಾಟು ನಂತ್ರ ಹಾಲಿವುಡ್‌ನಲ್ಲಿ ಕಾಂತಾರ ಘಾಟು
ತೆರೆಕಂಡ ಎಲ್ಲಾ ಸಿನಿಮಾಗಳು ಜನಕ್ಕೆ ರುಚಿಸೋಕೆ ಸಾಧ್ಯವಿಲ್ಲ. ಆದ್ರೆ ಆಗಾಗ ಒಂದಷ್ಟು ಚಿತ್ರಗಳು ನಮ್ಮ ಊಹೆ, ನಿರೀಕ್ಷೆಗೂ ಮೀರಿದ ಚಮತ್ಕಾರ ಮಾಡುತ್ತವೆ. ಭಾರತೀಯ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹಾಗೆ ಮಾಡಿದ ಸಿನಿಮಾಗಳು ಅಂದ್ರೆ ಬಾಹುಬಲಿ, ತ್ರಿಬಲ್ ಆರ್, ಕೆಜಿಎಫ್ ಹಾಗೂ ಪುಷ್ಪ. ಇದೀಗ ಅವುಗಳ ಸಾಲಿಗೆ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರ-1 ಕೂಡ ಸೇರಿಕೊಂಡಿದೆ.
ಯೆಸ್.. ಈ ಸಿನಿಮಾನ ಶ್ರೀಸಾಮಾನ್ಯ ಪ್ರೇಕ್ಷಕನಿಂದ ಹಿಡಿದು ಸೆನ್ಸೇಷನಲ್ ಸೂಪರ್ ಸ್ಟಾರ್ಸ್, ಸ್ಟಾರ್ ಡೈರೆಕ್ಟರ್ಸ್, ಪೊಲಿಟಿಷಿಯನ್ಸ್ ಹಾಗು ಕ್ರಿಕೆಟರ್ಸ್ ಕೂಡ ಮೆಚ್ಚಿ, ಅಭೂತಪೂರ್ವ ಪ್ರಶಂಸೆಗಳನ್ನ ವ್ಯಕ್ತಪಡಿಸ್ತಿದ್ದಾರೆ. ಇಂತಹ ಸಿನಿಮಾ ಆಸ್ಕರ್ ಅಂಗಳಕ್ಕೆ ಹೋಗದಿದ್ರೆ ಹೇಗೆ ಅಲ್ಲವೇ..? ಈ ಹಿಂದಿನ ಕಾಂತಾರ ಚಿತ್ರವನ್ನು ಆಸ್ಕರ್‌ಗೆ ಅಪ್ಲೈ ಮಾಡೋದು ತಡ ಮಾಡಿತ್ತು ಹೊಂಬಾಳೆ ಫಿಲಂಸ್. ಆದ್ರೀಗ ಕಾಂತಾರ-1ಗೆ ಹಾಗೆ ಮಾಡಿಲ್ಲ. ಮೊದಲೇ ಆಸ್ಕರ್‌ಗೆ ಅಪ್ಲೈ ಮಾಡೋಕೆ ಸಕಲ ಸಿದ್ದತೆ ಮಾಡಿಕೊಂಡಿದೆ ನಿರ್ಮಾಣ ಸಂಸ್ಥೆ.
ಪವರ್‌ಫುಲ್ ಶಿವನ ಆಲಯಗಳಿಗೆ ಡಿವೈನ್ ಸ್ಟಾರ್ ವಿಸಿಟ್
ಕಾಂತಾರ ಚಾಪ್ಟರ್-1 ಮಾಸ್ಟರ್‌ಕ್ಲಾಸ್ & ಮಾಸ್ಟರ್‌ಪೀಸ್..!
ಆಸ್ಕರ್‌ಗೆ ಅಪ್ಲೈ ಮಾಡೋಕೆ ಸಿಕ್ಕಾಪಟ್ಟೆ ದೊಡ್ಡ ಪ್ರೊಸೀಜರ್ ಇರೋದ್ರಿಂದ ಎಲ್ಲಾ ರೀತಿಯ ದಾಖಲಾತಿಗಳನ್ನ ಒದಗಿಸಿ ಮೊದಲ ಹಂತಕ್ಕೆ ಅಪ್ಲೈ ಮಾಡ್ತಿದ್ದಾರೆ ಎನ್ನಲಾಗಿದೆ. ಆಸ್ಕರ್ ನಿಜಕ್ಕೂ ಪ್ರತಿಷ್ಠಿತ ಹಾಗೂ ಅತ್ಯುನ್ನತ ಸಿನಿಮಾ ಪ್ರಶಸ್ತಿ ಆಗಿರೋದ್ರಿಂದ ರಾಜಮೌಳಿಯ ತ್ರಿಬಲ್ ಆರ್ ಬಳಿಕ ಕಾಂತಾರ-1ಗೆ ಬರೋ ನಿರೀಕ್ಷೆ ಹೆಚ್ಚಾಗಿದೆ. ಹಾಲಿವುಡ್ ಅಂಗಳದಲ್ಲಿ ನಾಟು ನಾಟು ಸಾಂಗ್ ಬಳಿಕ ಇದೀಗ ಕಾಂತಾರ ಘಾಟು ಹೆಚ್ಚಾಗಿದೆ ಎನ್ನಲಾಗ್ತಿದೆ. ಯಾಕಂದ್ರೆ ಅಮೆರಿಕಾ ಸೇರಿದಂತೆ 30ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಕಾಂತಾರ ಕೋಟಿ ಕೋಟಿ ಬಾಕ್ಸ್ ಆಫೀಸ್ ಲೂಟಿ ಮಾಡಿದೆ.
ಸಿನಿಮಾ ಸಕ್ಸಸ್ ಆದ ಹಿನ್ನೆಲೆ ರಿಷಬ್ ಶೆಟ್ಟಿ, ಮೈಸೂರಿನ ನಂಜನಗೂಡಿನಲ್ಲಿರೋ ಶ್ರೀಕಂಠೇಶ್ವರ, ಕಾಶಿ ವಿಶ್ವನಾಥ, ರಾಮೇಶ್ವರಂನ ರಾಮನಾಥ ಸ್ವಾಮಿ ಸೇರಿದಂತೆ ಸಾಕಷ್ಟು ಆಲಯಗಳನ್ನ ಸುತ್ತುತ್ತಿದ್ದಾರೆ ರಿಷಬ್. ಇನ್ನೂ ಸಾಕಷ್ಟು ಹರಕೆಗಳು ಬಾಕಿಯಿದ್ದು, ಎಲ್ಲಾ ಕಡೆ ಹೋಗಿ ಆ ದೈವ ಕೃಪೆಗೆ ಪಾತ್ರರಾಗಲಿದ್ದಾರಂತೆ ಶೆಟ್ರು.
ಆಸ್ಟ್ರೇಲಿಯಾದಲ್ಲಿ ಕಾಂತಾರ ನಂ.1.. ಇದು ಅಸಲಿ ರೆಕಾರ್ಡ್
ರಜನಿ, ಪ್ರಭಾಸ್, ಯಶ್, ವಿಕ್ಕಿ ಕೌಶಲ್ ರೆಕಾರ್ಡ್ಸ್ ಉಡೀಸ್
ಯೆಸ್.. ವಿಶ್ವ ಸಿನಿದುನಿಯಾದಲ್ಲಿ ಕೇವಲ 14 ದಿನದಲ್ಲಿ ಬರೋಬ್ಬರಿ 717 ಕೋಟಿ 50 ಲಕ್ಷ ರೂಪಾಯಿ ಬೇಹತ್ ಮೊತ್ತ ಕಲೆ ಹಾಕಿರೋ ಕಾಂತಾರ ಸಿನಿಮಾ ಆಸ್ಟ್ರೇಲಿಯಾ ಬಾಕ್ಸ್ ಆಫೀಸ್‌ನಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ಇತ್ತೀಚೆಗೆ ರಿಲೀಸ್ ಆದ ಇಂಡಿಯನ್ ಸಿನಿಮಾಗಳೆಲ್ಲದರ ಕಲೆಕ್ಷನ್‌ನ ಮೀರಿಸಿರೋ ಕಾಂತಾರ, ಸದ್ಯ ನಂಬರ್-1 ಸ್ಥಾನಕ್ಕೇರಿದೆ.
ಹೌದು.. ಆಸ್ಟ್ರೇಲಿಯನ್ ಬಾಕ್ಸ್ ಆಫೀಸ್‌ಗೆ ರಿಷಬ್ ಶೆಟ್ಟಿಯೇ ಕಿಂಗ್. ಯಾಕಂದ್ರೆ ಅಲ್ಲಿ ರಿಲೀಸ್ ಆಗಿರೋ ಇಂಡಿಯನ್ ಸಿನಿಮಾಗಳಲ್ಲಿ ಅತಿಹೆಚ್ಚು ಗಳಿಸಿದ ಸಿನಿಮಾ ಇದಾಗಿದೆ. ರಜನೀಕಾಂತ್‌ರ ಕೂಲಿ, ಜೈಲರ್, ಪ್ರಭಾಸ್‌ರ ಸಲಾರ್, ಯಶ್ ನಟನೆಯ ಕೆಜಿಎಫ್-1, ಈ ಹಿಂದಿನ ಕಾಂತಾರ ಸಿನಿಮಾ, ವಿಕ್ಕಿ ಕೌಶಲ್‌ರ ಛಾವಾ, ಹನುಮ್ಯಾನ್, ಸೈಯಾರಾ, ದೇವರ, ಪೊನ್ನಿಯಿನ್ ಸೆಲ್ವನ್.. ಹೀಗೆ ಎಲ್ಲಾ ಇಂಡಿಯನ್ ಸ್ಟಾರ್ ಸಿನಿಮಾಗಳ ದಾಖಲೆಗಳನ್ನ ಹಿಂದಿಕ್ಕಿದೆ ನಮ್ಮ ಹೆಮ್ಮೆಯ ಕಾಂತಾರ.
