ಕಾಂತಾರ ಚಿತ್ರದ ಕಂಬಳದಲ್ಲಿ ಮಿಂಚಿದ್ದ ಚಾಂಪಿಯನ್ ಅಪ್ಪು ಕೋಣ ಇನ್ನಿಲ್ಲ!

1 (5)

ಉಡುಪಿ: ಕರಾವಳಿಯ ಕಂಬಳದ ಜಗತ್ತಿನಲ್ಲಿ ದೈತ್ಯನಾಗಿ ಮಿಂಚಿದ್ದ, ಕನ್ನಡ ಚಿತ್ರರಂಗದ ಸೂಪರ್‌ಹಿಟ್‌ ಚಿತ್ರ “ಕಾಂತಾರ”ದಲ್ಲಿ ತನ್ನ ಅದ್ಭುತ ಪ್ರದರ್ಶನದಿಂದ ಎಲ್ಲರ ಮನಗೆದ್ದಿದ್ದ ಕಂಬಳ ಸ್ಟಾರ್‌ ಅಪ್ಪು ಕೋಣ ಇನ್ನಿಲ್ಲ.

ಈ ಚಾಂಪಿಯನ್‌ ಕೋಣದ ಸಾವು ಕಂಬಳ ಪ್ರಿಯರಲ್ಲಿ ತೀವ್ರ ಬೇಸರ ಮತ್ತು ನೋವುಂಟುಮಾಡಿದೆ. ಉಡುಪಿಯ ಬೈಂದೂರು ತಾಲೂಕಿನ ಪರಮೇಶ್ವರ ಭಟ್‌ ಅವರ ಪ್ರೀತಿಯ ಕೋಣವಾಗಿದ್ದ ಅಪ್ಪು, ಕರಾವಳಿಯ ಕಂಬಳ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಿತ್ತು.

ಪರಮೇಶ್ವರ ಭಟ್‌ ಅವರು ಕಂಬಳದ ಉತ್ಸಾಹಿ ಪ್ರೇಮಿಯಾಗಿದ್ದು, ಅಪ್ಪು ಮತ್ತು ಕಾಲಾ ಎಂಬ ಎರಡು ಕೋಣಗಳನ್ನು ತಮ್ಮ ಮಗಳು ಚೈತ್ರಾ ಅವರೊಂದಿಗೆ ಪ್ರೀತಿಯಿಂದ ಸಾಕಿದ್ದರು. “ಕಾಂತಾರ” ಚಿತ್ರದ ಶೂಟಿಂಗ್‌ಗೆ ಮುನ್ನವೇ ಅಪ್ಪು ಕರಾವಳಿಯ ಕಂಬಳ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿತ್ತು. ಚಿತ್ರದ ಕಂಬಳ ದೃಶ್ಯಗಳಿಗೆ ಈ ಕೋಣವನ್ನೇ ಬಳಸಲಾಗಿತ್ತು, ನಟ ರಿಷಭ್‌ ಶೆಟ್ಟಿಯೊಂದಿಗೆ ಕಾಂತಾರದ ದೃಶ್ಯಗಳಲ್ಲಿ ಮಿಂಚಿದ ಅಪ್ಪು, ಪ್ರೇಕ್ಷಕರ ಮನಸ್ಸಿನಲ್ಲಿ ನೆಲೆಸಿತ್ತು.

ಕರಾವಳಿಯ ವಿವಿಧ ಕಂಬಳ ಕೂಟಗಳಲ್ಲಿ ಅಪ್ಪು ಚಾಂಪಿಯನ್ ಆಗಿತ್ತು. ‘ನೇಗಿಲು ಜೂನಿಯರ್‌’ ವಿಭಾಗದಲ್ಲಿ ಎರಡು ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ, ಕುಂದಾಪುರ ವಿಭಾಗದಲ್ಲಿ ಸತತ ಐದು ವರ್ಷಗಳ ಕಾಲ ಚಾಂಪಿಯನ್‌ ಪಟ್ಟ, ಮತ್ತು ಬೆಂಗಳೂರಿನ ಕಂಬಳದ ‘ಕನೆಹಲಗೆ’ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು, ತನ್ನ ಸಾಮರ್ಥವನ್ನು ತೋರಿಸಿತ್ತು. ಕಂಬಳ ಕ್ಷೇತ್ರದಲ್ಲಿ ಅಪ್ಪು ಒಂದು ದಂತಕತೆಯಾಗಿದೆ.

ಅಪ್ಪುವಿನ ಸಾವು ಕಂಬಳ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಕರಾವಳಿಯ ಕಂಬಳದ  ಚಾಂಪಿಯನ್‌, ತನ್ನ ಓಟದ ಉತ್ಸಾಹ, ಶಕ್ತಿ, ಮತ್ತು ಚೈತನ್ಯದಿಂದ ಎಲ್ಲರ ಮನಗೆದ್ದಿತ್ತು. ಅಪ್ಪುವಿನ ವಿದಾಯ ಕಂಬಳದ ಇತಿಹಾಸದಲ್ಲಿ ಮರೆಯಲಾಗದ ಹೆಸರಾಗಿದೆ. ಅದರ ಸಾಧನೆಗಳು ಶಾಶ್ವತವಾಗಿ ಜನರ ನೆನಪಿನಲ್ಲಿ ಉಳಿಯುತ್ತದೆ.

Exit mobile version