ಇಂಡಸ್ಟ್ರಿಗೆ ರಿಷಬ್‌‌ನ ಕೊಟ್ಟ ಕಾಂತಾರಗೆ 4 ವರ್ಷಗಳ ಹರ್ಷ..!

ಕೈಮುಗಿದು ಭಾವುಕರಾದ ‘ಶಿವ' ಆ ಪ್ರೀತಿ ಎಂದಿಗೂ ಕಮ್ಮಿಯಾಗಿಲ್ಲ

Your paragraph text 2026 10 01T152517.333

ಜಾಗತಿಕ ಮಟ್ಟದಲ್ಲಿ ಕನ್ನಡಿಗರ ಗತ್ತನ್ನು ಎತ್ತಿಹಿಡಿದ ಆ ಡಿವೈನ್ ಮ್ಯಾಜಿಕ್ ನೆನಪಿದೆಯಾ..? ಹೌದು, ಭಾರತೀಯ ಚಿತ್ರರಂಗದ ಇತಿಹಾಸವನ್ನೇ ಉಲ್ಟಾ-ಪಲ್ಟಾ ಮಾಡಿದ ಕಾಂತಾರ ಸಿನಿಮಾ ತೆರೆಕಂಡು ಇಂದಿಗೆ ನಾಲ್ಕು ವರ್ಷ. ದೈವಕೋಲದ ಆ ರೌದ್ರಾವತಾರ, ಶಿವನ ಆ ಅಬ್ಬರ ಇಂದಿಗೂ ಪ್ರತಿಯೊಬ್ಬರ ನರನಾಡಿಯಲ್ಲೂ ರೋಮಾಂಚನ ಉಂಟುಮಾಡುತ್ತಿದೆ. ಇದೇ ಖುಷಿಯಲ್ಲಿ ರಿಷಬ್ ಶೆಟ್ಟಿ ಪೋಸ್ಟ್ ಒಂದನ್ನು ಹಾಕಿ ತೀರಾ ಇಮೋಷನಲ್ ಆಗಿದ್ದಾರೆ. ಹಾಗಾದ್ರೆ ಆ ಪೋಸ್ಟ್‌ನಲ್ಲೇನಿದೆ..? ಇದರ ಫುಲ್‌ ಡಿಟೇಲ್ಸ್‌ ಇಲ್ಲಿದೆ…

2022ರ ಸೆಪ್ಟೆಂಬರ್ 30ರಂದು ಚಿತ್ರಮಂದಿರಗಳಿಗೆ ಅಪ್ಪಳಿಸಿದ ಕಾಂತಾರ-ಒಂದು ದಂತಕಥೆ ಸಿನಿಮಾ ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಹೊಸ ದಾಖಲೆಗಳನ್ನು ಬರೆಯಿತು. ಕೇವಲ ಒಂದು ಪ್ರಾದೇಶಿಕ ಸಿನಿಮಾವಾಗಿ ಶುರುವಾದ ಈ ಚಿತ್ರ, ತನ್ನ ತಾಯಿನೆಲದ ದೈವಾರಾಧನೆ, ರೌದ್ರಾವತಾರದ ತುಳುನಾಡಿನ ಸಂಸ್ಕೃತಿ ಮತ್ತು ಶಿವನ ಅಬ್ಬರದ ಅಭಿನಯದಿಂದ ದೇಶ-ವಿದೇಶಗಳ ಪ್ರೇಕ್ಷಕರನ್ನು ಕಟ್ಟಿಹಾಕಿತು. ಥಿಯೇಟರ್‌ಗಳಲ್ಲಿ ದೈವಕೋಲದ ದೃಶ್ಯಗಳು ಮೂಡಿಬಂದಾಗ ಜನ ಎದ್ದುನಿಂತು ಜೈಕಾರ ಕೂಗಿದ್ದು ಈಗ ಇತಿಹಾಸ. ಈ ದೃಶ್ಯಕಾವ್ಯವು ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ಸುನಾಮಿಯನ್ನೇ ಎಬ್ಬಿಸಿ, ಪ್ರತಿಯೊಬ್ಬ ಸಿನೆಪ್ರೇಮಿಯ ಹೃದಯದಲ್ಲೂ ಶಾಶ್ವತವಾಗಿ ನೆಲೆನಿಂತಿತು.

ಬೆಳ್ಳಿತೆರೆಯ ಮೇಲೆ ಕಾಂತಾರ ಅಬ್ಬರಿಸಿ ನಾಲ್ಕು ವರ್ಷಗಳೇ ಉರುಳಿದ್ದರೂ, ಪ್ರೇಕ್ಷಕರು ಕೊಟ್ಟ ಪ್ರೀತಿಯ ಕಾವು ಮಾತ್ರ ಕಮ್ಮಿಯಾಗಿಲ್ಲ. ಇದೇ ವಿಷಯವನ್ನು ನೆನೆದು ರಿಷಬ್ ಶೆಟ್ಟಿ ಸಕತ್ ಭಾವುಕರಾಗಿದ್ದಾರೆ. “ಕಾಂತಾರ ಅಂದಾಕ್ಷಣ ಅದು ಬರಿ ನಾನೊಂದು ಮಾಡಿದ ಸಿನಿಮಾ ಅಲ್ಲ, ಅದು ನಾನು ಬದುಕಿದ ಜಗತ್ತು, ನನ್ನೊಳಗಿದ್ದ ನಂಬಿಕೆ. ಪ್ರಶಸ್ತಿ, ಮೆಚ್ಚುಗೆಗಳ ಮಹಾಪೂರವೇ ಹರಿದುಬಂದರೂ ನಿಮ್ಮ ಪ್ರೀತಿಗೆ ಯಾವುದೂ ಸಾಟಿಯಿಲ್ಲ. ನನ್ನೀ ಪುಟ್ಟ ಪ್ರಯತ್ನವನ್ನು ಗಡಿದಾಟಿಸಿ, ಪ್ರಪಂಚದ ಮೂಲೆ ಮೂಲೆಗೂ ತಲುಪಿಸಿದ ಪ್ರತಿಯೊಬ್ಬ ಪ್ರೇಕ್ಷಕನಿಗೂ ನಾನು ಸದಾ ಋಣಿ” ಅಂತ ಹೃದಯದಾಳದಿಂದ ಧನ್ಯವಾದ ತಿಳಿಸಿದ್ದಾರೆ.

ತಮ್ಮ ಗೆಲುವಿನ ಶ್ರೇಯಸ್ಸನ್ನು ಇಡೀ ತಂಡಕ್ಕೆ ಹಂಚಿರುವ ರಿಷಬ್, ಕನ್ನಡದ ಹೆಮ್ಮೆಯ ಸಿನಿಮಾವನ್ನು ಜಗತ್ತಿಗೆ ಪರಿಚಯಿಸಲು ನನ್ನ ಜೊತೆ ಹಗಲಿರುಳು ಕಷ್ಟಪಟ್ಟ ಪ್ರತಿಯೊಬ್ಬರಿಗೂ ಶಹಬ್ಬಾಸ್ ಎಂದಿದ್ದಾರೆ. ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ನಿರ್ಮಾಣದಲ್ಲಿ, ಕಿಶೋರ್, ಅಚ್ಯುತ್ ಕುಮಾರ್, ಸಪ್ತಮಿ ಗೌಡ ಸೇರಿದಂತೆ ದೊಡ್ಡ ತಾರಾಗಣವೇ ಜತೆಯಾಗಿ ಸೃಷ್ಟಿಸಿದ ಈ ಮಾಯಾಜಾಲ, ಇಂದಿಗೂ ಇತಿಹಾಸದ ಪುಟಗಳಲ್ಲಿ ಹೊಸ ಭಾಷ್ಯ ಬರೆಯುತ್ತಿದೆ. ಒಟ್ಟಿನಲ್ಲಿ, ಈ ದಂತಕಥೆ ಎಂದೆಂದಿಗೂ ನಿಮ್ಮದೇ ಅಂತ ರಿಷಬ್ ಶೆಟ್ಟಿ ಪ್ರೇಕ್ಷಕರನ್ನು ಮತ್ತೆ ತಮ್ಮ ಎದೆಗಪ್ಪಿಕೊಂಡಿದ್ದಾರೆ.

 

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version