ಬೆಂಗಳೂರು: ಬೆಳ್ಳಿತೆರೆಯಲ್ಲಿ ಹೊಸ ಇತಿಹಾಸ ಬರೆದಿದ್ದ ‘ಕಾಂತಾರ ಚಾಪ್ಟರ್ 1’, ಈಗ ಕಿರುತೆರೆಯಲ್ಲೂ ತನ್ನ ಅಧಿಪತ್ಯ ಸ್ಥಾಪಿಸಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಈ ಬಹುನಿರೀಕ್ಷಿತ ಚಿತ್ರದ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದು, ಅತ್ಯುನ್ನತ ಟಿಆರ್‌ಪಿ (TRP) ರೇಟಿಂಗ್ ಪಡೆಯುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಕಳೆದ ಜನವರಿ 24, 2026ರಂದು ಸಂಜೆ 7 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಈ ಚಿತ್ರದ ಪ್ರೀಮಿಯರ್ ಪ್ರಸಾರವಾಗಿತ್ತು. ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಚಿತ್ರವು ಒಟ್ಟಾರೆ (ನಗರ + ಗ್ರಾಮೀಣ) 11.56 TVR ಗಳಿಸಿದೆ. ಕೇವಲ ನಗರ ಪ್ರದೇಶವನ್ನೇ ಪರಿಗಣಿಸಿದರೆ 9.30 TVR ರೇಟಿಂಗ್ ದಾಖಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರೈಮ್-ಟೈಮ್‌ನಲ್ಲಿ ಕನ್ನಡ ಸಿನಿಮಾವೊಂದು ಈ ಮಟ್ಟದ ರೇಟಿಂಗ್ ಪಡೆಯುವುದು ಅತ್ಯಂತ ವಿರಳವಾಗಿದ್ದು, ಕಾಂತಾಂರ-1 ಗೆ ಈ ಮಟ್ಟದ ಟಿಆರ್‌ಪಿ ನೋಡಿ ಸಿನಿತಂಡ ಸಂತಸ ವ್ಯಕ್ತಪಡಿಸಿದೆ.
ಅಕ್ಟೋಬರ್ 2, 2025 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ‘ಕಾಂತಾರ ಚಾಪ್ಟರ್ 1’, ತನ್ನ ಅದ್ಭುತ ಮೇಕಿಂಗ್ ಮತ್ತು ಕಥಾಹಂದರದಿಂದ ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಜೈಕಾರ ಹಾಕಿಸಿಕೊಂಡಿತ್ತು. ಕದಂಬರ ಕಾಲದ ಹಿನ್ನೆಲೆ ಹಾಗೂ ಸಾಂಸ್ಕೃತಿಕ ಬೇರುಗಳ ಕಥೆಯನ್ನು ಹೊಂದಿದ್ದ ಈ ಚಿತ್ರ, ಬೆಳ್ಳಿತೆರೆಯಲ್ಲಿ ನೂರಾರು ಕೋಟಿ ಕಲೆಕ್ಷನ್ ಮಾಡಿತ್ತು. ಈಗ ಅದೇ ಯಶಸ್ಸು ಕಿರುತೆರೆಯಲ್ಲೂ ಮುಂದುವರಿದಿದೆ.
ರಿಷಬ್ ಶೆಟ್ಟಿ ಅವರ ಅದ್ಭುತ ಲೇಖನ ಮತ್ತು ನಿರ್ದೇಶನಕ್ಕೆ ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಜೀವ ತುಂಬಿದೆ. ಅರವಿಂದ್ ಎಸ್. ಕಶ್ಯಪ್ ಅವರ ಛಾಯಾಗ್ರಹಣವು ದೃಶ್ಯ ವೈಭವ ಕಣ್ತುಂಬಿಕೊಳ್ಳುವಂತೆ ಮಾಡಿದೆ. ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಿಸಿರುವುದು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
‘ಕಾಂತಾರ-1’ ಕೇವಲ ಒಂದು ಸಿನಿಮಾವಾಗಿ ಉಳಿಯದೆ ಒಂದು ಸಾಂಸ್ಕೃತಿಕ ಭಾವನೆಯಾಗಿದೆ. ಚಿತ್ರಮಂದಿರದಲ್ಲಿ ನೋಡಿದ್ದರೂ ಸಹ, ಮನೆಯಲ್ಲಿ ಕುಟುಂಬ ಸಮೇತ ಕುಳಿತು ವೀಕ್ಷಿಸುವ ಪ್ರೇಕ್ಷಕರ ಸಂಖ್ಯೆ ಹೆಚ್ಚಿರುವುದು ಈ ರೇಟಿಂಗ್‌ಗೆ ಪ್ರಮುಖ ಕಾರಣ. ಜೀ ಕನ್ನಡ ವಾಹಿನಿಯ ಪ್ರಚಾರ ತಂತ್ರಗಳು ಕೂಡ ಈ ಯಶಸ್ಸಿನಲ್ಲಿ ದೊಡ್ಡ ಪಾತ್ರ ವಹಿಸಿವೆ.
