4ನೇ ಶತಮಾನದಲ್ಲೇ ಪ್ಲಾಸ್ಟಿಕ್ ಕ್ಯಾನ್? ಕಾಂತಾರ ಚಾಪ್ಟರ್‌ 1ನ ಎಡವಟ್ಟು ವೈರಲ್‌

Untitled design (51)

ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದಲ್ಲಿ ಮೂಡಿಬಂದಿರುವ, ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ಕಾಂತಾರ ಚಾಪ್ಟರ್‌ 1 ಕನ್ನಡ ಚಿತ್ರರಂಗದ ಹೆಮ್ಮೆಯನ್ನು ಮತ್ತೊಮ್ಮೆ ಎತ್ತಿ ಹಿಡಿದಿದೆ. 2022ರಲ್ಲಿ ತೆರೆಕಂಡ ಕಾಂತಾರ ಚಿತ್ರದ ಪ್ರೀಕ್ವೆಲ್‌ ಆಗಿರುವ ಈ ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸಿದೆ.

ರಿಲೀಸ್‌ ಆಗಿ ಕೇವಲ 10 ದಿನಗಳಲ್ಲಿ 500 ಕೋಟಿ ರೂ.ಗಿಂತಲೂ ಅಧಿಕ ಗಳಿಕೆ ಮಾಡಿರುವ ಈ ಚಿತ್ರವು ಇನ್ನೂ ತನ್ನ ಗಳಿಕೆಯ ಓಟವನ್ನು ಕಡಿಮೆಗೊಳಿಸಿಲ್ಲ.. ಕನ್ನಡದ ಜೊತೆಗೆ ಹಿಂದಿಯಲ್ಲೂ 100 ಕೋಟಿ ರೂ. ಕ್ಲಬ್‌ ಸೇರಿದ್ದು, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲೂ ಉತ್ತಮ ಕಲೆಕ್ಷನ್‌ ಮಾಡುತ್ತಿದೆ.

ಚಿತ್ರದ ಬ್ರಹ್ಮಕಲಶ ವಿಡಿಯೊ ಹಾಡು ಈಗಾಗಲೇ ರಿಲೀಸ್‌ ಆಗಿದ್ದು, ಲಕ್ಷಗಟ್ಟಲೆ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ಚಿತ್ರವು ಕರಾವಳಿಯ ಕದಂಬ ರಾಜಮನೆತನದ ಕಾಲಘಟ್ಟದಲ್ಲಿ ನಡೆಯುವ ಕಾಲ್ಪನಿಕ ಕಥೆಯನ್ನು 4ನೇ ಶತಮಾನದ ತಾಜಾತನದೊಂದಿಗೆ ತೆರೆಯ ಮೇಲೆ ತಂದಿದೆ. ಚಿತ್ರದ ಸಿನಿಮಾಟೋಗ್ರಫಿ, ಸಂಗೀತ, ಹಿನ್ನೆಲೆ ಸಂಗೀತ, ರಿಷಬ್‌ ಶೆಟ್ಟಿಯವರ ನಟನೆ ಸೇರಿದಂತೆ ಪ್ರತಿಯೊಂದು ಅಂಶವೂ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದೆ. ಆದರೆ, ಈ ಎಲ್ಲಾ ಸಾಧನೆಗಳ ನಡುವೆ ಚಿತ್ರತಂಡದ ಸಣ್ಣ ಎಡವಟ್ಟೊಂದು ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಎಡವಟ್ಟಿನ ಕಥೆ

ಕಾಂತಾರ ಚಾಪ್ಟರ್‌ 1ನ ಕಥೆ 4ನೇ ಶತಮಾನದಲ್ಲಿ ಸಾಗುತ್ತದೆ. ಕಥೆಯ ಒಂದು ಪ್ರಮುಖ ದೃಶ್ಯವಾದ ಬ್ರಹ್ಮಕಲಶ ಸಮಾರಂಭವನ್ನು ಚಿತ್ರದ ಒಂದು ಹಾಡಿನಲ್ಲಿ ತೋರಿಸಲಾಗಿದೆ. ಈ ದೃಶ್ಯದಲ್ಲಿ ಸಮಾರಂಭಕ್ಕೆ ಆಗಮಿಸಿದವರು ಊಟಕ್ಕೆ ಕುಳಿತಿರುವ ಸನ್ನಿವೇಶವಿದೆ. ಆದರೆ, ಈ ದೃಶ್ಯದಲ್ಲಿ ಕುಳಿತವರ ಹಿಂಭಾಗದಲ್ಲಿ ಒಂದು ಪ್ಲಾಸ್ಟಿಕ್‌ ಕ್ಯಾನ್‌ ಕಾಣಿಸಿಕೊಂಡಿದೆ. ಬ್ರಹ್ಮಕಲಶ ಹಾಡಿನಲ್ಲಿ ಈ ಕ್ಯಾನ್‌ ಸ್ಪಷ್ಟವಾಗಿ ಗೋಚರಿಸುತ್ತದೆ.

ಪ್ಲಾಸ್ಟಿಕ್‌ ಎಂಬುದು 20ನೇ ಶತಮಾನದ ಆವಿಷ್ಕಾರವಾಗಿದ್ದು, 4ನೇ ಶತಮಾನದ ಕಥೆಯಲ್ಲಿ ಇದರ ಉಪಸ್ಥಿತಿಯು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮತ್ತು ಟ್ರೋಲ್‌ಗೆ ಕಾರಣವಾಗಿದೆ. ಕೆಲವರು ಈ ಎಡವಟ್ಟನ್ನು 2019ರಲ್ಲಿ ಪ್ರಸಾರವಾದ ಗೇಮ್‌ ಆಫ್‌ ಥ್ರೋನ್ಸ್‌ ಧಾರಾವಾಹಿಯ ಒಂದು ದೃಶ್ಯದೊಂದಿಗೆ ಹೋಲಿಸಿದ್ದಾರೆ. ಆ ಧಾರಾವಾಹಿಯಲ್ಲಿ ಮಧ್ಯಕಾಲೀನ ಕಾಲಘಟ್ಟದ ದೃಶ್ಯದಲ್ಲಿ ಸ್ಟಾರ್‌ಬಕ್ಸ್‌ ಕಾಫಿ ಕಪ್‌ ಕಾಣಿಸಿಕೊಂಡಿತ್ತು. ಇದು ಜಾಗತಿಕವಾಗಿ ಟ್ರೋಲ್‌ಗೆ ಒಳಗಾಗಿತ್ತು. ಕಾಂತಾರದ ಈ ಎಡವಟ್ಟನ್ನು ಕಂಡು ಕೆಲವರು “4ನೇ ಶತಮಾನದಲ್ಲೂ ಪ್ಲಾಸ್ಟಿಕ್‌ ಇತ್ತೇ?” ಎಂದು ಲೇವಡಿ ಮಾಡಿದರೆ, ಮತ್ತೆ ಕೆಲವರು ಇದನ್ನು ಚಿತ್ರತಂಡದ ಸಣ್ಣ ತಪ್ಪು ಎಂದು ಕಡೆಗಣಿಸಿದ್ದಾರೆ.

Exit mobile version