ನಟ ರಿಷಬ್ ಶೆಟ್ಟಿ ಅವರು ನಟಿಸಿ ನಿರ್ದೇಶಿಸಿದ ‘ಕಾಂತಾರ ಚಾಪ್ಟರ್ 1’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸುತ್ತಿದ್ದು, ಚಿತ್ರದ ಒಟಿಟಿ ರಿಲೀಸ್ ದಿನಾಂಕವೂ ಅಧಿಕೃತವಾಗಿ ಘೋಷಿಸಲಾಗಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಈ ಅದ್ದೂರಿ ಚಿತ್ರವನ್ನು ಅಕ್ಟೋಬರ್ 31ರಂದು ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದೆ.
ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಗೊಳ್ಳಲಿದ್ದು, ಹಿಂದಿ ವರ್ಶನ್ ಕೆಲವು ದಿನಗಳ ಬಳಿಕ ಲಭ್ಯವಾಗಲಿದೆ ಎಂದು ಪ್ರೈಮ್ ವಿಡಿಯೋ ಘೋಷಿಸಿದೆ. ಅಕ್ಟೋಬರ್ 31ರಂದು, ಇಂಗ್ಲಿಷ್ ವರ್ಶನ್ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಚಿತ್ರದ ಒಟಿಟಿ ಹಕ್ಕುಗಳನ್ನು ಅಮೇಜಾನ್ ಪ್ರೈಮ್ ವಿಡಿಯೊ ಬರೋಬ್ಬರಿ ₹125 ಕೋಟಿ ರೂ.ಗೆ ಖರೀದಿಸಿದೆ ಎಂಬ ಮಾಹಿತಿ ಲಭ್ಯವಿದೆ. ಸಿನಿಮಾ ಬಿಡುಗಡೆ ಆಗುವ ಮೊದಲೇ ಒಟಿಟಿ ಸ್ಟ್ರೀಮಿಂಗ್ ಕುರಿತ ಒಪ್ಪಂದ ಪೂರ್ಣಗೊಂಡಿತ್ತು. ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿರುವ ಚಿತ್ರ ಇದೀಗ ಡಿಜಿಟಲ್ ವೇದಿಕೆಯಲ್ಲಿ ಹೊಸ ಮೈಲುಗಲ್ಲು ನಿರ್ಮಿಸಲಿದೆ ಎಂಬ ನಿರೀಕ್ಷೆ ಇದೆ.
ಅಕ್ಟೋಬರ್ 2ರಂದು ತೆರೆಕಂಡ ಈ ಚಿತ್ರ ಈಗಾಗಲೇ ₹800 ಕೋಟಿ ರೂ. ಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ. ಈ ವರ್ಷ ಅತ್ಯಧಿಕ ಗಳಿಕೆ ಮಾಡಿದ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಕಾಂತಾರ ಚಾಪ್ಟರ್ 1, ಕನ್ನಡ ಮತ್ತು ಹಿಂದಿ ವರ್ಶನ್‌ಗಳಲ್ಲಿ ₹200 ಕೋಟಿ ರೂ. ಕ್ಲಬ್ ಸೇರುವ ಮೂಲಕ ಹೊಸ ಇತಿಹಾಸ ಬರೆದಿದೆ.
ರಿಷಬ್ ಶೆಟ್ಟಿ ನಾಯಕ ‘ಬೆರ್ಮೆ’ ಪಾತ್ರದಲ್ಲಿ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ನಾಯಕಿ ರುಕ್ಮಿಣಿ ವಸಂತ್ ರಾಜಕುಮಾರಿ ಕನಕವತಿಯ ಪಾತ್ರದಲ್ಲಿ ಮಿಂಚಿದ್ದಾರೆ. ಜೊತೆಗೆ ಜಯರಾಮ್, ಗುಲ್ಶನ್ ದೇವಯ್ಯ, ರಾಕೇಶ್ ಪೂಜಾರಿ ಮೊದಲಾದವರು ನಟಿಸಿದ್ದಾರೆ. ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಚಿತ್ರ ಈಗ ಒಟಿಟಿಯಲ್ಲೂ ಹೊಸ ದಾಖಲೆ ಸೃಷ್ಟಿಸಲು ಸಿದ್ಧವಾಗಿದೆ. ಪ್ರೈಮ್ ವಿಡಿಯೊದಲ್ಲಿ ಅಕ್ಟೋಬರ್ 31ರಿಂದ ಸಿನಿಮಾ ಲಭ್ಯವಿದೆ.
